Kerala: ಕೇರಳ ಇನ್ಮುಂದೆ ಕೇರಳಂ: ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರದಿಂದ ಅನುಮೋದನೆ
ಕೇರಳ ರಾಜ್ಯದ ಹೆಸರನ್ನು ಬದಲಾವಣೆ ಮಾಡಬೇಕು ಎನ್ನುವ ಕೇರಳಿಗರ ಬಹುದಿನಗಳ ಬೇಡಿಕೆ ಈಡೇರಿದೆ. ಕೇರಳ ಎನ್ನುವ ಬದಲು ಕೇರಳಂ ಎಂದು ಹೆಸರು ಬದಲಾವಣೆ ಮಾಡಬೇಕು ಎಂದು ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ ಮಾಡಲಾಗಿತ್ತು. ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿತ್ತು. ಇದೀಗ ಕೇರಳ ರಾಜ್ಯದ ಹೆಸರನ್ನು ಕೇರಳಂ ಎಂದು ಬದಲಾವಣೆ ಮಾಡುವುದಕ್ಕೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ.
ಕೇರಳ ರಾಜ್ಯದ ಹೆಸರನ್ನು ಕೇರಳದಲ್ಲಿ ಇಂದಿಗೂ ಕೇರಳಂ ಎಂದೇ ಕರೆಯುವುದು ವಾಡಿಕೆ. ಆದರೆ, ದಾಖಲೆಗಳಲ್ಲಿ ಹಾಗೂ ಅಧಿಕೃತವಾಗಿ ಕೇರಳ ಎಂದು ನಮೂದಿಸಲಾಗುತ್ತಿತ್ತು. ಕೇರಳದ ಹೆಸರನ್ನು ಕೇರಳಂ ಎಂದು ಬದಲಾಯಿಸಬೇಕು ಎನ್ನುವುದು ಮಲಯಾಳಿಗಳ ಬಹು ವರ್ಷಗಳ ಬೇಡಿಕೆಯಾಗಿತ್ತು. ಇದೀಗ ಕೇರಳ ವಿಧಾನಸಭೆ ಚುನಾವಣೆ 2026ರ ಸಮೀಪದಲ್ಲೇ ಮಲಯಾಳಿಗರಿಗೆ ಗುಡ್‌ನ್ಯೂಸ್ ಸಿಕ್ಕಿದೆ.

ಮಂಗಳವಾರ ಫೆಬ್ರವರಿ 24, 2026ರಂದು ಕೇಂದ್ರ ಸಚಿವ ಸಂಪುಟವು ಕೇರಳ ರಾಜ್ಯವನ್ನು ಇನ್ಮುಂದೆ ಕೇರಳಂ ಎಂದು ಮರುನಾಮಕರಣ ಮಾಡಲು ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಅವರು ಘೋಷಿಸಿದ್ದಾರೆ. ಜೂನ್ 24, 2024 ರಂದು, ಕೇರಳ ವಿಧಾನಸಭೆಯು ಕೇಂದ್ರ ಸರ್ಕಾರವನ್ನು ರಾಜ್ಯವನ್ನು ಕೇರಳಂ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತ್ತು.
ಕೇರಳದಿಂದ ಕೇರಳಂ ಹೆಸರು ಬದಲಾವಣೆ ಯಾಕೆ
ಇನ್ನು ಬಹು ವರ್ಷಗಳ ಬೇಡಿಕೆಗೆ ಇದೀಗ ಮನ್ನಣೆ ಸಿಕ್ಕಿದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ಮುನ್ನವೇ ಈ ನಿರ್ಧಾರವನ್ನು ಕೇಂದ್ರ ಸರ್ಕಾರವು ತೆಗೆದುಕೊಂಡಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ಭೇಟಿ ನೀಡುತ್ತಿರುವ ಸಂದರ್ಭದಲ್ಲೇ ಈ ಗುಡ್‌ನ್ಯೂಸ್ ಕೇರಳಿಗರಿಗೆ ನೀಡಲಾಗಿದೆ.
ಇನ್ನು ಕೇರಳದ ಮೊದಲ ನಿರ್ಣಯವನ್ನು ಪರಿಶೀಲಿಸಿದ ಗೃಹ ಸಚಿವಾಲಯವು ಕೆಲವು ತಾಂತ್ರಿಕ ಬದಲಾವಣೆಗಳನ್ನು ಸೂಚಿಸಿದ್ದರಿಂದ ಕೇರಳ ವಿಧಾನಸಭೆ ಎರಡನೇ ಬಾರಿಗೆ ನಿರ್ಣಯವನ್ನು ಅಂಗೀಕರಿಸಿತ್ತು. ನಿರ್ಣಯವನ್ನು ಮಂಡಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಂವಿಧಾನದ ಎಂಟನೇ ವೇಳಾಪಟ್ಟಿಯಲ್ಲಿ ಸೇರಿಸಲಾದ ಎಲ್ಲಾ ಭಾಷೆಗಳಲ್ಲಿ ದಕ್ಷಿಣ ರಾಜ್ಯದ ಹೆಸರನ್ನು ಕೇರಳದಿಂದ ಕೇರಳಂ ಎಂದು ಬದಲಾಯಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
ನಿರ್ಣಯವನ್ನು ಮಂಡಿಸಿದ ಮುಖ್ಯಮಂತ್ರಿ, ರಾಜ್ಯವನ್ನು ಮಲಯಾಳಂನಲ್ಲಿ 'ಕೇರಳಂ' ಎಂದು ಕರೆಯಲಾಗುತ್ತದೆ ಮತ್ತು ಮಲಯಾಳಂ ಮಾತನಾಡುವ ಸಮುದಾಯಗಳಿಗೆ ಸಂಯುಕ್ತ ಕೇರಳವನ್ನು ರಚಿಸುವ ಬೇಡಿಕೆ ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದ ಸಮಯದಿಂದ ಬಲವಾಗಿ ಹೊರಹೊಮ್ಮಿದೆ ಎಂದು ಅಭಿಪ್ರಾಯಪಟ್ಟಿದ್ದರು.












Click it and Unblock the Notifications