ಕೇರಳದ ಮೊದಲ ಟ್ರಾನ್ಸ್‌ಜೆಂಡರ್ ವಕೀಲರು ಇವರು, ಇಲ್ಲಿದೆ ವಿವರ
ಬಾರ್ ಕೌನ್ಸಿಲ್ ಆಫ್ ಇಂಡಿಯಾ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕೇರಳದ ಬಾರ್ ಎನ್‌ರೋಲ್‌ಮೆಂಟ್ ಪ್ರಮಾಣಪತ್ರವನ್ನು ಪಡೆದುಕೊಂಡ 1,500ಕ್ಕೂ ಹೆಚ್ಚು ಕಾನೂನು ಪದವೀಧರರಲ್ಲಿ ಪದ್ಮ ಲಕ್ಷ್ಮಿ ಅವರು ಒಬ್ಬರು.
ತಿರುವನಂತಪುರಂ, ಮಾರ್ಚ್ 20: ಕೇರಳದಲ್ಲಿ ಮೊದಲ ಟ್ರಾನ್ಸ್‌ಜೆಂಡರ್ ವಕೀಲರಾಗಿ ಪದ್ಮಾಲಕ್ಷ್ಮೀ ಅವರು ರಾಜ್ಯದ ಬಾರ್ ಕೌನ್ಸಿಲ್‌ನಲ್ಲಿ ನೋಂದಣಿ ಮಾಡಿಸಿದ್ದಾರೆ.
ರಾಜ್ಯದ ಕೈಗಾರಿಕೆ ಸಚಿವ ಪಿ ರಾಜೀವ್ ಅವರು ಮೊದಲ ಟ್ರಾನ್ಸ್‌ಜೆಂಡರ್ ವಕೀಲ ಛಾಯಾಚಿತ್ರವನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಅವರನ್ನು ಅಭಿನಂದಿಸಿದ್ದಾರೆ.
ಬಾರ್ ಕೌನ್ಸಿಲ್ ಆಫ್ ಇಂಡಿಯಾ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕೇರಳದ ಬಾರ್ ಎನ್‌ರೋಲ್‌ಮೆಂಟ್ ಪ್ರಮಾಣಪತ್ರವನ್ನು ಪಡೆದುಕೊಂಡ 1,500ಕ್ಕೂ ಹೆಚ್ಚು ಕಾನೂನು ಪದವೀಧರರಲ್ಲಿ ಪದ್ಮ ಲಕ್ಷ್ಮಿ ಅವರು ಒಬ್ಬರು. ಪದ್ಮಾಲಕ್ಷ್ಮೀ ಎರ್ನಾಕುಲಂ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಸಚಿವ ಪಿ. ರಾಜೀವ್ ಅವರು ಹೆಚ್ಚು ಪ್ರೋತ್ಸಾಹದಾಯಕವಲ್ಲದ ಈ ಸಮಾಜವನ್ನು ಎದುರಿಸಿ ಈ ಯುವ ವಕೀಲರು ತನಗಾಗಿ ದಾರಿ ಮಾಡಿಕೊಂಡ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಕೆಲವೊಂದು ಸಂಗತಿಗಳಲ್ಲಿ ಮೊದಲಿಗರಾಗುವುದು ಯಾವಾಗಲೂ ಇತಿಹಾಸದಲ್ಲಿ ಕಠಿಣ ಸಾಧನೆಯಾಗಿದೆ. ಜೀವನದ ಎಲ್ಲಾ ಅಡೆತಡೆಗಳನ್ನು ಮೀರಿ ಕೇರಳದ ಮೊದಲ ಟ್ರಾನ್ಸ್‌ಜೆಂಡರ್ ವಕೀಲರಾಗಿ ದಾಖಲಾದ ಪದ್ಮಾಲಕ್ಷ್ಮೀ ಅವರಿಗೆ ಅಭಿನಂದನೆಗಳು ಸಲ್ಲಿಸಿದ್ದಾರೆ.
ಗುರಿಯ ಹಾದಿಯಲ್ಲಿ ಯಾವುದೇ ಸರಳ ದಾರಿ ಇರಲ್ಲ. ಅಡೆತಡೆಗಳು ಅನಿವಾರ್ಯವಾಗಲಿದೆ. ನಿಮ್ಮನ್ನು ತಡೆಯಲು ಮತ್ತು ನಿರುತ್ಸಾಹಗೊಳಿಸಲು ಜನರಿರುತ್ತಾರೆ. ಆದರೆ ಪದ್ಮಾಲಕ್ಷ್ಮೀ ಇದೆಲ್ಲವನ್ನೂ ಮೀರಿ ಕಾನೂನು ಇತಿಹಾಸದಲ್ಲಿ ತನ್ನ ಹೆಸರನ್ನು ಬರೆದಿದ್ದಾರೆ ಎಂದು ರಾಜೀವ್ ಮಲಯಾಳಂನಿಂದ ಇಂಗ್ಲಿಷ್‌ಗೆ ಅನುವಾದಿಸಿದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಪದ್ಮಾ ಲಕ್ಷ್ಮಿ ಅವರ ಜೀವನವು ಟ್ರಾನ್ಸ್ಜೆಂಡರ್ ವಲಯದಿಂದ ಹೆಚ್ಚಿನ ಜನರನ್ನು ವಕೀಲಿಕೆಗೆ ಪ್ರವೇಶಿಸಲು ಪ್ರೇರೇಪಿಸಲಿ ಎಂದು ಅವರು ಬರೆದಿದ್ದು ಅವರ ಹೃದಯಸ್ಪರ್ಶಿ ಪೋಸ್ಟ್‌ನಿಂದ ಬಳಕೆದಾರರು ಹರ್ಷಗೊಂಡಿದ್ದಾರೆ. ಅಲ್ಲದೆ ಅವರಲ್ಲಿ ಹಲವರು ಕೆಂಪು ಹೃದಯದ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ. "ಅಭಿನಂದನೆಗಳು ಮತ್ತು ವಕೀಲ ಸಮುದಾಯಕ್ಕೆ ಸ್ವಾಗತ" ಎಂದು ಒಬ್ಬ ಬಳಕೆದಾರರು ಸಚಿವರ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.
ಭಾರತದ ಮೊದಲ ಟ್ರಾನ್ಸ್‌ಜೆಂಡರ್ ನ್ಯಾಯಾಧೀಶರಾದ ಜೋಯಿತಾ ಮೊಂಡಲ್ ನಂತರ ಪದ್ಮಾಲಕ್ಷ್ಮೀ ಅವರ ಸಾಧನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸಿಸಲಾಗುತ್ತಿದೆ. ಅವರು 2017 ರಲ್ಲಿ ಪಶ್ಚಿಮ ಬಂಗಾಳದ ಇಸ್ಲಾಂಪುರದ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.
2018 ರ ಆರಂಭದಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಟ್ರಾನ್ಸ್‌ಜೆಂಡರ್ ಕಾರ್ಯಕರ್ತೆ ವಿದ್ಯಾ ಕಾಂಬ್ಳೆ ಅವರನ್ನು ಸದಸ್ಯ ನ್ಯಾಯಾಧೀಶರಾಗಿ ನೇಮಿಸಲಾಯಿತು. ಅದೇ ವರ್ಷ ದೇಶಕ್ಕೆ ಮೂರನೇ ಲಿಂಗತ್ವ ಅಲ್ಪಸಂಖ್ಯಾತ ನ್ಯಾಯಾಧೀಶರಾದ ಸ್ವಾತಿ ಬಿಧಾನ್ ಬರುವಾ ಅವರು ಗುವಾಹಟಿಯಿಂದ ಕಂಡು ಬಂದರು.
ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವನ್ನು ಮುಖ್ಯವಾಹಿನಿಯ ಸಮಾಜಕ್ಕೆ ಸೇರಿಸುವ ನಿಟ್ಟಿನಲ್ಲಿ ಸತ್ಯಶ್ರೀ ಶರ್ಮಿಳಾ ಅವರು ಭಾರತದ ಮೊದಲ ಟ್ರಾನ್ಸ್‌ಜೆಂಡರ್ ವಕೀಲರಾದರು. ತಮಿಳುನಾಡಿನಲ್ಲಿ ಶರ್ಮಿಳಾ ಅವರು ಲಿಂಗದ ಕಾರಣಕ್ಕಾಗಿ ಚಿತ್ರಹಿಂಸೆ ಮತ್ತು ನಿಂದನೆಗೆ ಒಳಗಾಗಿ ಕಠಿಣ ಹಾದಿಯ ಮೂಲಕ ಈ ಸಾಧನೆ ಮಾಡಿದ್ದರು.
ಇಂದು, ನಾನು ತಮಿಳುನಾಡು ಮತ್ತು ಪುದುಚೇರಿಯ ಬಾರ್ ಕೌನ್ಸಿಲ್‌ನಲ್ಲಿ ನನ್ನ ಹೆಸರನ್ನು ನೋಂದಾಯಿಸಿದ್ದೇನೆ. ಈ ಮೂಲಕ ಭಾರತದ ಮೊದಲ ಟ್ರಾನ್ಸ್‌ಜೆಂಡರ್ ವಕೀಲೆಯಾಗಿದ್ದೇನೆ. ಇದಕ್ಕಾಗಿ ನನ್ನ ಜೀವನದಲ್ಲಿ ನಾನು ಸಾಕಷ್ಟು ಹೋರಾಟ ಮಾಡಿದ್ದೇನೆ" ಎಂದು ಅವರು ಅದೇ ವೇಳೆ ತಿಳಿಸಿದ್ದರು.












Click it and Unblock the Notifications