Kerala bypoll: ಹಣ, ಜನಬಲವಿದ್ದರೂ ಠೇವಣಿ ಕಳೆದುಕೊಂಡ ಬಿಜೆಪಿ
ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ವಿಧಾನಸಭಾ ಉಪ ಚುನಾವಣೆಯ ಫಲಿತಾಂಶ ನಿನ್ನೆ (ಸೆ 8) ಹೊರಬಿದ್ದಿತ್ತು. ಬಿಜೆಪಿ ಮೈತ್ರಿಕೂಟ ಮೂರು ಸ್ಥಾನದಲ್ಲಿ ಗೆದ್ದರೆ, ಗಮನಾರ್ಹ ವಿಚಾರವೇನಂದರೆ ಕೆಲವು ದಿನಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದ ಇಂಡಿಯಾ ಮೈತ್ರಿಕೂಟ ನಾಲ್ಕು ಸ್ಥಾನವನ್ನು ಗೆದ್ದಿರುವುದು.
ಉತ್ತರ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ಸೋಲು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆದ್ದಿದ್ದ ಸ್ಥಾನವನ್ನು ತೃಣಮೂಲ ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇನ್ನೊಂದು, ಕೇರಳದ ಪುತ್ತುಪಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಾಂಡಿ ಉಮ್ಮನ್ ಗೆಲುವು ಕಂಡಿದ್ದಾರೆ. ಅನುಕಂಪದ ಆಧಾರದ ಮೇಲೆ ಕಾಂಗ್ರೆಸ್ ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿತ್ತು.

ಆದರೆ, ಇಲ್ಲಿ ಬಿಜೆಪಿಯ ಹೀನಾಯ ಪ್ರದರ್ಶನ ಹಲವು ರಾಜಕೀಯ ಸಮೀಕರಣಕ್ಕೆ ನಾಂದಿ ಹಾಡಿದೆ. ಬಿಜೆಪಿಯ ಅಭ್ಯರ್ಥಿ ಮತ್ತು ಕೊಟ್ಟಾಯಂ ಜಿಲ್ಲಾ ಕಾರ್ಯದರ್ಶಿ ಜಿ ಲಿಜಿನ್ ಲಾಲ್ ಕೇವಲ ಶೇ. 5.02 ಮತಗಳನ್ನು ಪಡೆದು ಮುಖಭಂಗ ಅನುಭವಿಸಿದ್ದಾರೆ. ವಿಜೇತ ಅಭ್ಯರ್ಥಿ ಚಾಂಡಿ ಉಮ್ಮನ್ ಶೇ. 61.38% ಮತ್ತು ಸಿಪಿಐ(ಎಂ) ನ ಜೈಕ್ ಸಿ ಥಾಮಸ್ ಶೇ. 32.49% ಮತಗಳನ್ನು ಪಡೆದರು.
2011 ರಿಂದ ಕ್ಷೇತ್ರದಲ್ಲಿ ಬಿಜೆಪಿಯ ಅತ್ಯಂತ ಕಳಪೆ ಪ್ರದರ್ಶನ ಇದಾಗಿದೆ. ಲಿಜಿನ್ ಲಾಲ್ ಕೇವಲ 6,558 ಮತಗಳನ್ನು ಪಡೆದರು. ಚಾಂಡಿ ಉಮ್ಮನ್ 80,144, ಜೈಕ್ ಸಿ ಥಾಮಸ್ 42,425 ಮತಗಳನ್ನು ಪಡೆದಿದ್ದಾರೆ. ಇಂಡಿಯಾ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದ ನಂತರ ನಡೆದ ಉಪ ಚುನಾವಣೆ ಇದಾಗಿರುವುದರಿಂದ ಫಲಿತಾಂಶದ ಮೇಲೆ ಎಲ್ಲರ ಕಣ್ಣಿತ್ತು. ಕಾಂಗ್ರೆಸ್ ಮತ್ತು ಕಮ್ಯೂನಿಸ್ಟರ ಸಿದ್ದಾಂತಗಳನ್ನು ಇಟ್ಟುಕೊಂಡು ಬಿಜೆಪಿ ಇಲ್ಲಿ ಚುನಾವಣೆ ಎದುರಿಸಿತ್ತು.

ಪುತ್ತುಪಲ್ಲಿ ಕ್ಷೇತ್ರದಲ್ಲಿ ಕ್ರಿಶ್ಚಿಯನ್ ಸಮುದಾಯ
ಪುತ್ತುಪಲ್ಲಿ ಕ್ಷೇತ್ರದಲ್ಲಿ ಕ್ರಿಶ್ಚಿಯನ್ ಸಮುದಾಯವನ್ನು ಗುರಿಯಾಗಿರಿಸಿಕೊಂಡು ಬಿಜೆಪಿ ಚುನಾವಣಾ ಪ್ರಚಾರವನ್ನು ನಡೆಸಿತ್ತು. ಆದಾಗ್ಯೂ, ಮಣಿಪುರದಲ್ಲಿನ ಹಿಂಸಾಚಾರ ಕ್ರಿಶ್ಚಿಯನ್ ಮತದಾರರನ್ನು ಆಕರ್ಷಿಸುವಲ್ಲಿ ವಿಫಲವಾಯಿತು ಎಂದು ವ್ಯಾಖ್ಯಾನಿಸಲಾಗುತ್ತಿದೆ. ಇದರ ಜೊತೆಗೆ, ಭಾವನಾತ್ಮಕವಾಗಿಯೂ ಬಿಜೆಪಿ ಪ್ರಚಾರದಲ್ಲಿ ತೊಡಗಿಸಿಕೊಂಡಿತು.
ಹಿಂದೂ ದೇವರು ಗಣೇಶನಿಗೆ ಸಂಬಂಧಿಸಿದಂತೆ ಸ್ಪೀಕರ್ ಎ ಎನ್ ಶಂಸೀರ್ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸುತ್ತಾ ಬಿಜೆಪಿ, ಸಿಪಿಐ(ಎಂ) ವಿರುದ್ದ ಪ್ರಚಾರವನ್ನು ನಡೆಸಿತ್ತು. ಆದರೆ, ಬಿಜೆಪಿಯ ಈ ಪ್ರಚಾರ ಕಾಂಗ್ರೆಸ್ಸಿಗೆ ಹೆಚ್ಚಿನ ಲಾಭ ತಂದುಕೊಟ್ಟಿತು. ಶಬರಿಮಲೆ ದೇಗುಲದಲ್ಲಿ (Sabarimala Temple) ಯುವತಿಯರಿಗೆ ಪ್ರವೇಶದ ವಿಚಾರ ಕೂಡಾ, ಕಾಂಗ್ರೆಸ್ ನೇತೃತ್ವದ ಯುಡಿಎಫ್‌ಗೆ ಲಾಭದಾಯಕವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.
ಜಾವಡೇಕರ್ ನೇತೃತ್ವದಲ್ಲಿ 17 ಸದಸ್ಯರ ತಂಡ
ಬಿಜೆಪಿಯು ಈ ಉಪಚುನಾವಣೆಗೆ ಎಲ್ಲಾ ರೀತಿಯಲ್ಲೂ ಸಿದ್ದತೆಯನ್ನು ಮಾಡಿಕೊಂಡಿತ್ತು. ಪಕ್ಷದ ಕೇರಳ ಪ್ರಭಾರಿ ಪ್ರಕಾಶ್ ಜಾವಡೇಕರ್ ನೇತೃತ್ವದಲ್ಲಿ 17 ಸದಸ್ಯರ ತಂಡವನ್ನು ರಚಿಸಲಾಗಿತ್ತು. ರಾಜ್ಯ ಸಹ-ಪ್ರಭಾರಿ ಮತ್ತು ರಾಜ್ಯಸಭಾ ಸದಸ್ಯ ರಾಧಾ ಮೋಹನ್‌ದಾಸ್ ಅಗರ್‌ವಾಲ್ ಪುತ್ತುಪ್ಪಲ್ಲಿಯಲ್ಲಿ ಬೀಡುಬಿಟ್ಟು ತಳಮಟ್ಟದ ಪ್ರಚಾರದ ನೇತೃತ್ವದ ವಹಿಸಿ ಕೊಂಡಿದ್ದರು.
ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್ ಮತ್ತು ವಿ ಮುರಳೀಧರನ್ ಸೇರಿದಂತೆ ಹಿರಿಯ ನಾಯಕರು ಬೂತ್ ಮಟ್ಟದಲ್ಲಿ ಒಂದೊಂದು ಕುಟುಂಬಗಳ ಜೊತೆ ಸಭೆ ನಡೆಸಿದ್ದರು. ಕೆಲ ದಿನಗಳ ಹಿಂದೆ ಬಿಜೆಪಿಗೆ ಪಕ್ಷಾಂತರಗೊಂಡಿದ್ದ ಎ.ಕೆ.ಆಂಟನಿ ಪುತ್ರ ಅನಿಲ್ ಆಂಟೋನಿ ಕೂಡ ಕ್ರಿಶ್ಚಿಯನ್ ಮತದಾರರನ್ನು ಸೆಳೆಯಲು ವ್ಯಾಪಕ ಪ್ರಚಾರ ನಡೆಸಿದ್ದರು.
ಆಡಳಿತ ವಿರೋಧಿ ಅಲೆ ಇದೆ ಎನ್ನುವುದಕ್ಕೆ ಉಪ ಚುನಾವಣೆ ಫಲಿತಾಂಶ ಸಾಕ್ಷಿ
"ಆಡಳಿತ ವಿರೋಧಿ ಅಲೆ ಇದೆ ಎನ್ನುವುದಕ್ಕೆ ಉಪ ಚುನಾವಣೆ ಫಲಿತಾಂಶ ಸಾಕ್ಷಿ. ನಮ್ಮನ್ನು ಅಗಲಿದ ಉಮ್ಮನ್ ಚಾಂಡಿ ಪರವಾಗಿ ಅನುಕಂಪದ ಅಲೆಯು ಕಾಂಗ್ರೆಸ್ ಪರವಾಗಿ ಕೆಲಸ ಮಾಡಿತು. ಇದು ಪಿಣರಾಯಿ ವಿಜಯನ್ ಸರ್ಕಾರಕ್ಕೆ ಆದ ಆಘಾತ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಬಿಜೆಪಿಯ ಹೀನಾಯ ಸೋಲಿನ ಬಗ್ಗೆ ಅವರು ಹೆಚ್ಚಿನ ವಿಶ್ಲೇಷಣೆಯನ್ನು ಮಾಡಲಿಲ್ಲ. (ಮಾಹಿತಿ ಕೃಪೆ: ಇಂಡಿಯನ್ ಎಕ್ಸ್ ಪ್ರೆಸ್)












Click it and Unblock the Notifications