ಮಹಿಳೆಯರು ಮನೆಯಲ್ಲೇ ಇರಬೇಕು ಎಂದ ಮುಸ್ಲಿಂ ಧರ್ಮಗುರು: ಕೇರಳವನ್ನ ತಾಲಿಬಾನ್ ಮಾಡಲು ಹೊರಟಿದ್ದೀರಾ ಎಂದ ಮಹಿಳೆಯರು

ಕೇರಳದಲ್ಲಿ ಪ್ರಸಿದ್ಧ ಇಸ್ಲಾಮಿಕ್ ವಿದ್ವಾಂಸ ಮತ್ತು ಗ್ರಾಂಡ್ ಮುಫ್ತಿ ಆಫ್ ಇಂಡಿಯಾ ಎನಿಸಿಕೊಂಡಿರುವ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರು ಇತ್ತೀಚೆಗೆ ನೀಡಿರುವ ಹೇಳಿಕೆಯೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ.

'ಮಹಿಳೆಯರು ಮನೆಯಿಂದ ಹೊರಬರಬಾರದು, ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳಬಾರದು' ಎಂಬ ಅವರ ಮಹಿಳಾ ವಿರೋಧಿ ಹೇಳಿಕೆಗೆ ಇದೀಗ ಕೇರಳದ ಮುಸ್ಲಿಂ ಮಹಿಳೆಯರು, ಬರಹಗಾರರು ಹಾಗೂ ರಾಜಕೀಯ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕಾಂತಪುರಂ ವಿವಾದ ಸದ್ಯ ಕೇರಳದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

Kerala Muslim Women Strongly Protest Cleric Kanthapuram s Stay At Home Remark On Public Life Now

ಸಮಸ್ತ ಕೇರಳ ಜಮಿಯ್ಯತುಲ್ ಉಲಮಾ ಸಂಘಟನೆಯ ಕಾಂತಪುರಂ ಬಣವು ಇತ್ತೀಚೆಗೆ ಮದರಸಾ ಹಾಗೂ ಮಸೀದಿಗಳಿಗೆ ಒಂದು ಸುತ್ತೋಲೆಯನ್ನ ಹೊರಡಿಸಿತ್ತು. ಇದರಲ್ಲಿ ಮುಸ್ಲಿಂ ಮಹಿಳೆಯರು ಸಾರ್ವಜನಿಕ ವೇದಿಕೆಗಳನ್ನ ಹಂಚಿಕೊಳ್ಳಬಾರದು ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬೇರೆ ಪುರುಷರೊಂದಿಗೆ ಬೆರೆಯಬಾರದು ಎಂದು ನಿರ್ಬಂಧ ಹೇರಲಾಗಿತ್ತು.

ಈ ಸುತ್ತೋಲೆಯನ್ನು ಸಮರ್ಥಿಸಿಕೊಂಡು ಕೊಚ್ಚಿಯ ಇಸ್ಲಾಮಿಕ್ ಸಮ್ಮೇಳನದಲ್ಲಿ ಮಾತನಾಡಿದ್ದ ಕಾಂತಪುರಂ ಅಬೂಬಕ್ಕರ್, 'ಸ್ತ್ರೀಯರು ನೆಕ್ಲೇಸ್ ಇದ್ದಂತೆ. ಆಭರಣವನ್ನು ಹೇಗೆ ಪೆಟ್ಟಿಗೆಯಲ್ಲಿ ಭದ್ರವಾಗಿಡುತ್ತೇವೆಯೋ ಹಾಗೆ ಮಹಿಳೆಯರು ಮನೆಯಲ್ಲೇ ಸುರಕ್ಷಿತವಾಗಿರಬೇಕು. ಅವರು ಸಾರ್ವಜನಿಕ ಜೀವನಕ್ಕೆ ಬಂದರೆ ದೊಡ್ಡ ಮಟ್ಟದ ವಿನಾಶ ಕಟ್ಟಿಟ್ಟ ಬುತ್ತಿ' ಎಂದು ಹೇಳಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಮುಸ್ಲಿಂ ಮಹಿಳೆಯರ ವಿರೋಧ

ಧರ್ಮಗುರುಗಳ ಈ ಪ್ರತಿಗಾಮಿ ಚಿಂತನೆಯ ವಿರುದ್ಧ ಕೇರಳದ ಮುಸ್ಲಿಂ ಮಹಿಳೆಯರು ಒಗ್ಗಟ್ಟಾಗಿ ಧ್ವನಿ ಎತ್ತಿದ್ದಾರೆ. ಕಂಟೆಂಟ್ ಕ್ರಿಯೇಟರ್ ರಸೀನಾ ನೌಶಾದ್ ಅವರು ಪ್ರತಿಕ್ರಿಯಿಸಿ, 'ಅವರ ಪ್ರಕಾರ ಮಹಿಳೆಯರು ಕೇವಲ ಮನೆಯಲ್ಲಿ ಅಡುಗೆ ಮಾಡಿಕೊಂಡು, ಮಕ್ಕಳನ್ನು ಹೆರುತ್ತಾ ಕೂರಬೇಕು. ಮಹಿಳೆಯರು ಹೊರಗೆ ಬರಬಾರದು ಎಂದು ಹೇಳುವ ಪುರುಷರೇ, ನೀವೇಕೆ ತಾಲಿಬಾನ್‌ಗೆ ಹೋಗಬಾರದು? ಕೇರಳವನ್ನು ತಾಲಿಬಾನ್ ಮಾಡಲು ಏಕೆ ಪ್ರಯತ್ನಿಸುತ್ತಿದ್ದೀರಿ?' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಿಳೆಯರ ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ಧ್ವನಿ ಎತ್ತಿರುವ ಮತ್ತೋರ್ವ ಕಂಟೆಂಟ್ ಕ್ರಿಯೇಟರ್ ನಾದಿಯಾ ಖಾದರ್, ಈ ರೀತಿಯ ನಿರ್ಬಂಧಗಳು ಮಹಿಳೆಯರನ್ನ ಆರ್ಥಿಕವಾಗಿ ಮತ್ತಷ್ಟು ಪರಾವಲಂಬಿಗಳನ್ನಾಗಿ ಮಾಡುತ್ತವೆ ಎಂದಿದ್ದಾರೆ.

'ಮಹಿಳೆಯರು ಮನೆಯಲ್ಲೇ ಇರಬೇಕು ಎನ್ನುವ ಧಾರ್ಮಿಕ ಮುಖಂಡರು ಅವರ ಆರ್ಥಿಕ ಅಗತ್ಯಗಳನ್ನ ಪೂರೈಸುತ್ತಾರೆಯೇ? ಒಬ್ಬ ಮಹಿಳೆಗೆ ತನ್ನ ತಾಯಿಗೆ ಬಟ್ಟೆ ಕೊಡಿಸಲು ಹಣ ಬೇಕಾದರೂ ಗಂಡನ ಮುಂದೆ ಕೈಯೊಡ್ಡಬೇಕಾ? ನಾವು ನಿಮ್ಮಂತಹ ಶ್ರೀಮಂತ ಕುಟುಂಬಗಳ ಬಗ್ಗೆ ಮಾತನಾಡುತ್ತಿಲ್ಲ, ಬದಲಾಗಿ ಕೇರಳದ ಸಾಮಾನ್ಯ ಮುಸ್ಲಿಂ ಕುಟುಂಬದ ಮಹಿಳೆಯರಿಗೆ ತಮ್ಮ ಸ್ವಂತ ಖರ್ಚಿಗೆ ಆದಾಯದ ಅಗತ್ಯವಿದೆ' ಎಂದು ಅವರು ಖಾರವಾಗಿ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಬರಹಗಾರ್ತಿ ಶಿಮ್ನಾ ಜೀನತ್, 'ಮಹಿಳೆಯರನ್ನ ಸಾಂಸ್ಕೃತಿಕ ಮತ್ತು ರಾಜಕೀಯ ವೇದಿಕೆಗಳಿಂದ ದೂರವಿಡುವ ಈ ನಿರ್ಧಾರ, ಪ್ರವಾದಿಯವರ ಕಾಲದಲ್ಲಿ ಇಸ್ಲಾಂ ಧರ್ಮವು ಮಹಿಳೆಯರಿಗೆ ನೀಡಿದ್ದ ಪ್ರಾಮುಖ್ಯತೆಗೆ ತದ್ವಿರುದ್ಧವಾಗಿದೆ. ಮಹಿಳೆಯರನ್ನು ಕೇವಲ ಸಂತಾನೋತ್ಪತ್ತಿಯ ಸಾಧನಗಳಾಗಿ ಬಿಂಬಿಸಲಾಗುತ್ತಿದೆ' ಎಂದು ಟೀಕಿಸಿದ್ದಾರೆ.

ಇನ್ನು ಚಲನಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನಾ ಅವರು 'ಕ್ರಿಸ್ತ ಶಕ 656ರ ಜಮಾಲ್ ಕದನವನ್ನು ಮುನ್ನಡೆಸಿದ್ದು ಯಾರು?' ಎಂದು ಇತಿಹಾಸವನ್ನು ಉಲ್ಲೇಖಿಸಿ ದಿಟ್ಟವಾಗಿ ಪ್ರಶ್ನಿಸಿದ್ದಾರೆ.

ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ, ಕೇರಳದ ರಾಜಕೀಯ ವಲಯದಲ್ಲೂ ಕಾಂತಪುರಂ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಸಿಪಿಐ(ಎಂ) ನಾಯಕಿ ಪಿ.ಕೆ ಶ್ರೀಮತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಬಿಂದು ಕೃಷ್ಣ ಅವರು ಧರ್ಮಗುರುಗಳ ಈ ನಿಲುವನ್ನು ತೀವ್ರವಾಗಿ ಖಂಡಿಸಿದ್ದು, ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಇಂತಹ ತಾರತಮ್ಯದ ನಿಯಮಗಳಿಗೆ ನಮ್ಮ ಸಮಾಜದಲ್ಲಿ ಜಾಗವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+