ಕೇರಳ ನರಬಲಿ: 12 ಮಹಿಳೆಯರ ನಾಪತ್ತೆ ಪ್ರಕರಣಗಳ ಮರುತನಿಖೆಗೆ ಪೊಲೀಸರ ನಿರ್ಧಾರ
ತಿರುವನಂತಪುರ, ಅಕ್ಟೋಬರ್, 13 : ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವ ನರಬಲಿ ಪ್ರಕರಣವು ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಪ್ರಕರಣವನ್ನು ಕೇರಳ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಇದರ ಬೆನ್ನಲ್ಲೇ ಪತ್ತನಂತಿಟ್ಟ ಜಿಲ್ಲೆಯ 12 ಮಹಿಳೆಯರ ನಾಪತ್ತೆ ಪ್ರಕರಣಗಳನ್ನು ತನಿಖೆ ಮಾಡಲು ಪೊಲೀಸರು ಗುರುವಾರ ನಿರ್ಧರಿಸಿದ್ದಾರೆ.
2017 ರಿಂದ ಪತ್ತನಂತಿಟ್ಟ ಜಿಲ್ಲೆಯೊಂದರಲ್ಲೇ 12 ಮಹಿಳೆಯರು ನಾಪತ್ತೆಯಾಗಿದ್ದಾರೆ. ಈ ಪ್ರಕರಣಗಳ ಮರುತನಿಖೆ ಮಾಡಲು ಪೊಲೀಸ್ ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಈಗ ಬೆಳಕಿಗೆ ಬಂದಿರುವ ನರಬಲಿ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಶಫಿ, ಭಗವಲ್ ಸಿಂಗ್ ಹಾಗೂ ಆತನ ಪತ್ನಿ ಲೈಲಾಳನ್ನು ಬಂಧಿಸಲಾಗಿದೆ.

ಪ್ರಮುಖ ಆರೋಪಿ ಮೊಹಮ್ಮದ್ ಶಫಿ ವಿಕೃತ ಕಾಮಿಯಾಗಿದ್ದು, ಲೈಂಗಿಕ ದೌರ್ಜನ್ಯ ಪ್ರಕರಣವೊಂದರಲ್ಲಿ ಜೈಲುವಾಸ ಅನುಭವಿಸಿದ್ದನೆಂದು ತಿಳಿದುಬಂದಿದೆ.
ಇನ್ನಿಬ್ಬರು ಆರೋಪಿಗಳಾದ ಭಗವಲ್ ಸಿಂಗ್ ದಂಪತಿ ಪತ್ತನಂತಿಟ್ಟ ಜಿಲ್ಲೆಯ ಆರನ್ಮುಳ ಬಳಿಯಿರುವ ತಮ್ಮ ಮನೆಯಲ್ಲಿ ಮಸಾಜ್ ಪಾರ್ಲರ್ ನಡೆಸುತ್ತಿದ್ದರು.
ಅಶ್ಲೀಲ ಚಿತ್ರದ ಶೂಟಿಂಗ್ ನೆಪದಲ್ಲಿ ಇಬ್ಬರು ಮಹಿಳೆಯರನ್ನು ಭಗವಲ್ ಮನೆಗೆ ಶಫಿ ಕರೆತಂದಿದ್ದ. ಜೂನ್‌ನಲ್ಲಿ ರೋಸಲಿನ್ ಹಾಗೂ ಸೆಪ್ಟೆಂಬರ್‌ನಲ್ಲಿ ಪದ್ಮಾರನ್ನು ಹತ್ಯೆ ಮಾಡಲಾಗಿತ್ತು. ಭಗವಲ್ ದಂಪತಿ ದಿಢೀರ್ ಶ್ರೀಮಂತರಾಗುವ ಬಯಕೆ ಹೊಂದಿದ್ದರು. ಆ ಕಾರಣ, ನರಬಲಿಯನ್ನು ನಡೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ನರಬಲಿ ಪ್ರಕರಣದಲ್ಲಿ ಹತ್ಯೆಯಾಗಿರುವ ಮಹಿಳೆಯರು ಎರ್ನಾಕುಲಂ ಜಿಲ್ಲೆಯಲ್ಲಿ ಲಾಟರಿ ಟಿಕೆಟ್ ವ್ಯವಹಾರ ನಡೆಸುತ್ತಿದ್ದರು. ಈ ಇಬ್ಬರು ಮಹಿಳೆಯರನ್ನು ಪರಿಚಯಿಸಿಕೊಂಡ ಶಫಿ ಅಶ್ಲೀಲ ಚಿತ್ರದಲ್ಲಿ ನಟಿಸುವಂತೆ ಕೇಳಿಕೊಂಡಿದ್ದ. ಅಧಿಕ ಹಣವನ್ನು ನೀಡುವುದಾಗಿಯೂ ನಂಬಿಸಿದ್ದ. ಇದಕ್ಕೆ ಒಪ್ಪಿದ ಮಹಿಳೆಯರು ಭಗವಲ್ ಮನೆಗೆ ಬಂದಿದ್ದರು. ಅಲ್ಲಿ ಈ ಮಹಿಳೆಯರಿಗೆ ಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು. ಕೊಲೆಗೈದ ನಂತರ ದೇಹದ ಅಂಗಾಂಗಗಳನ್ನು ಬೇಯಿಸಿ ತಿನ್ನಲಾಗಿದೆ ಎಂಬ ಶಂಕೆಯೂ ವ್ಯಕ್ತವಾಗಿದೆ.
2019 ರಲ್ಲಿ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮೂಲಕ ಭಗವಲ್ ಸಿಂಗ್ ದಂಪತಿಯೊಂದಿಗೆ ಶಫಿ ಸ್ನೇಹ ಬೆಳೆಸಿದ್ದ. ದಿಢೀರ್ ಶ್ರೀಮಂತರಾಗಲು ನರಬಲಿ ನೀಡಬೇಕೆಂದು ದಂಪತಿಗೆ ನಂಬಿಸಿದ್ದನೆಂದು ವರದಿಯಾಗಿದೆ.
ಪತ್ತನಂತಿಟ್ಟ ಜಿಲ್ಲೆಯಲ್ಲಿ 2017ರಿಂದ ಈ ವರೆಗೆ 12 ಮಹಿಳೆಯರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ದೂರು ನೀಡಿದರೂ, ತನಿಖೆಯಲ್ಲಿ ಪೊಲೀಸರು ಪ್ರಗತಿ ಸಾಧಿಸಿರಲಿಲ್ಲ. ಈಗ ನರಬಲಿ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಪೊಲೀಸರು ಚುರುಕುಗೊಂಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅವರು ಮಹಿಳೆಯರ ನಾಪತ್ತೆ ಪ್ರಕರಣಗಳ ಮರುತನಿಖೆಗೆ ನಿರ್ಧಾರ ಕೈಗೊಂಡಿದ್ದಾರೆ.
ಪ್ರಮುಖ ಆರೋಪಿಯಾಗಿರುವ ಶಫಿ ವಿಕೃತ ಕಾಮಿ ಹಾಗೂ ಹಿಂಸಾವಿನೋಧಿ ಎಂಬುದನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಈ ಹಿಂದೆ ಜಿಲ್ಲೆಯಲ್ಲಿ ನಡೆದಿರುವ ನಾಪತ್ತೆ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೂ, ಆರೋಪಿ ಶಫಿಗೂ ಸಂಬಂಧವಿದೆಯಾ ಎಂಬುದು ತನಿಖೆಯಿಂದ ಬಹಿರಂಗಗೊಳ್ಳಬೇಕಿದೆ.
ನರಬಲಿ ಪ್ರಕರಣಕ್ಕೆ ರಾಜಕೀಯ ಬಣ್ಣ?
ನರಬಲಿ ಪ್ರಕರಣದಲ್ಲಿ ಬಂಧಿತನಾಗಿರುವ ಭಗವಲ್ ಸಿಂಗ್, ಮಸಾಜ್ ಥೆರಪಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಆತ ಕೇರಳದ ಆಡಳಿತಾರೂಢ ಸಿಪಿಎಂ ಪಕ್ಷದ ಸದಸ್ಯನೆಂದು ವರದಿಯಾಗಿದೆ. ಆದರೆ, ಸಿಪಿಎಂ ಪಕ್ಷವು ಈ ಆರೋಪವನ್ನು ಅಲ್ಲಗಳೆದಿದೆ.
'ಆರೋಪಿ ಭಗವಲ್ ಸಿಂಗ್ ನಮ್ಮ ಜೊತೆ ಕೆಲಸ ಮಾಡಿದ್ದಾನೆ. ಆದರೆ, ಆತ ಸಿಪಿಎಂ ಪಕ್ಷದ ಸದಸ್ಯನಾಗಿರಲಿಲ್ಲ. ನಮ್ಮೊಂದಿಗೆ ಇದ್ದಾಗ, ಭಗವಲ್ ಸಿಂಗ್ ಮೌಢ್ಯಗಳನ್ನು ನಂಬದ ಪ್ರಗತಿಪರನಾಗಿದ್ದ. ಎರಡನೇ ಮದುವೆಯಾದ ನಂತರ ಆತ ಧಾರ್ಮಿಕ ವ್ಯಕ್ತಿಯಾಗಿ ಬದಲಾಗಿದ್ದ. ಇದು ಆತನ ಎರಡನೇ ಪತ್ನಿ ಲೈಲಾಳ ಪ್ರಭಾವವಿರಬಹುದು' ಎಂದು ಸಿಪಿಎಂ ಮುಖಂಡರೊಬ್ಬರು ತಿಳಿಸಿದ್ದಾರೆ.












Click it and Unblock the Notifications