ಸಂವಿಧಾನವೇ ಅಂತಿಮ! ದೇವರು, ನಾಯಕರು, ಭಾರತಾಂಬೆ ಹೆಸರಿನ ಪ್ರಮಾಣಕ್ಕೆ ಹೈಕೋರ್ಟ್ ಬ್ರೇಕ್
ಭಾರತಾಂಬೆ ಹಾಗೂ ನಿರ್ದಿಷ್ಟ ದೇವರುಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವುದು ಅಮಾನ್ಯ ಎಂದು ಕೇರಳಂ ಹೈಕೋರ್ಟ್ ಹೇಳಿದೆ. ತಿರುವನಂತಪುರಂ ಮಹಾನಗರ ಪಾಲಿಕೆಯ 20 ಬಿಜೆಪಿ ಸದಸ್ಯರು (ಕಾರ್ಪೊರೇಟರ್ಗಳು) ವಿವಿಧ ದೇವರುಗಳ ಹೆಸರಿನಲ್ಲಿ ಸ್ವೀಕರಿಸಿದ್ದ ಪ್ರಮಾಣವಚನವನ್ನು ಅಸಿಂಧು (ಅನೂರ್ಜಿತ) ಎಂದು ಘೋಷಿಸಿದೆ. ಅಲ್ಲದೆ, ಮುಂದಿನ ನಾಲ್ಕು ವಾರಗಳ ಒಳಗೆ ನಿಯಮಾನುಸಾರ ಮರು ಪ್ರಮಾಣವಚನ ಸ್ವೀಕರಿಸುವಂತೆ ಸೂಚನೆ ನೀಡಿದೆ.
ನಿಯಮ ಮೀರಿ ಮಾಡಿದ ಪ್ರಮಾಣ ವಚನ ಪ್ರಶ್ನಿಸಿ, ಈ ಪ್ರಮಾಣವಚನದ ಸಿಂಧುತ್ವವನ್ನು ಪ್ರಶ್ನಿಸಿ ಮತ್ತು ಸದಸ್ಯರನ್ನು ಅನರ್ಹಗೊಳಿಸುವಂತೆ ಕೋರಿ, ಸಿಪಿಎಂ ಕಾರ್ಪೊರೇಟರ್ ಹಾಗೂ ಸಂಸದೀಯ ಪಕ್ಷದ ನಾಯಕ ಎಸ್.ಪಿ. ದೀಪಕ್ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಜನಪ್ರತಿನಿಧಿಗಳನ್ನು ಅನರ್ಹಗೊಳಿಸಲು ನಿರಾಕರಿಸಿದೆಯಾದರೂ, ಕೇರಳ ಮುನ್ಸಿಪಾಲಿಟಿ ಕಾಯ್ದೆ ಮತ್ತು ಸಂವಿಧಾನದ ನಿಬಂಧನೆಗಳ ಪ್ರಕಾರ ಮರು ಪ್ರಮಾಣವಚನ ಸ್ವೀಕರಿಸುವಂತೆ ಆದೇಶಿಸಿದೆ.

ಯಾಕೆ ವಿವಾದ?
ನೂತನವಾಗಿ ಆಯ್ಕೆಯಾಗಿದ್ದ ತಿರುವನಂತಪುರಂ ಪಾಲಿಕೆ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಈ ವಿವಾದ ಹುಟ್ಟಿಕೊಂಡಿತ್ತು. ಬಿಜೆಪಿ ಸದಸ್ಯರು ಸಾಂವಿಧಾನಿಕ ನಿಯಮಗಳನ್ನು ಮೀರಿ ಶ್ರೀ ಅನಂತ ಪದ್ಮನಾಭಸ್ವಾಮಿ, ಅಟ್ಟುಕಲ್ ಅಮ್ಮ, ಉದಯನ್ನೂರ್ ದೇವಿ ಸೇರಿದಂತೆ ತಮ್ಮಿಷ್ಟದ ಕೆಲವು ದೇವರುಗಳ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ಜೊತೆಗೆ ಕೆಲವರು ಹುತಾತ್ಮರು ಹಾಗೂ ಸೈದ್ಧಾಂತಿಕ ನಾಯಕರ ಹೆಸರುಗಳನ್ನೂ ಬಳಸಿ ಪ್ರಮಾಣ ಮಾಡಿದ್ದರು ಎನ್ನಲಾಗಿದೆ.
ದೇವರು ಓಕೆ, ಹೆಸರಿಗೆ ಅವಕಾಶವಿಲ್ಲ
ಅರ್ಜಿದಾರ ದೀಪಕ್ ಪರ ವಕೀಲರು, "ಕೇರಳ ಮುನ್ಸಿಪಾಲಿಟಿ ಕಾಯ್ದೆ, 1994ರ ಸೆಕ್ಷನ್ 143 ಮತ್ತು ಅದರ ಮೂರನೇ ಶೆಡ್ಯೂಲ್ ಪ್ರಕಾರ, ಚುನಾಯಿತ ಪ್ರತಿನಿಧಿಗಳು ಕೇವಲ 'ದೇವರ ಹೆಸರಿನಲ್ಲಿ' ಅಥವಾ 'ಗಂಭೀರ ದೃಢೀಕರಣ' ಮಾಡುವ ಮೂಲಕ ಮಾತ್ರ ಪ್ರಮಾಣವಚನ ಸ್ವೀಕರಿಸಬೇಕು. ಆದರೆ ಕಾನೂನಿನಲ್ಲಿ ವೈಯಕ್ತಿಕ ದೇವರುಗಳು, ರಾಜಕೀಯ ನಾಯಕರು, ಚಳುವಳಿಗಳು ಅಥವಾ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಅವಕಾಶವಿಲ್ಲ" ಎಂದು ವಾದಿಸಿದ್ದರು. ಭಾರತಾಂಬೆಗೂ ಅವಕಾಶವಿಲ್ಲ.
ಸ್ಥಳೀಯ ಸಂಸ್ಥೆ ಚುನಾವಣೆ ಮುಗಿದ ಬೆನ್ನಲ್ಲೇ ಕೇರಳ ರಾಜಧಾನಿಯಲ್ಲಿ ಈ ವಿಚಾರ ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು. 101 ಸದಸ್ಯ ಬಲದ ತಿರುವನಂತಪುರಂ ಪಾಲಿಕೆಯಲ್ಲಿ ಪ್ರಾಬಲ್ಯ ಮೆರೆದು ಇತಿಹಾಸ ನಿರ್ಮಿಸಿದ್ದ ಬಿಜೆಪಿ, ತನ್ನ ಸದಸ್ಯರ ಪ್ರಮಾಣವಚನವನ್ನು ಸಮರ್ಥಿಸಿಕೊಂಡಿತ್ತು. ಆದರೆ ಸಿಪಿಎಂ ನೇತೃತ್ವದ ಪಕ್ಷವು ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿತ್ತು.
ಈ ವರ್ಷದ ಆರಂಭದಲ್ಲಿ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, "ವೈಯಕ್ತಿಕ ಧಾರ್ಮಿಕ ನಂಬಿಕೆಗಳು ಅವರವರ ಆಯ್ಕೆಗೆ ಬಿಟ್ಟ ವಿಚಾರ. ಆದರೆ ಶಾಸನಬದ್ಧ ಪ್ರಮಾಣವಚನವನ್ನು ನಿರ್ದಿಷ್ಟ ದೇವರುಗಳ ಅಥವಾ ವ್ಯಕ್ತಿಗಳ ಹೆಸರಿನಲ್ಲಿ ಕಾನೂನುಬದ್ಧವಾಗಿ ಸ್ವೀಕರಿಸಬಹುದೇ?" ಎಂದು ಪ್ರಶ್ನಿಸಿತ್ತು. ಅಲ್ಲದೆ, ಅಂತಿಮ ತೀರ್ಪಿಗೆ ಒಳಪಟ್ಟು ಅವರ ಪ್ರಮಾಣವಚನಕ್ಕೆ ತಾತ್ಕಾಲಿಕ ಮಾನ್ಯತೆ ನೀಡಿತ್ತು. ಇದೀಗ ಬಂದಿರುವ ಹೈಕೋರ್ಟ್ನ ಅಂತಿಮ ತೀರ್ಪಿನ ಅನ್ವಯ, ಪಾಲಿಕೆ ಸದಸ್ಯರಾಗಿ ಮುಂದುವರಿಯಲು ಈ 20 ಬಿಜೆಪಿ ಕಾರ್ಪೊರೇಟರ್ಗಳು ಕಾನೂನುಬದ್ಧ ಸ್ವರೂಪದಲ್ಲಿ ಮುಂದಿನ ನಾಲ್ಕು ವಾರಗಳೊಳಗೆ ಕಡ್ಡಾಯವಾಗಿ ಮರು ಪ್ರಮಾಣವಚನ ಸ್ವೀಕರಿಸಬೇಕಿದೆ.
ಸಂವಿಧಾನ ಏನು ಹೇಳುತ್ತದೆ?
ಭಾರತದ ಸಂವಿಧಾನದ ಮೂರನೇ ಅನುಸೂಚಿಯ ಪ್ರಕಾರ, ರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಸಚಿವರು ಹಾಗೂ ಸಂಸದರು, ಶಾಸಕರು ಹಾಗೂ ಇತರ ಜನಪ್ರತಿನಿಧಿಗಳು ಎರಡು ವಿಧಗಳಲ್ಲಿ ಪ್ರಮಾಣವಚನ ಸ್ವೀಕರಿಸಲು ಮುಕ್ತ ಅವಕಾಶವಿದೆ.
ಒಂದು ದೇವರ ಹೆಸರಿನಲ್ಲಿ (In the name of God) ಪ್ರಮಾಣ ಮಾಡುವುದು, ಮತ್ತೊಂದು ದೃಢೀಕರಣ ಅಥವಾ ಆತ್ಮಸಾಕ್ಷಿಯ ಹೆಸರಿನಲ್ಲಿ (Solemnly affirm) ಪ್ರಮಾಣ ಮಾಡುವುದು. ಎರಡನೆಯದನ್ನು ಧರ್ಮ ನಿರಪೇಕ್ಷೆಯ ನಿಲುವುಳ್ಳವರು ಆಯ್ಕೆ ಮಾಡಿಕೊಳ್ಳುತ್ತಾರೆ.
ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದರೂ ಅಥವಾ ಸತ್ಯನಿಷ್ಠೆಯ ಹೆಸರಿನಲ್ಲಿ ಪ್ರಮಾಣ ಮಾಡಿದರೂ, ಅವರೆಲ್ಲರೂ ಅಂತಿಮವಾಗಿ ಸಹಿ ಹಾಕುವುದು ಭಾರತದ ಸಂವಿಧಾನಕ್ಕೆ ಬದ್ಧರಾಗಿರುತ್ತೇವೆ ಎಂಬ ಒಕ್ಕಣೆಗೆ ಮಾತ್ರ.
ಶುರುವಾದ ರೂಢಿ
ದೇಶದ ವಿವಿಧ ರಾಜ್ಯಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ನಾಯಕರು ಕೇವಲ ದೇವರು ಅಥವಾ ಸಂವಿಧಾನದ ಹೆಸರಷ್ಟೇ ಅಲ್ಲದೆ, ತಮ್ಮ ಮಾತೃಭಾಷೆ, ದೇವರುಗಳು ಅಥವಾ ಕ್ರಾಂತಿಕಾರಿಗಳ ಹೆಸರನ್ನು ಪ್ರಮಾಣವಚನದಲ್ಲಿ ಬಳಸುವ ಪದ್ಧತಿಯನ್ನು ಆರಂಭಿಸಿದ್ದಾರೆ. ಸಂವಿಧಾನದ ನಿಯಮಗಳ ಪ್ರಕಾರ ಇದಕ್ಕೆ ಕೆಲವು ನಿರ್ಬಂಧಗಳಿದ್ದರೂ, ನಾಯಕರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದುಂಟು.
ಡಿ.ಕೆ. ಶಿವಕುಮಾರ್ ಅವರು ನೂತನವಾಗಿ ಕರ್ನಾಟಕದ ಮುಖ್ಯಮಂತ್ರಿ ಆಗುವ ಸಂದರ್ಭದಲ್ಲಿ ಸಂವಿಧಾನದ ಜೊತೆಗೆ ತಮ್ಮ ದೇವರಾದ ವೀರ ಗಂಗಾಧರನ ಹೆಸರನ್ನು ಸೇರಿಸಿಕೊಂಡು ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಈ ಹಿಂದೆ ನಿರ್ದಿಷ್ಟ ದೇವರ ಹೆಸರಿನಲ್ಲಿ, ವ್ಯಕ್ತಿಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದವರನ್ನು ರಾಷ್ಟ್ರಪತಿಗಳು ಅಥವಾ ರಾಜ್ಯಪಾಲರು ಮಧ್ಯದಲ್ಲೇ ತಿದ್ದಿ ಸರಿಪಡಿಸಿದ ಉದಾಹರಣೆಗಳು ಉಂಟು.
(ಬರಹ: ಭವಾನಿ ಭಟ್)














Click it and Unblock the Notifications