Viral Video: ಕೇರಳ ಬಸ್ ವೈರಲ್ ವಿಡಿಯೋ ಕೇಸ್, ವ್ಲಾಗ್ ಮಾಡಿದ್ದ ಮಹಿಳೆ ಕಂಬಿ ಹಿಂದೆ!
ದೇವರನಾಡು ಎಂದು ಕರೆಸಿಕೊಳ್ಳುವ ಕೇರಳದಲ್ಲಿ ಇತ್ತೀಚೆಗೆ ವಿಡಿಯೋ ಒಂದು ಫುಲ್ ವೈರಲ್ ಆಗಿತ್ತು. ತನಗೆ ಬಸ್‌ನಲ್ಲಿ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ, ಎಂದು ಮಹಿಳೆ ಒಬ್ಬರು ಅದನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾಗೆ ಹಾಕಿದ್ದರು. ಆ ನಂತರ ವಿಡಿಯೋ ವೈರಲ್ ಆಗಿತ್ತು, ಹಾಗೇ ವಿಡಿಯೋ ನೋಡಿ ಜನರು ಆರಂಭದಲ್ಲಿ ಮಹಿಳೆ ಬೆಂಬಲಕ್ಕೆ ನಿಂತಿದ್ದರು. ಹೀಗಿದ್ದಾಗ ವ್ಯಕ್ತಿ ತಾನು ತಪ್ಪು ಮಾಡಿಲ್ಲ ಆದರೂ ವಿಡಿಯೋ ಮಾಡಲಾಗಿದೆ, ನನಗೆ ಅವಮಾನ ಆಗಿದೆ ಎಂದು ಜೀವ ಕಳೆದುಕೊಂಡಿದ್ದಾನೆ ಅಂತಾ ತಮ್ಮ ಮಗನ ಸಾವಿನ ಬಗ್ಗೆ ಪೋಷಕರು ವಿವರಿಸಿದ್ದರು. ಹೀಗಿದ್ದಾಗ ಈ ಪ್ರಕರಣಕ್ಕೆ ದಿಢೀರ್ ದೊಡ್ಡ ತಿರುವು ಸಿಕ್ಕಿದೆ.
ಕೇರಳ ರಾಜ್ಯದ ಬಸ್‌ನಲ್ಲಿ 42 ವರ್ಷದ ದೀಪಕ್ ಹಾಗೂ ಲೈಂಗಿಕ ಕಿರುಕುಳ ಆರೋಪದ ವಿಡಿಯೋ ಮಾಡಿದ್ದ ಶಿಮ್ಜಿತಾ ಮುಸ್ತಫಾ ಒಟ್ಟಿಗೆ ಸಂಚಾರ ಮಾಡುತ್ತಿದ್ದರು. ಹೀಗಿದ್ದಾಗ ದೀಪಕ್ ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಹೇಳಿ, ವೀಡಿಯೋ ರೆಕಾರ್ಡ್ ಮಾಡಿ ಅದನ್ನು ಸೋಷಿಯಲ್ ಮೀಡಿಯಾ ಅಕೌಂಟ್‌ಗೆ ಅಪ್ಲೋಡ್ ಮಾಡಿದ್ದರು ಶಿಮ್ಜಿತಾ ಮುಸ್ತಫಾ. ರಾತ್ರೋರಾತ್ರಿ ಈ ವಿಡಿಯೋ ವೈರಲ್ ಆಗಿ, ಸುಮಾರು 2 ಮಿಲಿಯನ್ ಎಂದರೆ 20 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದಿತ್ತು. ಆದರೆ ಈ ವೈರಲ್ ವಿಡಿಯೋ ಕೇಸ್‌ಗೆ ದಿಢೀರ್ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ವಿಡಿಯೋ ಮಾಡಿದ ಮಹಿಳೆಯನ್ನೇ ಇದೀಗ ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.

ಮಹಿಳೆ ಮಾಡಿದ್ದ ಆರೋಪ ಏನು?
ಲೈಂಗಿಕ ಕಿರುಕುಳ ಆರೋಪದ ಆ ವೈರಲ್ ವಿಡಿಯೋದಲ್ಲಿ ಮಹಿಳೆ ವಿವರಿಸಿರುವಂತೆ, ನಿನ್ನೆ ನಾನು ಸಾರ್ವಜನಿಕ ಬಸ್‌ನಲ್ಲಿ ತೆರಳುವಾಗ ವೀಡಿಯೋ ಒಂದನ್ನು ಶೇರ್ ಮಾಡಿದ್ದೆ. ಅಲ್ಲಿ ಒಬ್ಬ ವ್ಯಕ್ತಿಯು ದುರುದ್ದೇಶ ಇಟ್ಟುಕೊಂಡು ನನ್ನನ್ನ ಮುಟ್ಟಿದ್ದಾನೆ. ಇದು ಅಚಾನಕ್ ಆಗಿ ಆಗಿರುವುದು ಅಥವಾ ತಪ್ಪು ತಿಳುವಳಿಕೆ ಅಲ್ಲ, ಇದು ಲೈಂಗಿಕ ಮಿತಿಯ ಸ್ಪಷ್ಟ ಉಲ್ಲಂಘನೆ ಎಂದು ವೈರಲ್ ವಿಡಿಯೋ ರೆಕಾರ್ಡ್ ಮಾಡಿದ್ದ ಶಿಮ್ಜಿತಾ ಮುಸ್ತಫಾ ಅವರು ಆರೋಪ ಮಾಡಿದ್ದರು.
ಒಬ್ಬನೇ ಮಗ ಆತ್ಮಹತ್ಯೆಗೆ ಶರಣು
ಹಾಗೇ ತಮ್ಮ ಆರೋಪ ಮುಂದುವರಿಸಿ, ನನ್ನ ಮುಂದೆ ಇದ್ದ ಮತ್ತೊಬ್ಬ ಮಹಿಳೆಗೆ ಕೂಡ ಇದೇ ರೀತಿ ಅನುಭವ ಆಗುತ್ತಿರುವುದು ಗಮನಿಸಿದೆ, ನಂತರ ನಾನು ವಿಡಿಯೋ ರೆಕಾರ್ಡ್ ಮಾಡಲು ಪ್ರಾರಂಭಿಸಿದೆ. ರೆಕಾರ್ಡ್ ಮಾಡಲಾಗುತ್ತಿದೆ ಎಂದು ತಿಳಿದಿದ್ದರೂ ಆ ವ್ಯಕ್ತಿ ಇನ್ನೂ ಮುಂದೆ ಹೋಗಿ ನನ್ನ ಮುಟ್ಟಿದನು. ಇದು ಉದ್ದೇಶಪೂರ್ವಕ ಕೃತ್ಯ, ಎಂದು ಆರೋಪಿಸಿದ್ದರು ಶಿಮ್ಜಿತಾ ಮುಸ್ತಫಾ.
ಹೀಗೆ ಶಿಮ್ಜಿತಾ ಮುಸ್ತಫಾ ಮಾಡಿದ್ದ ಲೈಂಗಿಕ ಕಿರುಕುಳ ಆರೋಪ ವಿಡಿಯೋ ಸೋಷಿಯಲ್ ಮೀಡಿಯಾ ತುಂಬಾ ಹರಿದಾಡಿ ವೈರಲ್ ಆಗಿತ್ತು. 2 ದಿನಗಳ ನಂತರ ಎಂದರೆ ಕಳೆದ ಭಾನುವಾರ ದೀಪಕ್ ಅವರ ಪೋಷಕರು ತಮ್ಮ ಒಬ್ಬನೇ ಮಗ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದ್ದನ್ನ ಕಂಡು ತೀವ್ರ ಆಘಾತಕ್ಕೆ ಒಳಗಾಗಿದ್ದರು. ಆ ನಂತರ ಮಹಿಳೆ ವಿರುದ್ಧ ಕೇರಳ ಪೊಲೀಸರು ಕೇಸ್ ಕೂಡ ದಾಖಲಿಸಿದ್ದು, ಇದೀಗ ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.












Click it and Unblock the Notifications