ಶಬರಿಮಲೆ ಪೊಲೀಸರಿಗೆ ನೀಡಿದ್ದ ಕೈಪಿಡಿ ಹಿಂಪಡೆದ ಕೇರಳ ಸರ್ಕಾರ
ತಿರುವನಂತಪುರಂ, ನವೆಂಬರ್ 18: ಶಬರಿಮಲೆಯಲ್ಲಿ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಗೆ ಗೃಹ ಇಲಾಖೆ ವಿತರಿಸಿದ್ದ ಕೈಪಿಡಿಯಲ್ಲಿ ವಿವಾದಾತ್ಮಕ ನಿರ್ದೇಶನವನ್ನು ಕೇರಳದ ಎಲ್‌ಡಿಎಫ್ ಸರ್ಕಾರ ಗುರುವಾರ ಹಿಂಪಡೆದಿದೆ.
ಸೆಪ್ಟೆಂಬರ್ 2018ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಎಲ್ಲಾ ಯಾತ್ರಾರ್ಥಿಗಳಿಗೆ ದೇವಸ್ಥಾನವನ್ನು ಪ್ರವೇಶಿಸಲು ಅನುಮತಿಸಲಾಗಿದೆ ಎಂದು ಹೇಳುವ ಕೈಪಿಡಿಯನ್ನು ಕೇರಳ ಸರ್ಕಾರ ವಿತರಿಸಿತ್ತು. ಕೇರಳ ಸರ್ಕಾರದ ಕೈಪಿಡಿ ದುರುದ್ದೇಶಪೂರಿತ ಉದ್ದೇಶ ಹೊಂದಿದೆ ಎಂದು ಆರೋಪಿಸಿ ಬಿಜೆಪಿ ಆಕ್ಷೇಪಿಸಿದ ನಂತರ ರಾಜ್ಯ ಸರ್ಕಾರ ನಿರ್ದೇಶನವನ್ನು ಹಿಂಪಡೆದಿದೆ.
ಎಲ್ಲಾ ಶಬರಿಮಲೆ ಯಾತ್ರಿಕರು ಎಲ್ಲಾ ವಯಸ್ಸಿನ ಮಹಿಳೆಯರು ಸೇರಿದಂತೆ ದೇಗುಲವನ್ನು ಪ್ರವೇಶಿಸಬಹುದು ಎಂದು ಎಸ್‌ಸಿ ತೀರ್ಪಿನ ಹೊರತಾಗಿಯೂ ಅಯ್ಯಪ್ಪನನ್ನು ಶಾಶ್ವತ ಬ್ರಹ್ಮಚಾರಿ ಎಂದು ಪರಿಗಣಿಸಲಾಗಿರುವುದರಿಂದ ದೇವಾಲಯವು 10ರಿಂದ 50 ವರ್ಷ ವಯಸ್ಸಿನ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸುವ ಸಂಪ್ರದಾಯವನ್ನು ಮುಂದುವರೆಸಿದೆ. ಕೇರಳ ಸರ್ಕಾರವು ಎಸ್‌ಸಿ ಆದೇಶದ ನಂತರ ಮಹಿಳೆಯರ ಪ್ರವೇಶವನ್ನು ನೀಡಲು ಆರಂಭದಲ್ಲಿ ಪ್ರಯತ್ನಿಸಿತ್ತು. ಆದರೆ ಬಲವಾದ ಪ್ರತಿರೋಧದ ನಂತರ ಅದು ತನ್ನ ನಡೆ ಬದಲಿಸಿತು. ಅಂದಿನಿಂದ ರಾಜ್ಯ ಸರ್ಕಾರ ಈ ವಿಚಾರದಲ್ಲಿ ಎಚ್ಚರಿಕೆ ವಹಿಸಿದೆ.
ಕೇರಳ ಸರ್ಕಾರದ ಗೃಹ ಇಲಾಖೆ ಕೈಪಿಡಿಯನ್ನು ಬುಧವಾರ ವಿತರಿಸಿತ್ತು ಗುರುವಾರ ಬೆಳಗ್ಗೆ ಬಿಜೆಪಿ ಪ್ರತಿಭಟನೆ ನಡೆಸಿ ಇದಕ್ಕೆ ನೀವು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ನಂತರ ಶಬರಿಮಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವಸ್ವಂ ಸಚಿವ ಕೆ ರಾಧಾಕೃಷ್ಣನ್ ಅವರು ನಿರ್ದಿಷ್ಟ ನಿರ್ದೇಶನವನ್ನು ಹಿಂಪಡೆಯಲಾಗಿದೆ. ಈ ವರ್ಷದ ಕೈಪಿಡಿಯಲ್ಲಿ ತಪ್ಪಾಗಿ ನಿರ್ದೇಶನ ಬಂದಿದೆ ಎಂದು ಸ್ಪಷ್ಟಪಡಿಸಿದರು. ಈ ವಿಚಾರದಲ್ಲಿ ಸರ್ಕಾರಕ್ಕೆ ಯಾವುದೇ ದುರುದ್ದೇಶವಿಲ್ಲ, ನಿರ್ದೇಶನಗಳಲ್ಲಿ ಲೋಪಗಳಿದ್ದರೆ ಅದನ್ನು ಹಿಂಪಡೆಯಲು ನಿರ್ದೇಶನ ನೀಡಲಾಗುವುದು ಎಂದು ಹೇಳಿದರು.

ಹೊಸ ಕೈಪಿಡಿ ವಿತರಣೆ
ವಿತರಿಸಿರುವ ಕೈಪಿಡಿ ವಿಚಾರ ಸಂಬಂಧ ಸಚಿವರು ಎಡಿಜಿಪಿ ಎಂಆರ್ ಅಜಿತ್ ಕುಮಾರ್ ಅವರಿಂದ ವಿವರಣೆ ಕೇಳಿದ್ದರು. ಇದು ಅಜಾಗರೂಕತೆಯಿಂದ ನಡೆದ ಪ್ರಮಾದವಾಗಿದೆ ಎಂದು ಅಧಿಕಾರಿ ಒಪ್ಪಿಕೊಂಡರು. ಶೀಘ್ರದಲ್ಲೇ ಹೊಸ ಕೈಪಿಡಿ ವಿತರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಶಬರಿಮಲೆಯನ್ನು ಮತ್ತೆ ಯುದ್ಧಭೂಮಿಯನ್ನಾಗಿಸುವ ಕುತಂತ್ರ
ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶ ಮತ್ತು 2018ರಲ್ಲಿ ನಡೆದ ಪ್ರತಿಭಟನೆಗಳ ಬಗ್ಗೆ ನೇರವಾಗಿ ಪ್ರಸ್ತಾಪಿಸದೆ ಬಿಜೆಪಿ ರಾಜ್ಯ ಮುಖ್ಯಸ್ಥ ಕೆ. ಸುರೇಂದ್ರನ್, ಶಬರಿಮಲೆಯನ್ನು ಮತ್ತೆ ಯುದ್ಧಭೂಮಿಯನ್ನಾಗಿ ಮಾಡುವ ನಿರ್ಧಾರ ಮತ್ತು ಭಕ್ತರನ್ನು ಗುರಿಯಾಗಿಸುವ ನಿರ್ಧಾರವಾಗಿದ್ದರೆ ಅದು ನಿಮ್ಮ ಭ್ರಮೆ ನಾವು ಏನನ್ನೂ ಮರೆತಿಲ್ಲ. ಈ ಹಿಂದೆ ಸರ್ಕಾರವು ಆ ವಿಷಯಗಳಿಂದ ಹಿಂದೆ ಸರಿದಿತ್ತು. ನೀವು ಮತ್ತೆ ಇಂತಹ ನಡೆಗಳಿಗೆ ಮುಂದಾದರೆ ಅದು ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಅವರು ಹೇಳಿದರು.

ವಾರ್ಷಿಕ ತೀರ್ಥಯಾತ್ರೆ ಆರಂಭ
ಕೇರಳದ ಪಟ್ಟನಂತಿಟ್ಟ ಜಿಲ್ಲೆಯಲ್ಲಿರುವ ಶಬರಿಮಲೆಯಲ್ಲಿರುವ ಅಯ್ಯಪ್ಪ ದೇವಾಲಯದ ಬಾಗಿಲುಗಳನ್ನು ವಾರ್ಷಿಕ ಮಂಡಲಂ ಮಕರವಿಳಕ್ಕು ಉತ್ಸವಗಳಿಗಾಗಿ ಭಕ್ತರ ದರ್ಶನಕ್ಕೆ ಬುಧವಾರ ತೆರೆಯಲಾಗಿತ್ತು. ಇದರಿಂದ ಎರಡು ತಿಂಗಳುಗಳ ಕಾಲ ನಡೆಯುವ ಭಕ್ತರ ವಾರ್ಷಿಕ ತೀರ್ಥಯಾತ್ರೆ ಆರಂಭವಾಗಿತ್ತು.

ಈ ವರ್ಷ 40 ಲಕ್ಷ ಜನ ಭಕ್ತರ ಭೇಟಿ ನಿರೀಕ್ಷೆ
ಕಳೆದ ಎರಡು ವರ್ಷ ಗಳಿಂದ ಸಾಂಕ್ರಾಮಿಕ ಪ್ರೋಟೋಕಾಲ್ ತೆಗೆದುಹಾಕಲಾಗಿದ್ದು, ಕೋವಿಡ್ ವೇಳೆ ಹಾಕಲಾಗಿದ್ದ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಪ್ರಧಾನ ಅರ್ಚಕರ ಪ್ರಕಾರ ಈ ವರ್ಷ ಶಬರಿಮಲೆಗೆ 40 ಲಕ್ಷ ಜನ ಭಕ್ತರು ಭೇಟಿ ನೀಡುತ್ತಾರೆ ಎಂದು ನಿರೀಕ್ಷಿಸಲಾಗಿದೆ. 41 ದಿನಗಳ ಮಂಡಲ ಋತುವು ಮಲಯಾಳಂ ಕ್ಯಾಲೆಂಡರ್ ವೃಶ್ಚಿಕಂ ತಿಂಗಳ ಪ್ರಾರಂಭದೊಂದಿಗೆ ಆರಂಭವಾಗಿ ಡಿಸೆಂಬರ್ 27ರಂದು ಕೊನೆಗೊಳ್ಳುತ್ತದೆ.












Click it and Unblock the Notifications