ಯಾವುದಕ್ಕೂ ಸಿದ್ಧವಿರುವಂತೆ ಬಿಜೆಪಿಗೆ ಆರೆಸ್ಸೆಸ್ ಸಲಹೆ
ನವದೆಹಲಿ, ಮೇ.12: ಚುನಾವಣಾ ಪೂರ್ವ ಸಮೀಕ್ಷೆಗಳು ಈ ಬಾರಿ ಬಿಜೆಪಿಗೆ ಅತೀ ಹೆಚ್ಚಿನ ಸ್ಥಾನ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದರೂ, ಸ್ವತಃ 272 ಸ್ಥಾನ ಗೆಲ್ಲುವುದು ಕಷ್ಟ ಎಂದು ಬಿಜೆಪಿಗೆ ಅನ್ನಿಸಿರಬೇಕು.
ಹೀಗಾಗಿ, ಆದಷ್ಟೂ ಕಾಂಗ್ರೆಸ್ ವಿರೋಧಿ ಪ್ರಾದೇಶಿಕ, ಸಣ್ಣಪುಟ್ಟ ಪಕ್ಷಗಳನ್ನು ತನ್ನ ತೆಕ್ಕೆಗೆ ಸೆಳೆದುಕೊಂಡು ಸ್ಥಿರವಾದ ಸರ್ಕಾರ ನಡೆಸುವಂತೆ ಪಕ್ಷಕ್ಕೆ ಆರ್ ಎಸ್ ಎಸ್ ಸಲಹೆ ನೀಡಿದೆ.
ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಈ ಕುರಿತು ಆರ್‌ಎಸ್‌ಎಸ್ ನಾಯಕರ ಜೊತೆ ಭಾನುವಾರ ದೆಹಲಿಯಲ್ಲಿ ಗಂಭೀರ ಸಮಾಲೋಚನೆ ನಡೆಸಿದರು. ಚುನಾವಣೆ, ಸರ್ಕಾರ ರಚನೆ ಬಗ್ಗೆ ಸುಮಾರು ಎರಡು ಗಂಟೆಗೂ ಅಧಿಕ ಕಾಲ ಚರ್ಚೆ ಮಾಡಿದ್ದಾರೆ.

ಈ ಚರ್ಚೆಯಲ್ಲಿ ಆರ್‌ಎಸ್‌ಎಸ್ ಸಂಚಾಲಕ ಮೋಹನ್ ಭಾಗವತ್ ಹಾಜರಿರಲಿಲ್ಲ. ಆದರೆ, ಆರ್‌ಎಸ್‌ಎಸ್ ಮುಖಂಡರಾದ ಭಯ್ಯಾಜಿ ಜೋಶಿ, ಸುರೇಶ್ ಸೋನಿ, ದತ್ತಾತ್ರೇಯ ಹೊಸಬಾಳೆ ಉಪಸ್ಥಿತರಿದ್ದರು.
ಇದೇ ವೇಳೆ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರುವ ಸಾಧ್ಯತೆ ನಿಚ್ಛಳವಾಗಿದೆ. ಮುಂದಿನ ಜವಾಬ್ದಾರಿಗಳನ್ನು ಈಗಲೇ ಎಚ್ಚರಿಕೆಯಿಂದ ನಿಭಾಯಿಸುವಂತೆಯೂ ಆರ್‌ಎಸ್‌ಎಸ್ ಸಲಹೆ ನೀಡಿದೆ ಎಂದು ಮೂಲಗಳು ತಿಳಿಸಿದೆ.
ಈ ಚರ್ಚೆಯ ಬಗ್ಗೆ ರಾಜನಾಥ್ ಸಿಂಗ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಂಘದ ಕಾರ್ಯಕರ್ತರು ಕಠಿಣ ಪರಿಶ್ರಮ ಪಟ್ಟಿದ್ದಾರೆ.ಈ ಕಾರಣಕ್ಕೆ ಸಂಘಕ್ಕೆ ಕೃತಜ್ಞತೆ ಸಲ್ಲಿಸಲು ರಾಜನಾಥ್ ಸಿಂಗ್ ಆರ್‌ಎಸ್‌ಎಸ್ ನಾಯಕರನ್ನು ಭೇಟಿ ಮಾಡಲು ಬಂದಿದ್ದರು.












Click it and Unblock the Notifications