ದೀದಿ-ಕೆಸಿಆರ್ ಭೇಟಿ: ಇದು ತೃತೀಯ ರಂಗದ ಆರಂಭ ಎಂದ ತೆಲಂಗಾಣ ಸಿಎಂ
ಕೊಲ್ಕತ್ತಾ, ಮಾರ್ಚ್ 20: ಮಹತ್ವದ ಬೆಳವಣಿಗೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಭೇಟಿಯಾಗಿದ್ದಾರೆ. ಸೋಮವಾರ ಕೊಲ್ಕೊತ್ತಾಗೆ ತೆರಳಿ ಅವರು ದೀದಿಯನ್ನು ಭೇಟಿಯಾಗಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಭೇಟಿ ವೇಳೆ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನ್ನು ಎದುರಿಸಲು ತೃತೀಯ ರಂಗ ರಚನೆ ಸಂಬಂಧ ಚರ್ಚೆ ನಡೆಸಿದ್ದಾರೆ.
ಮಮತಾ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಾವ್, ದೇಶಕ್ಕೆ ಪರ್ಯಾಯ ಪರಿಕಲ್ಪನೆಯ ಅಗತ್ಯವಿದೆ ಮತ್ತು ಪರ್ಯಾಯ ರಾಜಕೀಯ ಶಕ್ತಿ ಬೇಕಾಗಿದೆ ಎಂದಿದ್ದಾರೆ.

"ದೇಶಕ್ಕೆ ಒಳ್ಳೆಯದು ಬೇಕಾಗಿದೆ. ಬಿಜೆಪಿ ಹೋಗಿ ಕಾಂಗ್ರೆಸ್ ಬಂದರೆ ಏನು ಬದಲಾವಣೆಯಾಗುತ್ತದೆ? ಯಾವುದಾದರೂ ಪವಾಡ ನಡೆಯುತ್ತದೆಯೇ? ನಾವು ಸಮಾನ ಸಿದ್ಧಾಂತ ಹೊಂದಿರುವ ಪಕ್ಷಗಳ ಜತೆ ಸಮಾಲೋಚನೆ ನಡೆಸುತ್ತಿದ್ದೇವೆ," ಎಂದರು.
ಇದು ತೃತೀಯ ರಂಗದ ಆರಂಭ ಎಂದು ಬಣ್ಣಿಸಿದ ಅವರು, ತೃತೀಯ ರಂಗ ಜನರ ರಂಗವಾಗಿರಲಿದೆ ಎಂದಿದ್ದಾರೆ.
ಇತ್ತೀಚೆಗೆ ಕೆಸಿಆರ್ ದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯೇತರ ರಂಗವನ್ನು ರಚಿಸಲಾಗುವುದು ಎಂದಿದ್ದರು. ಇದೀಗ ಈ ಸಂಬಂಧ ಪರ್ಯಾಯ ಶಕ್ತಿ ಒಟ್ಟುಗೂಡಿಸಲು ಅವರು ಅಖಾಡಕ್ಕೆ ಧುಮುಕಿದ್ದಾರೆ.












Click it and Unblock the Notifications