ಮಗ ರಾಜೀನಾಮೆ ಕೊಡ್ತಾನೆ, ಬಿಟ್ಟುಬಿಡಿ: ಉಗ್ರರೆದುರು ಅಂಗಲಾಚಿದ್ದ ತಾಯಿ!
ಶ್ರೀನಗರ, ಸೆಪ್ಟೆಂಬರ್ 22: "ನನ್ನ ಮಗ ಖಂಡಿತ ರಾಜೀನಾಮೆ ಕೊಡ್ತಾನೆ. ನಾನೇ ಅವನಿಗೆ ರಾಜೀನಾಮೆ ನೀಡುವಂತೆ ಹೇಳುತ್ತೇನೆ. ದಯವಿಟ್ಟು ಅವನನ್ನು ಬಿಟ್ಟುಬಿಡಿ" ಎಂದು ವೃದ್ಧ ತಾಯಿಯೊಬ್ಬರು ಕೈಮುಗಿದು ಅಂಗಲಾಚುತ್ತಿರುವ ದೃಶ್ಯ ಕಣ್ಣೀರುಕ್ಕಿಸುತ್ತದೆ.
ಆದರೆ ಆ ತಾಯಿಯ ದೈನ್ಯ ತುಂಬಿದ ಧ್ವನಿಯನ್ನೂ ಕೇಳಿಸಿಕೊಳ್ಳದೆ, ತಾವು ಅಪಹರಿಸಿದ ಅವರ ಮಗನನ್ನು ಉಗ್ರರು ಗುಂಡಿನ ಸುರಿಮಳೆ ಗೈದು, ಚಿತ್ರಹಿಂಸೆ ನೀಡಿ ಕೊಂದಿದ್ದಾರೆ.
ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಶುಕ್ರವಾರ ಮೂವರು ಭಾರತೀಯ ಪೊಲೀಸರನ್ನು ಅಪಹರಿಸಿದ್ದ ಉಗ್ರರು ಅವರನ್ನು ಚಿತ್ರಹಿಂಸೆ ನೀಡಿ ಕೊಂದಿದ್ದರು. ಆದರೆ ಆ ಪೊಲೀಸರನ್ನು ಅಪಹರಿಸುತ್ತಿದ್ದಂತೆಯೇ ನಿಸಾರ್ ಅಹ್ಮದ್ ಎಂಬ ಪೊಲೀಸನ ತಾಯಿ, ತಮ್ಮ ಪುತ್ರನನ್ನು ಬಿಟ್ಟುಬಿಡುವಂತೆ ಅಂಗಲಾಚಿದ್ದರು. ಈ ವಿಡಿಯೋ ಎಲ್ಲೆಡೆ ಪ್ರಸಾರವಾಗಿತ್ತು. ಕನಿಷ್ಠಪಕ್ಷ ಆ ವಿಡಿಯೋವನ್ನು ನೋಡಿಯಾದರೂ ಕ್ರೂರ ಭಯೋತ್ಪಾದಕರ ಮನಸ್ಸು ಕರಗಲಿ ಎಂಬುದು ಆ ತಾಯಿಯ ಆಶಯವಾಗಿತ್ತು. ಆದರೆ ಅವರ ಈ ಯಾವ ಮಾತೂ, ಆರ್ತನಾದವೂ ಪೊಲೀಸರ ಮನ ಕರಗಿಸಲಿಲ್ಲ.

44 ವರ್ಷ ವಯಸ್ಸಿನ ನಿಸಾರ್ ಅಹ್ಮದ್, ಅವರ ಕುಟುಂಬಕ್ಕಿದ್ದ ಏಕೈಕ ಆಸರೆ. 70 ವರ್ಷಕ್ಕೂ ಹೆಚ್ಚು ವಯಸ್ಸಾದ ಪಾಲಕರು, ಇಬ್ಬರು ಮಕ್ಕಳು ಮತ್ತು ಪತ್ನಿಯನ್ನು ತೊರೆದು ನಿಸಾರ್ ಅಹ್ಮದ್ ಇಹಲೋಕದ ಪಯಣ ಮುಗಿಸಿದ್ದಾರೆ. ಯಾವ ತಪ್ಪನ್ನೂ ಮಾಡಿರದ ನಿಸಾರ್, ಉಗ್ರರ ಕ್ರೌರ್ಯಕ್ಕೆ, ಅಮಾನವೀಯ ಮನಸ್ಥಿತಿಗೆ ಬಲಿಯಾಗಿದ್ದಾರೆ.












Click it and Unblock the Notifications