ಮಾರ್ಚ್ 9ರವರೆಗೆ ಕಾರ್ತಿ ಚಿದಂಬರಂಗೆ ಸಿಬಿಐ ಕಸ್ಟಡಿಯೇ ಗತಿ
ನವದೆಹಲಿ, ಮಾರ್ಚ್ 6: ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಸಿಬಿಐ ಕಸ್ಟಡಿ ಅವಧಿಯನ್ನು ಮಾರ್ಚ್ 9ರವರೆಗೆ ವಿಸ್ತರಣೆ ಮಾಡಲಾಗಿದೆ.
ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಕಾರ್ತಿ ಚಿದಂಬರಂರನನ್ನು ಮತ್ತೆ ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿ ಇಂದು ಪಟಿಯಾಲ ಹೌಸ್ ನ್ಯಾಯಾಲಯ ಆದೇಶ ನೀಡಿತು. ಮತ್ತು ಮುಂದಿನ ವಿಚಾರಣೆಯನ್ನು ಮಾರ್ಚ್ 9ಕ್ಕೆ ಮುಂದೂಡಿದೆ.
ಇಂದು ತನಿಖಾ ಸಂಸ್ಥೆ ಮುಚ್ಚಿದ ಲಕೋಟೆಯಲ್ಲಿ ಕಳೆದ 6 ದಿನಗಳಲ್ಲಿ ಕೈಗೊಂಡ ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿತು. ಪ್ರಶ್ನೆಗಳಿಗೆ ಉತ್ತರಿಸುವಾಗ ಕಾರ್ತಿ ಚಿದಂಬರಂ ಹಲವು ವಿಷಯಗಳನ್ನು ಮುಚ್ಚಿಟ್ಟರೂ ಪ್ರಮುಖ ಮಾಹಿತಿಗಳನ್ನು ಕಲೆ ಹಾಕಿರುವುದಾಗಿ ಇದೇ ಸಂದರ್ಭದಲ್ಲಿ ಸಿಬಿಐ ವಕೀಲ ವಿಕೆ ಶರ್ಮಾ ನ್ಯಾಯಾಲಯಕ್ಕೆ ತಿಳಿಸಿದರು.

ಇನ್ನು ವಿಚಾರಣೆ ವೇಳೆ ಕೋರ್ಟ್ ಹಾಲ್ ನಲ್ಲಿ ಉಪಸ್ಥಿತರಿದ್ದ ತಂದೆ ಚಿದಂಬರಂ ಮತ್ತು ತಾಯಿ ನಳಿನಿ ಚಿದಂಬರಂರನ್ನು 10 ನಿಮಿಷಗಳ ಕಾಲ ಭೇಟಿಯಾಗಲು ಕಾರ್ತಿ ಚಿದಂಬರಂಗೆ ನ್ಯಾಯಾಧೀಶರು ಅವಕಾಶ ನೀಡಿದರು.
ಈ ಹಿಂದೆ ಮಾರ್ಚ್ 1, 2018ರಂದು ಕಾರ್ತಿ ಚಿದಂಬರಂರನ್ನು 5 ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಲಾಗಿತ್ತು. ಪ್ರಕರಣದಲ್ಲಿ ಇನ್ನೂ ಹೆಚ್ಚಿನ ತನಿಖೆ ಅಗತ್ಯವಿದೆ. ಮತ್ತು ಕಾರ್ತಿ ಚಿದಂಬರಂ ನಮ್ಮ ವಶದಲ್ಲಿರುವುದು ಅಗತ್ಯವಾಗಿದೆ ಎಂದು ಸಿಬಿಐ ವಾದಿಸಿದ ಹಿನ್ನಲೆಯಲ್ಲಿ ನ್ಯಾಯಾಧೀಶರು ಇನ್ನೂ ಮೂರು ದಿನಗಳ ಕಾಲ ಅವರನ್ನು ಸಿಬಿಐ ವಶಕ್ಕೆ ನೀಡಿದ್ದಾರೆ.
ಕಳೆದ 5 ದಿನಗಳ ವಿಚಾರಣೆಯಚಲ್ಲಿ ಕಾರ್ತಿ ಚಿದಂಬರಂನ್ನು ಐಎನ್ಎಕ್ಸ್ ಮೀಡಿಯಾದ ಮಾಜಿ ನಿರ್ದೇಶಕಿ ಇಂದ್ರಾಣಿ ಮುಖರ್ಜಿ ಬಂಧಿತರಾಗಿರುವ ಮುಂಬೈನ ಬೈಕುಲ್ಲಾ ಜೈಲಿಗೆ ಕರೆದೊಯ್ದು ಮುಖಾಮುಖಿ ವಿಚಾರಣೆ ನಡೆಸಲಾಗಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ಮಾಹಿತಿ ನೀಡಿತು.












Click it and Unblock the Notifications