Karnataka vs Namibia: ನಮೀಬಿಯಾ ವಿರುದ್ಧ ಸರಣಿ ಗೆದ್ದು ಬೀಗಿದ ಕರ್ನಾಟಕ ತಂಡ
ಕರ್ನಾಟಕ ಕ್ರಿಕೆಟ್ ತಂಡ ನಮೀಬಿಯಾ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಯನ್ನು 3-2 ಅಂತರದಲ್ಲಿ ಗೆದ್ದು ಇತಿಹಾಸ ನಿರ್ಮಿಸಿದೆ. ರಾಜ್ಯ ತಂಡವೊಂದು ಅಂತಾರಾಷ್ಟ್ರೀಯ ತಂಡದ ವಿರುದ್ಧ ಸರಣಿ ಆಡಿದ್ದಲ್ಲದೆ, ಅದನ್ನು ಗೆದ್ದಿರುವುದು ಕರ್ನಾಟಕ ಕ್ರಿಕೆಟ್ ತಂಡ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
5 ಪಂದ್ಯಗಳ ಸರಣಿಯಲ್ಲಿ ಕರ್ನಾಟಕ ಮೊದಲನೇ ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ್ದರೆ, ಎರಡನೇ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ನಮೀಬಿಯಾ ಕರ್ನಾಟಕ ನೀಡಿದ್ದ 361 ರನ್‌ಗಳ ಬೃಹತ್ ಗುರಿಯನ್ನು 5 ವಿಕೆಟ್ ಕಳೆದುಕೊಂಡು ಬೆನ್ನಟ್ಟುವ ಮೂಲಕ 5 ವಿಕೆಟ್ ಗೆಲುವು ಸಾಧಿಸಿ ಸರಣಿ ಸಮಬಲಗೊಳಸಿತ್ತು.

ಆದರೆ, ಸರಣಿಯ ಮೂರನೇ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಕರ್ನಾಟಕ 227 ರನ್‌ಗಳ ಗುರಿಯನ್ನು ಕೇವಲ 1 ವಿಕೆಟ್ ಕಳೆದುಕೊಂಡು ಬೆನ್ನಟ್ಟುವ ಮೂಲಕ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. ನಾಲ್ಕನೇ ಪಂದ್ಯದಲ್ಲಿ ನಮೀಬಿಯಾ ನೀಡಿದ್ದ 254 ರನ್‌ಗಳ ಸವಾಲಿನ ಗುರಿಯನ್ನು 47.1 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಬೆನ್ನಟ್ಟಿದ್ದ ಕರ್ನಾಟಕ 5 ವಿಕೆಟ್ ಜಯ ಸಾಧಿಸುವ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಸರಣಿ ಗೆಲುವನ್ನು ಖಚಿತಪಡಿಸಿಕೊಂಡಿತ್ತು.
ಅಂತಿಮ ಪಂದ್ಯದಲ್ಲಿ ಗೆದ್ದ ನಮೀಬಿಯಾ
ಸರಣಿಯ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ 48.1 ಓವರ್ ಗಳಲ್ಲಿ 231 ರನ್ ಗಳಿಸುವುಷ್ಟರಲ್ಲಿ ಆಲೌಟ್ ಆಗಿತ್ತು. ಕಿಶನ್ ಬೆದರೆ 43 ರನ್ ಗಳಿಸಿದ್ದರೆ, ಕೃತಿಕ್ ಕೃಷ್ಣ 25, ನಿಕಿನ್ ಜೋಸ್ 61, ಅನೀಶ್ವರ್ ಗೌತಮ್ 29 ರನ್ ಗಳಿಸಿ ಸವಾಲಿನ ಮೊತ್ತ ಕಲೆ ಹಾಕುವಲ್ಲಿ ಕಾರಣವಾಗಿದ್ದರು.
ಈ ಮೊತ್ತವನ್ನು ಬೆನ್ನತ್ತಿದ ನಮೀಬಿಯಾ 39.1 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 236 ರನ್ ಗಳಿಸುವ ಮೂಲಕ 5 ವಿಕೆಟ್‌ಗಳ ಗೆಲುವು ಸಾಧಿಸಿತು. ಕೊನೆಯ ಪಂದ್ಯವನ್ನು ನಮೀಬಿಯಾ ಗೆದ್ದರೂ ಕರ್ನಾಟಕ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಸರಣಿಯಲ್ಲಿ ಮಿಂಚಿದ ಎಲ್‌ಆರ್ ಚೇತನ್
ಕರ್ನಾಟಕ ತಂಡದ ಯುವ ಬ್ಯಾಟರ್ ಎಲ್‌ಆರ್ ಚೇತನ್ ನಮೀಬಿಯಾ ವಿರುದ್ಧದ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಮಾಡುವ ಮೂಲಕ ಗಮನ ಸೆಳೆದರು. 5 ಪಂದ್ಯಗಳಲ್ಲಿ 98.75 ಸರಾಸರಿಯಲ್ಲಿ ಅವರು 395 ರನ್ ಗಳಿಸಿದರೆ, ನಿಕಿನ್ ಜೋಸ್ 125.67 ಸರಾಸರಿಯಲ್ಲಿ 377 ರನ್ ಗಳಿಸಿ ಮಿಂಚಿದರು.
ಇವರಿಬ್ಬರ ಬ್ಯಾಟಿಂಗ್ ಬಲದಿಂದಲೇ ಕರ್ನಾಟಕ ಹೆಚ್ಚಿನ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಯಿತು. ಇನ್ನಿಂಗ್ಸ್ ಒಂದರಲ್ಲಿ 196 ರನ್ ಗಳಿಸಿದ ಎಲ್‌ಆರ್ ಚೇತನ್ ಸರಣಿಯಲ್ಲಿ ಅತ್ಯಧಿಕ ವೈಯಕ್ತಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಸರಣಿಯಲ್ಲಿ ಎರಡು ಶತಕ ಗಳಿಸಿ ಮಿಂಚಿದ್ದರು.
ವಿದ್ವತ್ ಕಾವೇರಪ್ಪ 4 ಪಂದ್ಯಗಳಲ್ಲಿ 21.83 ಸರಾಸರಿಯಲ್ಲಿ 6 ವಿಕೆಟ್ ಪಡೆದು, ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿಕೊಂಡರು. ಶುಭಾಂಗ್ ಹೆಗಡೆ 5 ಪಂದ್ಯಗಳಲ್ಲಿ 5 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.
ಕರ್ನಾಟಕ ರಾಜ್ಯ ತಂಡ ಅಂತಾರಾಷ್ಟ್ರೀಯ ತಂಡದ ವಿರುದ್ಧ ಸರಣಿಯನ್ನು ಆಡಿದ್ದು ಮಾತ್ರವಲ್ಲದೇ, ಭರ್ಜರಿ ಗೆಲುವು ಸಾಧಿಸಿರುವುದು ಕ್ರೀಡಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಕರ್ನಾಟಕ ಹೀಗೆ ಅಂತಾರಾಷ್ಟ್ರೀಯ ತಂಡಗಳ ಜೊತೆ ಕ್ರಿಕೆಟ್ ಆಡುವುದನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications