Cauvery Dispute: ಕರ್ನಾಟಕ ರಕ್ಷಣಾ ವೇದಿಕೆಯಿಂದ ನಾಳೆ ದೆಹಲಿಯಲ್ಲಿ ಭಾರಿ ಪ್ರತಿಭಟನೆ
ಕನ್ನಡಿಗರ ಕಾವೇರಿ ಹೋರಾಟ ದೆಹಲಿಗೆ ತಲುಪಿದೆ, ಅಕ್ಟೋಬರ್ 18ರಂದು ದೆಹಲಿಯ ಜಂತರ್ ಮಂತರ್ ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಭಾರಿ ಪ್ರತಿಭಟನೆ ಬಳಿಕ ಹೋರಾಟಗಾರರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದು, ಮನವಿ ಪತ್ರ ಸಲ್ಲಿಸಲಿದ್ದಾರೆ ಎಂದು ಕನ್ನಡ ಪ್ರಭ ವರದಿ ಮಾಡಿದೆ.

ಪ್ರತಿಭಟನೆಯಲ್ಲಿ ಭಾಗವಹಿಸಲು ಈಗಾಗಲಿ ಬೆಳಗಾವಿಯಿಂದ ನೂರಾರು ಜನ ರೈಲಿನಲ್ಲಿ ದೆಹಲಿಯತ್ತ ತೆರಳಿದ್ದಾರೆ, ಹೈದರಾಬಾದ್‌ನಿಂದ 300 ಜನ ದೆಹಲಿಗೆ ತೆರಳಿದ್ದು, ಕಲಬುರ್ಗಿ ಮತ್ತು ರಾಯಚೂರಿನಿಂದ ಕೂಡ ಹೋರಾಟಗಾರರು ಭಾಗವಹಿಸಲಿದ್ದಾರೆ, ಮಂಗಳವಾರ ಬೆಂಗಳೂರಿನಿಂದ ಸುಮಾರು 700 ಮಂದಿ ದೆಹಲಿಗೆ ಹೋಗಲಿದ್ದು, ಒಟ್ಟು 2 ಸಾವಿರಕ್ಕೂ ಹೆಚ್ಚು ಮಂದಿ ಧರಣಿಯಲ್ಲಿ ಭಾಗವಹಿಸುತ್ತಾರೆ ಎಂದು ಕರವೇ ಮಾಹಿತಿ ನೀಡಿದೆ.

ಪ್ರಧಾನಿ ಮೋದಿ ಭೇಟಿಗೆ ಅವಕಾಶ
ಪ್ರತಿಭಟನೆಯಲ್ಲಿ ಸುಮಾರು 2000 ಜನ ಭಾಗವಹಿಸಲಿದ್ದು, ಬುಧವಾರ ಬೆಳಗ್ಗೆ 11 ಗಂಟೆಯಿಂದ 1 ಗಂಟೆಯವರೆಗೆ ಪ್ರತಿಭಟನೆ ನಡೆಯಲಿದೆ. ಮೆರವಣಿಗೆಗ ಅವಕಾಶ ನೀಡದ ಕಾರಣ ಧರಣಿ ಮಾಡಲು ನಿರ್ಧರಿಸಲಾಗಿದೆ. ನಾನು ಮತ್ತು ದೆಹಲಿ ಕನ್ನಡ ಸಂಘದ ಅಧ್ಯಕ್ಷರು ಜೊತೆಯಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದೇವೆ, ಅವರ ಭೇಟಿಗೆ ಕಾಲಾವಕಾಶ ನೀಡಿದ್ದಾರೆ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಹೇಳಿರುವುದಾಗಿ ಕನ್ನಡಪ್ರಭ ವರದಿ ಮಾಡಿದೆ.
ರಾಜ್ಯವನ್ನು ಪ್ರತಿನಿಧಿಸುವ ರಾಜ್ಯ ಸಭೆ ಸದಸ್ಯರು, ಸಂಸದರು, ಕೇಂದ್ರದ ಮಂತ್ರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ಕೊಡುವಂತೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದೆ. ಅವರು ನಮ್ಮ ಹೋರಾಟಕ್ಕೆ ಬೆಂಬಲ ಕೊಡದಿದ್ದರೆ ರಾಜ್ಯಕ್ಕೆ ಕಾಲಿಡಲು ಬಿಡಲ್ಲ, ಪ್ರತಿಭಟನೆ ಮಾಡುತ್ತೇವೆ, ಮಸಿ ಬಳಿದು, ಕಪ್ಪು ಬಾವುಟ ಪ್ರದರ್ಶಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಧಾನಿ ಮಧ್ಯಸ್ತಿಕೆಗೆ ಒತ್ತಾಯ
ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುವಾಗ ಕಾವೇರಿ ವಿಚಾರದಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಲು ಸಾಧ್ಯವಿಲ್ಲ ಎನ್ನುವ ಹೇಳಿಕೆಯನ್ನು ಒಪ್ಪಲು ಆಗಲ್ಲ, ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕಾವೇರಿ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿದ್ದರು. ಎಸ್‌ಎಂ ಕೃಷ್ಣ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕಾವೇರಿ ಸಮಸ್ಯೆ ಉಂಟಾದಾಗ ಪ್ರಧಾನಿಯಾಗಿದ್ದ ವಾಜಪೇಯಿ ಕೂಡ ಸಭೆ ಮಾಡಿದ್ದರು, ಈಗಲೂ ಅದೇ ರೀತಿ ಮಧ್ಯಸ್ಥಿಕೆ ವಹಿಸಬೇಕು ಎಂದು ಕರವೇ ಒತ್ತಾಯಿಸಿದೆ.












Click it and Unblock the Notifications