Cyclone Dana: ತೀವ್ರಗೊಂಡ ವಾಯುಭಾರ ಕುಸಿತ: 01 ವಾರ ರಣಮಳೆ, ಪ್ರವಾಹ ಜನಜೀವನ ಅಸ್ತವ್ಯಸ್ತ ಆತಂಕ
ಬೆಂಗಳೂರು, ಅಕ್ಟೋಬರ್ 21: ಹಿಂಗಾರು ಮಳೆ ಸುರಿಸುವ ಮಾರುತಗಳ ಸಕ್ರಿಯವಾಗುವ ಹೊತ್ತಿಗೆ ಸಮುದ್ರಮಟ್ಟದಲ್ಲಿ ಆಗಿರುವ ಬದಲಾವಣೆಗಳಿಂದ ಚಂಡಮಾರುತ 'ಡಾನಾ' ಸೃಷ್ಟಿಯಾಗಿದೆ. ಬಂಗಾಳಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ ನಿರ್ಮಾಣವಾಗಿದೆ. ಇದರಿಂದ ಕರ್ನಾಟಕ, ತಮಿಳುನಾಡು ಸೇರಿದಂತೆ ಕರಾವಳಿಯ ರಾಜ್ಯಗಳಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಈ ವೈಪರಿತ್ಯ ತೀವ್ರಗೊಂಡರೆ ಇದು ಚಂಡಮಾರುತವಾಗಿ ಬದಲಾಗಲಿದೆ. ಮುಂದಿನ ಒಂದು ವಾರ ಭರ್ಜರಿ ಮಳೆ, ಪ್ರವಾಹ, ನೆರೆ ಭೀತಿ ಎದುರಾಗಿದೆ. ಜನಜೀವನ ಮತ್ತೆ ಅಸ್ತವ್ಯಸ್ತಗೊಳ್ಳುವ ಆತಂಕ ಉಂಟಾಗಿದೆ.
ಒಂದು ಚಂಡಮಾರುತದ ಪರಿಚಲನೆಯು ನೈಋತ್ಯ ಮತ್ತು ಪಕ್ಕದ ಪಶ್ಚಿಮ ಮಧ್ಯ ಬಂಗಾಳಕೊಲ್ಲಿಯಲ್ಲಿ ನಿರ್ಮಾಣವಾಗಿದೆ. ಮತ್ತೊಂದು ಉತ್ತರ ತಮಿಳುನಾಡು ಕರಾವಳಿಯು ಸಮುದ್ರ ಮಟ್ಟದಿಂದ 5.8 ಕಿ.ಮೀ ವರೆಗೆ ಎತ್ತರದಲ್ಲಿ ನಿರ್ಮಾಣವಾಗಿದೆ. ಸುಳಿಗಾಳಿ ರೀತಿಯಲ್ಲಿ ನಿರಂತರವಾದ ಚಲನೆಯಿಂದಾಗಿ ಕಡಿಮೆ ಒತ್ತಡದ ಪ್ರದೇಶ ಇಲ್ಲಿ ನಿರ್ಮಾಣವಾಗುತ್ತದೆ. ಅದರ ಭೀಕರತೆ ಮುಂದುವರಿದರೆ, ಅದು ಚಂಡಮಾರುತವಾಗಿ ಬದಲಾಗುವುದರಲ್ಲಿ ಸಂದೇವೇ ಇಲ್ಲ ಎನ್ನುತ್ತಾರೆ ಹವಾಮಾನ ತಜ್ಞರು.

ಪೂರ್ವ ಮಧ್ಯ ಅರೇಬಿಯನ್ ಸಮುದ್ರದ ಮೇಲಿನ ಕಡಿಮೆ ಒತ್ತಡದ ಪ್ರದೇಶದ ಮಧ್ಯಭಾಗದಿಂದ ದಕ್ಷಿಣ ಕರ್ನಾಟಕ ಮತ್ತು ರಾಯಲಸೀಮಾದಾದ್ಯಂತ ಅಂದರೆ, ದಕ್ಷಿಣ ಆಂಧ್ರಪ್ರದೇಶದ ಕರಾವಳಿಯವರೆಗೆ ಸಮುದ್ರ ಮಟ್ಟದಿಂದ 3.1 ಕಿಮೀ ವರೆಗೆ ಟ್ರಫ್ (ಸುಳಿಗಾಳಿ) ವ್ಯಾಪಿಸಿದೆ. ಇದು ವಾಯುಭಾರ ಕುಸಿತದ ಆರಂಭಿಕ ಹಂತವಾಗಿದೆ. ಸದ್ಯಕ್ಕೆ ಇದರ ತೀವ್ರತೆ ತಕ್ಕ ಮಟ್ಟಿಗೆ ಇದೆ.
200 ಮಿಲಿ ಮೀಟರ್‌ಗೆ ಹೆಚ್ಚು ಮಳೆ
ಈ ಮೇಲಿನ ವೈಪರಿತ್ಯಗಳು ಭೂಮಿಗೆ ಬೇಗ ಅಪ್ಪಳಿಸಿದರೆ, ಆ ಭಾಗದಲ್ಲಿ ಮೂರು ದಿನ ಭಾರೀ ಮಳೆ ಆಗುತ್ತದೆ. ಪ್ರವಾಹ ಸೃಷ್ಟಿಯಾಗುತ್ತದೆ. ಆಸ್ತಿಪಾಸ್ತಿ ನಷ್ಟ ಸಾಧ್ಯತೆ ಇದೆ. ಅಲ್ಲಿಗೆ ವೈಪರಿತ್ಯ ಕೊನೆಯಾಗುತ್ತದೆ. ಅದರ ಬದಲಾಗಿ ಸಮುದ್ರ ಮಟ್ಟದಲ್ಲಿಯೇ ತೀವ್ರಗೊಂಡು, ರಣ ಸ್ವರೂಪ ಪಡೆದುಕೊಂಡರೆ, ತಮಿಳುನಾಡು, ಕರ್ನಾಟಕ, ಒಡಿಶಾ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳವರೆಗೂ ನಿತ್ಯ 200 ಮಿಲಿ ಮೀಟರ್‌ಗೆ ಹೆಚ್ಚು ಮಳೆ ಆಗುವ ಸಾಧ್ಯತೆ ಇರುತ್ತದೆ.
ಅಲ್ಲದೇ ಮಳೆ ಆಗುವ ಪ್ರದೇಶಗಳು, ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಲಿದೆ. ಕಳೆದ ಎರಡು ವಾರಗಳಿಂದಲೂ ಚಂಡಮಾರುತ ಪರಿಚಲನೆ ಕಂಡು ಬರುತ್ತಿದೆ. ಆದರೆ ಸ್ಪಷ್ಟ ಚಂಡಮಾರುತವಾಗಿರಲಿಲ್ಲ. ಇದೀಗ ಮತ್ತೊಂದು ಚಂಡಮಾರುತ ಬಿರುಗಾಳಿ, ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ.
ಕರ್ನಾಟಕ ಹಾಗೂ ತಮಿಳನಾಡಿಗೆ ಒಂದು ವಾರ ಭಾರೀ ಮಳೆ
ತಮಿಳುನಾಡು, ಚೆನ್ನೈ ಮಹಾನಗರ ಸೇರಿದಂತೆ ಕರಾವಳಿ ಸಮೀಪದ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದೆ. ಕರ್ನಾಟಕ ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಅತ್ಯಧಿಕ ಮಳೆ ಆಗುವ ಸಾಧ್ಯತೆ ಇದೆ. ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ತಜ್ಞ ಡಾ.ಸಿ.ಎಸ್.ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಳೆದ 24 ಗಂಟೆಯಿಂದ ಅತ್ಯಧಿಕ ಮಳೆ ಬರುತ್ತಿದೆ.
ಇನ್ನೂ ಬೆಂಗಳೂರು ನಗರದಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಕಂಡು ಬರಲಿದೆ. ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ ಇಲ್ಲವೇ ಗುಡುಗು ಸಹಿತ ಕೆಲವೆಡೆ ಜೋರು ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ° C ಮತ್ತು 20 ° C ಆಗಿರಬಹುದು ಎಂದು ಐಎಂಡಿ ಎಚ್ಚರಿಕೆ ನೀಡಿದೆ.












Click it and Unblock the Notifications