ಕರ್ನಾಟಕ ಚುನಾವಣಾ ಫಲಿತಾಂಶ ರಾಹುಲ್ ಗಾಂಧಿ ಪಾದಯಾತ್ರೆಯ ಅತ್ಯುತ್ತಮ ಉದಾಹರಣೆ: ಶರದ್ ಪವಾರ್
ಪುಣೆ, ಮೇ. 23: ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಪಾದಯಾತ್ರೆಯ "ಉತ್ತಮ ಉದಾಹರಣೆ" ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ವರ್ಣಿಸಿದ್ದಾರೆ. ವಯನಾಡಿನ ಮಾಜಿ ಸಂಸದ ರಾಹುಲ್ ಗಾಂಧಿ ಸಿದ್ಧಾಂತವನ್ನು ಜನರು ಬೆಂಬಲಿಸುತ್ತಾರೆ ಎಂದು ಹೇಳಿದ್ದಾರೆ.
"ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪಾದಯಾತ್ರೆಗೆ ಅತ್ಯುತ್ತಮ ಉದಾಹರಣೆಯಾಗಿದೆ. ರಾಹುಲ್ ಗಾಂಧಿ ಬಗ್ಗೆ ಯಾರು ಏನೇ ಹೇಳಿದರೂ, ಜನರು ರಾಹುಲ್ ಗಾಂಧಿಯವರ ಸಿದ್ಧಾಂತವನ್ನು ಬೆಂಬಲಿಸುತ್ತಾರೆ ಎಂದು ನನಗೆ ಖಾತ್ರಿಯಿದೆ" ಎಂದು ಶರದ್ ಪವಾರ್ ಪುಣೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ತಿಳಿಸಿದ್ದಾರೆ.

ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಕಳೆದ ವರ್ಷ ಸೆಪ್ಟೆಂಬರ್ 7 ರಂದು ಪ್ರಾರಂಭವಾಗಿ ಈ ವರ್ಷದ ಜನವರಿಯಲ್ಲಿ ಕೊನೆಗೊಂಡಿತ್ತು. 150 ದಿನಗಳ ಕಾಲ 4,000 ಕಿಲೋಮೀಟರ್ ವರೆಗೂ ಈ ಯಾತ್ರೆ ನಡೆಯಿತು. ದಕ್ಷಿನದ ಕನ್ಯಾಕುಮಾರಿಯಿಂದ ಜಮ್ಮು ಕಾಶ್ಮೀರದಲ್ಲಿ ಈ ಯಾತ್ರೆ ಕೊನೆಗೊಂಡಿತು.
ಮುಂದಿನ ಸಾರ್ವತ್ರಿಕ ಚುನಾವಣೆಗೆ ಅವರೇ ಪ್ರಧಾನಿ ಅಭ್ಯರ್ಥಿ ಎಂಬ ಪ್ರಶ್ನೆಗೆ ಶರದ್ ಪವಾರ್ ಅವರು ಚುನಾವಣೆಗೆ ಸ್ಪರ್ಧಿಸದ ಕಾರಣ ಯಾವುದೇ ಅವಕಾಶವಿಲ್ಲ ಎಂದು ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ ಹಾಗಾದರೆ ಪ್ರಧಾನಿ ಅಭ್ಯರ್ಥಿಯಾಗುವ ಪ್ರಶ್ನೆ ಎಲ್ಲಿದೆ..? ನಾನು ಪ್ರಧಾನಿಯಾಗುವ ರೇಸ್‌ನಲ್ಲಿ ಇಲ್ಲ, ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸುವ ನಾಯಕತ್ವ ನಮಗೆ ಬೇಕು ಎಂದು ತಿಳಿಸಿದ್ದಾರೆ.

" ಪ್ರತಿಪಕ್ಷಗಳನ್ನು ಒಗ್ಗೂಡಿಸಲು ತಮ್ಮ ಪ್ರಯತ್ನವಿದೆ. ಅದೇ ಪ್ರಯತ್ನಗಳನ್ನು ಬಿಹಾರ ಸಿಎಂ ನಿತೀಶ್ ಕುಮಾರ್ ಮಾಡುತ್ತಿದ್ದಾರೆ" ಎಂದು ಮುಂದಿನ ಲೋಕಸಭಾ ಚುನಾವಣೆಗೆ ಪ್ರತಿಪಕ್ಷಗಳು ಒಂದಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಮಹಾ ವಿಕಾಸ್ ಅಘಾಡಿ (ಎಂವಿಎ) ನಾಯಕರ ನಡುವೆ ಸೀಟು ಹಂಚಿಕೆ ಕುರಿತು ಮಾತನಾಡಿದ ಶರದ್ ಪವಾರ್, ಶಿವಸೇನಾ ನಾಯಕ (ಯುಬಿಟಿ ಬಣ) ಉದ್ಧವ್ ಠಾಕ್ರೆ ಮತ್ತು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಅಥವಾ ಮಲ್ಲಿಕಾರ್ಜುನ ಖರ್ಗೆ ಮತ್ತು ತಾವು ಈ ಬಗ್ಗೆ ನಿರ್ಧರಿಸುವುದಾಗಿ ಹೇಳಿದ್ದಾರೆ.
"ಸೀಟು ಹಂಚಿಕೆ ಕುರಿತು ಇನ್ನೂ ಯಾವುದೇ ಚರ್ಚೆ ನಡೆದಿಲ್ಲ. ನನ್ನ ನಿವಾಸದಲ್ಲಿ ಸಭೆ ನಡೆದಿದ್ದು, ಮೂರೂ ಪಕ್ಷಗಳ (ಎಂವಿಎ) ನಾಯಕರು ಈ ಬಗ್ಗೆ ನಿರ್ಧರಿಸುತ್ತಾರೆ ಎಂದು ಚರ್ಚಿಸಲಾಗಿದೆ. ಉದ್ಧವ್ ಠಾಕ್ರೆ, ಸೋನಿಯಾ ಗಾಂಧಿ ಅಥವಾ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ನಾನು ಅದನ್ನು ಚರ್ಚಿಸಲು ಒಟ್ಟಿಗೆ ಕುಳಿತುಕೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.












Click it and Unblock the Notifications