Revanth Reddy: ತೆಲಂಗಾಣ ಹೊಸ ಸಿಎಂ ಆಡಳಿತದ ಮುನ್ಸೂಚನೆ ನೀಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಡಿಸೆಂಬರ್ 06: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ತೆಲಂಗಾಣ ನೂತನ ಮುಖ್ಯಮಂತ್ರಿ ಆಗಿ ಅವಿರೋಧವಾಗಿ 'ರೇವಂತ್ ರೆಡ್ಡಿ' ಅವರು ಆಯ್ಕೆ ಆಗಿದ್ದಾರೆ. ಇದೇ ಡಿಸೆಂಬರ್ 7ರಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರಿಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ತಿಳಿಸುವ ಜೊತೆಗೆ ಮುಂದಿನ ಐದು ವರ್ಷ ತೆಲಂಗಾಣ ಪಾರದರ್ಶಕ ಆಡಳಿತಕ್ಕೆ ಸಾಕ್ಷಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತೆಲಂಗಾಣದ ಮುಖ್ಯಮಂತ್ರಿ ಸ್ಥಾನಕ್ಕೆ ರೇವಂತ್ ರೆಡ್ಡಿ ಅವಿರೋಧ ಆಯ್ಕೆ ಆದ ಬಳಿಕ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸಿದ್ದಾರೆ. ಅವರ ಆಡಳಿತ ಹೇಗಿರಲಿದೆ ಎಂಬ ಮುನ್ಸೂಚನೆ ಸಹ ನೀಡಿದ್ದಾರೆ.

ಮುಂದಿನ 5 ವರ್ಷಗಳಲ್ಲಿ ರೇವಂತ್ ರೆಡ್ಡಿ ನೇತೃತ್ವದಲ್ಲಿ ತೆಲಂಗಾಣವು ಎಲ್ಲರನ್ನೂ ಒಳಗೊಳ್ಳುವ, ಪ್ರಗತಿಪರ ಮತ್ತು ಪಾರದರ್ಶಕ ಆಡಳಿತಕ್ಕೆ ಸಾಕ್ಷಿಯಾಗಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಕೆಸಿ ವೇಣುಗೋಪಾಲ್ ಪ್ರತಿಕ್ರಿಯೆ
ತೆಲಂಗಾಣದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ರೇವಂತ್ ರೆಡ್ಡಿ ಆಯ್ಕೆಯಾಗಲಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಈಗಾಗಲೇ ಘೋಷಿಸಿದರು. ತೆಲಂಗಾಣದಲ್ಲಿ ಕಾಂಗ್ರೆಸ್ ಅಂದುಕೊಂಡಂತೆ ಡಿಸೆಂಬರ್ 7 ಸರ್ಕಾರ ರಚನೆ ಮಾಡಲಿದೆ. ರೇವಂತ್ ರೆಡ್ಡಿ ಅಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತೆಲಂಗಾಣದ ನಿರ್ಗಮಿತ ಮುಖ್ಯಮಂತ್ರಿ ಬಿಆರ್‌ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್ ಅವರ ಪ್ರಬಲ ಟೀಕಾಕಾರರಾಗಿ ಕಂಡುಬರುವ ರೇವಂತ್ ರೆಡ್ಡಿ ಅವರು ರಾಜ್ಯದ ಉದ್ದಗಲಕ್ಕೂ ಸಂಚರಿಸಿದ್ದ ಆರ್ಭಟದ ಪ್ರಚಾರ ನಡೆಸಿದ್ದರು. ಪಕ್ಷ ಸಂಘಟಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಪಮುಖ ಭಾಗವಾಗಿ ಓಡಾಡುವ ಮೂಲಕ ಕೆಸಿಆರ್ ಅವರಿಗೆ ಸವಾಲಾಗಿ ಪರಿಣಮಿಸಿದರು.
ತೆಲಂಗಾಣದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ 119 ಸ್ಥಾನಗಳಲ್ಲಿ 64 ಸ್ಥಾನಗಳಲ್ಲಿ ಗೆದ್ದು ಪೂರ್ಣ ಬಹುಮತ ಗಳಿಸಿದೆ.
10 ವರ್ಷಗಳ ಕಾಲ ಭಾರತದ ಅತ್ಯಂತ ಕಿರಿಯ ರಾಜ್ಯವನ್ನು ಆಳಿದ ಭಾರತ್ ರಾಷ್ಟ್ರ ಸಮಿತಿಯು 38 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 08 ಸ್ಥಾನ ಪಡೆದರೆ ಎಐಎಂಐಎಂ 07 ಸ್ಥಾನಗಳನ್ನು ಗೆದ್ದಿದೆ.












Click it and Unblock the Notifications