ರಾಜ್ಯದ ಬಿಜೆಪಿ ಸಂಸದರನ್ನು ಪ್ರಧಾನಿ ಮೋದಿ ಬೆಂಡೆತ್ತಿದ್ದು ಯಾಕೆ?

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 4: ದಕ್ಷಿಣ ಭಾರತದ ಬಿಜೆಪಿ ಸಂಸದರಿಗಾಗಿ ಪ್ರಧಾನಿ ನಿವಾಸದಲ್ಲಿ ಬುಧವಾರ ಬೆಳಗ್ಗೆ ಏರ್ಪಡಿಸಲಾಗಿದ್ದ ಚಹಾ ಕೂಟದಲ್ಲಿ ನರೇಂದ್ರ ಮೋದಿ ಅವರು ಸಂಸದರಿಗೆ ಛೀಮಾರಿ ಹಾಕಿದ್ದಾರೆಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.

ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ನೀವು ವಿಫಲರಾಗಿದ್ದೀರಿ ಎಂದು ಪ್ರಧಾನಿ ಸಂಸದರನ್ನು ತರಾಟೆಗೆ ತೆಗೆದುಕೊಂಡರು ಎಂದು ಹೇಳಲಾಗಿದೆ. ಈ ಸಭೆಯಲ್ಲಿ ರಾಜ್ಯದ ಲೋಕಸಭೆ ಹಾಗೂ ರಾಜ್ಯಸಭಾ ಸದಸ್ಯರೂ ಭಾಗವಹಿಸಿದ್ದರು.

Narendra Modi

9 ಗಂಟೆಗೆ ಸರಿಯಾಗಿ ಆರಂಭವಾದ ಸಭೆಯಲ್ಲಿ, ಮೊದಲಿಗೆ ಸಂಸದರ ಉಭಯ ಕುಶಲೋಪರಿ ವಿಚಾರಿಸಿ ಆನಂತರ ಮಾತಿಗೆಳೆದ ಮೋದಿ, ನಿಧಾನವಾಗಿ ಒಂದೊಂದೇ ಪ್ರಶ್ನೆಗಳನ್ನು ಕೇಳುತ್ತಾ ಸಾಗಿದರು. ಈ ಎಲ್ಲಾ ಪ್ರಶ್ನೆಗಳೂ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿದ ರೀತಿಯ ಬಗ್ಗೆಯೇ ಕೇಂದ್ರೀಕೃತವಾಗಿದ್ದವು.

ಆದರೆ, ಈ ಪ್ರಶ್ನೆಗಳಿಗೆ ರಾಜ್ಯದ ಸಂಸದರಾಗಲೀ ಅಥವಾ ದಕ್ಷಿಣ ಭಾರತದ ಯಾವುದೇ ಸಂಸದರಾಗಲೀ ಸೂಕ್ತವಾದ ಉತ್ತರಗಳನ್ನು ಕೊಡಲಿಲ್ಲ. ಇದರಿಂದ ಕೊಂಚ ಅಸಮಾಧಾನಗೊಂಡ ಮೋದಿ, ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದು ಸಂಸದರಾದ ನಿಮ್ಮ ಕರ್ತವ್ಯ. ನಿಮ್ಮ ರಾಜ್ಯಗಳಲ್ಲಿ ಬೇರೆ ಪಕ್ಷಗಳ ಸರ್ಕಾರಗಳು ಅಧಿಕಾರದಲ್ಲಿವೆ.

ಹಾಗಾಗಿ, ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ನೀವು ಹೆಚ್ಚು ಕೆಲಸ ಮಾಡಬೇಕಿರುತ್ತದೆ. ಹಾಗಿರುವಾಗ, ನೀವು ನಿರ್ಲಿಪ್ತರಾಗಿದ್ದರೆ ಮುಂಬರುವ ಚುನಾವಣೆಗಳಲ್ಲಿ ನಾವು ಜನರ ಬಳಿ ಮತ ಕೇಳಲು ಹೋಗುವುದಾದರೂ ಹೇಗೆ, ಆ ರಾಜ್ಯಗಳಲ್ಲಿ ಬಿಜೆಪಿಯು ಮೇಲ್ಪಂಕ್ತಿಗೆ ಬರುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಪರವಾಗಿ, ಅನಂತಕುಮಾರ್, ಡಿ.ವಿ.ಸದಾನಂದಗೌಡ, ರಮೇಶ್ ಜಿಗಜಿಣಗಿ, ನಿರ್ಮಲ ಸೀತಾರಾಮನ್, ರಾಜ್ಯ ಸಂಸದರಾದ ಬಿ.ಎಸ್.ಯಡಿಯೂರಪ್ಪ , ಜಿ.ಎಂ.ಸಿದ್ದೇಶ್ವರ್, ಕರಡಿ ಸಂಗಣ್ಣ , ಶೋಭ ಕರಂದ್ಲಾಜೆ, ಪಿ.ಸಿ.ಮೋಹನ್, ನಳಿನ್‍ಕುಮಾರ್ ಕಟೀಲ್, ಸುರೇಶ್ ಅಂಗಡಿ, ಪ್ರತಾಪ್ ಸಿಂಹ, ಶ್ರೀರಾಮಲು, ರಾಜ್ಯಸಭಾ ಸದಸ್ಯರಾದ ಪ್ರಭಾಕರ್ ಕೋರೆ ಸೇರಿದಂತೆ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಕರ್ನಾಟಕದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಪೂರ್ವ ತಯಾರಿ ಬಗ್ಗೆ ಚರ್ಚಿಸುವ ಉದ್ದೇಶದಿಂದಲೂ ಕರೆಯಲಾಗಿದ್ದ ಈ ಸಭೆಯಲ್ಲಿ ಸಂಸದರ ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂಬ ಬಗ್ಗೆಯೂ ಮೋದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Prime minister Narendra Modi expressed his dissatisfaction over the working stlye of Karantaka BJP MPs in the state. While talking to the them in a tea party organised at his residence in New Delhi on 4th August 2017, Prime Minister Modi urged the MPs to work hard for Central Governemnt schemes to reach the people.
Please Wait while comments are loading...