ಸಂಕಷ್ಟದ ದಿನಗಳಲ್ಲೂ ಅಪ್ಪ ದೇಶಕ್ಕಾಗಿ ಶ್ರಮಿಸುವುದನ್ನು ನಿಲ್ಲಿಸಲಿಲ್ಲ: ಗೌತಮ್ ಅದಾನಿ ಬಗ್ಗೆ ಕರಣ್ ಭಾವುಕ ನುಡಿ
ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯದ (APSEZ) ವ್ಯವಸ್ಥಾಪಕ ನಿರ್ದೇಶಕರಾಗಿರುವ ಕರಣ್ ಅದಾನಿ ಅವರು ತಮ್ಮ ತಂದೆ, ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರ ಕುರಿತು ಭಾವುಕ ನುಡಿಗಳನ್ನು ಹಂಚಿಕೊಂಡಿದ್ದಾರೆ. ಅಮೆರಿಕದ ಹಿಂಡೆನ್‌ಬರ್ಗ್ ರಿಸರ್ಚ್ ಮಾಡಿದ ಗಂಭೀರ ಆರೋಪಗಳು ಹಾಗೂ ಅಮೆರಿಕದ ನ್ಯಾಯಾಂಗ ಇಲಾಖೆಯ (DOJ) ತನಿಖೆಯಂತಹ ಸವಾಲುಗಳು ಮತ್ತು ತೀವ್ರ ಸ್ವರೂಪದ ಪರಿಶೀಲನೆಗಳ ನಡುವೆಯೂ, ತಮ್ಮ ತಂದೆ ದೇಶ ನಿರ್ಮಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವುದನ್ನು ತಾನು ಹತ್ತಿರದಿಂದ ಕಂಡಿರುವುದಾಗಿ ಕರಣ್ ಅದಾನಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಬುಧವಾರದಂದು ತಮ್ಮ ಅಧಿಕೃತ ಲಿಂಕ್ಡ್‌ಇನ್ ಖಾತೆಯಲ್ಲಿ ಸುದೀರ್ಘವಾದ ಹಾಗೂ ಮುಕ್ತ ಪೋಸ್ಟ್ ಹಂಚಿಕೊಂಡಿರುವ ಕರಣ್, ಬಿಕ್ಕಟ್ಟಿನ ಸಮಯದಲ್ಲಿ ಒಬ್ಬ ಮಗನಾಗಿ ತಾವು ಅನುಭವಿಸಿದ ತೊಳಲಾಟದ ಬಗ್ಗೆ ಹೇಳಿದ್ದಾರೆ. "ಇಷ್ಟೆಲ್ಲಾ ಕಠಿಣ ಪರಿಸ್ಥಿತಿಗಳನ್ನ ನಿಮ್ಮ ತಂದೆ ಎದುರಿಸುತ್ತಿರುವಾಗ, ಒಬ್ಬ ಮಗನಾಗಿ ನಿಮಗೆ ಹೇಗೆ ಅನ್ನಿಸುತ್ತಿತ್ತು?" ಎಂಬ ಒಂದೇ ಪ್ರಶ್ನೆಯನ್ನ ಹಲವರು ಪದೇಪದೇ ಕೇಳುತ್ತಿದ್ದರು. ಕುಟುಂಬವು ಆ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾಗ ಆ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ಆದರೆ, ಆ ಕಷ್ಟದ ದಿನಗಳು ಈಗ ಕಳೆದಿರುವುದರಿಂದ, ಅದರ ಬಗ್ಗೆ ಪ್ರತಿಕ್ರಿಯಿಸಲು ಇದೀಗ ಸಾಧ್ಯವಾಗುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಆ ಕಷ್ಟದ ವರ್ಷಗಳಲ್ಲಿ ತಮ್ಮನ್ನು ಅತ್ಯಂತ ಹೆಚ್ಚು ಕಾಡಿದ ಮತ್ತು ಅಚ್ಚರಿಗೊಳಿಸಿದ ಸಂಗತಿಯೆಂದರೆ, ಎಷ್ಟೇ ಕಠಿಣ ಪರಿಸ್ಥಿತಿ ಎದುರಾದರೂ ಗೌತಮ್ ಅದಾನಿ ಅವರು ತಮ್ಮ ಸುತ್ತಲಿನ ಜನರೊಂದಿಗೆ ನಡೆದುಕೊಳ್ಳುವ ರೀತಿಯನ್ನು ಸ್ವಲ್ಪವೂ ಬದಲಾಯಿಸಿಕೊಳ್ಳಲಿಲ್ಲ. "ಇದು ಅವರಿಂದ ನಾನು ಕಲಿತ ಅತ್ಯಮೂಲ್ಯ ಪಾಠಗಳಲ್ಲಿ ಒಂದಾಗಿದೆ. ಕಷ್ಟದ ಸಮಯದಲ್ಲಿ ನೀಡಬಹುದಾದ ಪ್ರಬಲವಾದ ಪ್ರತಿಕ್ರಿಯೆ ಎಂದರೆ, ಯಾವುದೇ ಪ್ರತಿಕ್ರಿಯೆ ನೀಡದಿರುವುದು ಹಾಗೂ ಕೇವಲ ತಮ್ಮ ಕೆಲಸವನ್ನಾ ಮುಂದುವರಿಸಿಕೊಂಡು ಹೋಗುವುದು" ಎಂದು ಕರಣ್ ಹೇಳಿದ್ದಾರೆ. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ತನ್ನ ತಂದೆಯ ವಿರುದ್ಧ ಕೇಳಿಬರುತ್ತಿದ್ದ ಹೊಸ ಆರೋಪಗಳು, ಹೊಸ ತೀರ್ಪುಗಳು ಮತ್ತು ಸುದ್ದಿಯ ಮುಖ್ಯಾಂಶಗಳು ತಮಗೆ ತೀವ್ರ ಕೋಪ ಹಾಗೂ ಆತಂಕವನ್ನು ತರಿಸುತ್ತಿದ್ದವು. ಒಬ್ಬ ವ್ಯಕ್ತಿ ಇಷ್ಟೆಲ್ಲಾ ಒತ್ತಡವನ್ನು ಹೇಗೆ ಸಹಿಸಿಕೊಳ್ಳಬಲ್ಲ ಎಂದು ತಾವು ಆಶ್ಚರ್ಯಪಡುತ್ತಿದ್ದುದಾಗಿ ಅವರು ಹೇಳಿದ್ದಾರೆ.
ಆದರೆ, ದಿನದ ಕೊನೆಗೆ ಆ ಗದ್ದಲಗಳು ಅವರ ತಂದೆಯನ್ನ ಬಾಧಿಸಲಿಲ್ಲ. ಕಷ್ಟಗಳನ್ನು ಎದುರಿಸುವ ತಾಳ್ಮೆ ಎಂದರೆ ಅದು ಭಾವೋದ್ರೇಕದ ಭಾಷಣ ಮಾಡುವುದು, ಬಹಿರಂಗವಾಗಿ ಧಿಕ್ಕಾರ ಕೂಗುವುದು ಅಥವಾ ಟೀಕಾಕಾರರು ತಪ್ಪು ಎಂದು ಸಾಬೀತುಪಡಿಸಲು ಶಪಥ ಮಾಡುವುದು ಎಂದೇ ಹಲವರು ಭಾವಿಸುತ್ತಾರೆ. ಆದರೆ ಅದು ನಿಜವಲ್ಲ. ದಶಕಗಳ ಬಳಿಕವಷ್ಟೇ ಪ್ರತಿಫಲ ನೀಡಬಲ್ಲ ಹೂಡಿಕೆಗಳನ್ನ ಆ ಕಷ್ಟದ ಸಮಯದಲ್ಲೂ ಮಾಡಬೇಕಿತ್ತು. ತಮ್ಮ ಕುಟುಂಬವು ಕಷ್ಟದಲ್ಲಿ ಸಿಲುಕಿದೆ ಎಂಬ ಕಾರಣಕ್ಕೆ ಭಾರತ ತನ್ನ ಓಟವನ್ನು ನಿಲ್ಲಿಸಲಿಲ್ಲ, ಹಾಗೆಯೇ ತಮ್ಮ ತಂದೆಯೂ ನಿಲ್ಲಿಸಲಿಲ್ಲ ಎಂದು ಅವರು ವಿವರಿಸಿದ್ದಾರೆ.
ತಮ್ಮ ವೈಯಕ್ತಿಕ ಭಾವನೆಗಳನ್ನ ಹಂಚಿಕೊಂಡ ಕರಣ್ ಅದಾನಿ, "ಬೆಳೆಯುವಾಗ ನಾನು ಎಂದಿಗೂ ಅವರನ್ನ ಗೌತಮ್ ಅದಾನಿ ಎಂದು ನೋಡಿರಲಿಲ್ಲ. ನನಗೆ ಅವರು ಕೇವಲ ಪಾಪಾ. ಅವರು ಎಂದಿಗೂ ಭಾಷಣ ಬಿಗಿಯುವ ಅಥವಾ ಸಾರ್ವಜನಿಕವಾಗಿ ಪ್ರದರ್ಶನ ನೀಡುವ ವ್ಯಕ್ತಿಯಾಗಿರಲಿಲ್ಲ. ಬದಲಾಗಿ, ತಮ್ಮ ಮುಂದಿರುವ ಗುರಿಯ ಮೇಲೆ ಅಸಾಧಾರಣ ರೀತಿಯಲ್ಲಿ ಗಮನ ಕೇಂದ್ರೀಕರಿಸುವ ಸಾಮರ್ಥ್ಯ ಹೊಂದಿರುವ ವ್ಯಕ್ತಿಯಾಗಿದ್ದರು". ಮೂಲಸೌಕರ್ಯ ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ತಮ್ಮ ತಂದೆ ಜೀವನವನ್ನೇ ಮುಡಿಪಾಗಿಟ್ಟಿದ್ದು ಏಕೆ ಎಂಬುದನ್ನು ಕಳೆದ ಮೂರು ವರ್ಷಗಳು ತಮಗೆ ಇನ್ನಷ್ಟು ಆಳವಾಗಿ ಅರ್ಥೈಸುವಂತೆ ಮಾಡಿವೆ.
'ರಾಷ್ಟ್ರ ನಿರ್ಮಾಣ' ಎಂಬುದು ಕೇವಲ ಘೋಷಣೆಯಲ್ಲ, ಬದಲಾಗಿ ಭಾರತದ ಭವಿಷ್ಯದ ಆಕಾಂಕ್ಷೆಗಳಿಗೆ ತಕ್ಕಂತೆ ಮೂಲಸೌಕರ್ಯಗಳನ್ನ ಕಲ್ಪಿಸಬೇಕೆಂಬುದು ಅವರ ನಂಬಿಕೆಯಾಗಿದೆ. ಇದೇ ನಂಬಿಕೆ ಅವರ ಪ್ರತಿಯೊಂದು ಪ್ರಮುಖ ನಿರ್ಧಾರಗಳನ್ನು ರೂಪಿಸಿದೆ ಎಂದು ಕರಣ್ ಅದಾನಿ ತಮ್ಮ ಸುದೀರ್ಘ ಲೇಖನದಲ್ಲಿ ಬರೆದುಕೊಂಡಿದ್ದಾರೆ.


Click it and Unblock the Notifications
