ಬಿಜೆಪಿ ಕಾರ್ಯಕರ್ತನ ಕೊಲೆ; ಇಂದು ಕಣ್ಣೂರು ಬಂದ್
ಕಣ್ಣೂರು, ಜನವರಿ 19: ಬಿಜೆಪಿ ಕಾರ್ಯಕರ್ತರೊಬ್ಬರ ಕೊಲೆ ಹಿನ್ನಲೆಯಲ್ಲಿ ಇಂದು ಕಣ್ಣೂರು ಬಂದ್ಗೆ ಕರೆ ನೀಡಲಾಗಿದೆ. ಕೊಲೆಯ ಹಿಂದೆ ಸಿಪಿಎಂ ಕೈವಾಡ ಇದೆ ಎಂದು ಬಿಜೆಪಿ ಆರೋಪಿಸಿದೆ.
ಬುಧವಾರ ಎಂ.ಸಿ ಸಂತೋಷ್ ಎಂಬ ಬಿಜೆಪಿ ಕಾರ್ಯಕರ್ತರನ್ನು ಧರ್ಮಾಡಂ ಪ್ರದೇಶದಲ್ಲಿ ಕೊಲೆ ಮಾಡಲಾಗಿದೆ. ರಾತ್ರಿ ಸುಮಾರು 11 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ದಾಳಿಕೋರರು 11 ಗಂಟೆ ಸುಮಾರಿಗೆ ಸಂತೋಷ್ ಮನೆ ಬಳಿ ಬಂದು ದಾಳಿ ನಡೆಸಿದ್ದಾರೆ ಎಂದು ಅನುಮಾನಿಸಲಾಗಿದೆ. ದಾಳಿ ವೇಳೆ ಹಂಡತಿ ಮತ್ತು ಮಕ್ಕಳು ಮನೆಯಲ್ಲಿರಲಿಲ್ಲ ಎನ್ನಲಾಗಿದೆ. ಹಲ್ಲೆಯಾದ ಸಂತೋಷ್ರನ್ನು ಅವರ ಗೆಳೆಯರು ತಕ್ಷಣ ಆಸ್ಪತ್ರೆಗೆ ಸೇರಿಸಿದರಾದರೂ ತೀವ್ರ ರಕ್ತ ಸ್ರಾವದಿಂದ ಸಂತೋಷ್ ಕೊನೆಯುಸಿರೆಳೆದಿದ್ದಾರೆ.

ಪ್ರಾಥಮಿಕ ತನಿಖೆಗಳ ಪ್ರಕಾರ ತಲಶೆರಿಯ ಬ್ರೆನ್ನನ್ ಕಾಲೇಜಿನಲ್ಲಿ ಎಬಿವಿಪಿ ಮತ್ತು ಎಸ್ಎಫ್ಐ ನಡುವೆ ಕೆಲ ದಿನಗಳ ಹಿಂದೆ ನಡೆದ ಘರ್ಷಣೆಯೇ ಕೊಲೆಗೆ ಕಾರಣ ಎನ್ನಲಾಗಿದೆ. ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ವಿವೇಕಾನಂದ ಜಯಂತಿಯ ವೇಳೆ ಇತ್ತಂಡಗಳ ಮಧ್ಯೆ ಸಂಘರ್ಷ ನಡೆದಿತ್ತು.
ಕೊಲೆಯ ಹಿನ್ನಲೆಯಲ್ಲಿ ಇದೀಗ ಬಿಜೆಪಿ ಗುರುವಾರ ಕಣ್ಣೂರು ಬಂದಿಗೆ ಕರೆ ನೀಡಿದೆ. ಅಗತ್ಯ ವಸ್ತುಗಳು ಮತ್ತು ರಾಜ್ಯ ಶಾಲಾ ಮಕ್ಕಳ ಯುವಜನೋತ್ಸವಕ್ಕೆ ಮಾತ್ರ ಬಂದಿನಿಂದ ವಿನಾಯಿತಿ ನೀಡುವುದಾಗಿ ಬಿಜೆಪಿ ಹೇಳಿದೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications