Kangana Ranaut: ರಾಜಕೀಯ ಪಾರ್ಟ್ ಟೈಂ ಕೆಲಸವಲ್ಲ; ನಟಿ ಕಂಗನಾಗೆ ಟಾಂಗ್ ಕೊಟ್ಟ ವಿಕ್ರಮಾದಿತ್ಯ ಸಿಂಗ್!
ಶಿಮ್ಲಾ, ಮೇ. 26: ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಕಂಗನಾ ರಣಾವತ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಲಿವುಡ್ ನಟಿ ಕಂಗನಾ ರನೌತ್ ಸಿನಿಮಾ ಬಿಟ್ಟು ರಾಜಕೀಯಕ್ಕೆ ಎಂಟ್ರಿ ನೀಡಿದ್ದಾರೆ. ಚುನಾವಣೆಯಲ್ಲಿ ಗೆದ್ದರೆ ಚಿತ್ರರಂಗಕ್ಕೆ ಗುಡ್ ಬಾಯ್ ಹೇಳುವುದಾಗಿ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನದಲ್ಲಿ ಮಂಡಿ ಕ್ಷೇತ್ರದಲ್ಲಿಯೂ ಚುನಾವಣೆ ನಡೆಯಲಿದೆ. ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್, 'ರಾಜಕೀಯವು ಪಾರ್ಟ್ ಟೈಂ ಜಾಬ್ ಅಲ್ಲ' ಚುನಾವಣಾ ಫಲಿತಾಂಶ ಪ್ರಕಟವಾದ ದಿನದಂದು ನಟಿ ಮುಂಬೈಗೆ ಬ್ಯಾಗ್ ತೆಗೆದುಕೊಂಡು ತೆರಳಲಿದ್ದಾರೆ ಎಂದು ಆರೋಪಿಸಿದ್ದಾರೆ.

ಮತಯಾಚನೆ ವೇಳೆ ಮಾತನಾಡಿರುವ ಅವರು, ಮಂಡಿಯ ಅಭಿವೃದ್ಧಿಯ ದೃಷ್ಟಿಯಲ್ಲಿ ನಾನು ಜನರಿಂದ ಮತ ಕೇಳುತ್ತಿದ್ದೇನೆ. ಆದರೆ, ಬಿಜೆಪಿ ಅಭ್ಯರ್ಥಿಯು 'ಅಪ್ರಸ್ತುತ' ವಿಷಯಗಳನ್ನು 'ಮನೋರಂಜನೆ'ಗಾಗಿ ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಜನರಿಗೆ ತಿಳಿಸಿದ್ದಾರೆ.
ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಸರಣಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್, "ರಾಜಕೀಯ ಎನ್ನುವುದು ಅರೆಕಾಲಿಕ ಕೆಲಸವಲ್ಲ, ಒಬ್ಬರು ಹಗಲು ರಾತ್ರಿ ಜನರ ನಡುವೆ ಬದುಕಬೇಕು ಮತ್ತು ಅವರ ಸೇವೆ ಮಾಡಬೇಕು. ಆದರೆ, ಕಂಗನಾ ರನೌತ್ ತನ್ನ ಬ್ಯಾಗ್‌ಗಳನ್ನು ಪ್ಯಾಕ್ ಮಾಡಿ ಜೂನ್ 4 ರಂದು ಮುಂಬೈಗೆ ಹಿಂತಿರುಗುತ್ತಾರೆ. ಈಗ ಬಿಜೆಪಿ ನಾಯಕರು ಕೂಡ 'ಈ ವಿಪತ್ತು' ಯಾವಾಗ ಮುಂಬೈಗೆ ಮರಳುತ್ತದೆ ಎಂದು ಪಿಸುಗುಟ್ಟಲು ಪ್ರಾರಂಭಿಸಿದ್ದಾರೆ" ಎಂದು ಹೇಳಿದ್ದಾರೆ.

ವಿಮಾನ ನಿಲ್ದಾಣದ ಬಗ್ಗೆ ಮಾತನಾಡಿದ ಕಂಗನಾ ರನೌತ್
ಇನ್ನು, ಮಂಡಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಸೇರಿದಂತೆ ಪ್ರಸ್ತುತ ಕಾಂಗ್ರೆಸ್ ಸರ್ಕಾರದಿಂದ ಸ್ಥಗಿತಗೊಂಡಿರುವ ಎಲ್ಲಾ ಯೋಜನೆಗಳು ಮತ್ತೆ ಪ್ರಾರಂಭವಾಗಲಿವೆ ಎಂದು ಕಂಗನಾ ರನೌತ್ ಹೇಳಿದ್ದಾರೆ. ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡಬೇಕು ಎಂದು ಜನರನ್ನು ಒತ್ತಾಯಿಸಿದ್ದಾರೆ.
"ಕಾಂಗ್ರೆಸ್ ಮಹಿಳಾ ವಿರೋಧಿಯಾಗಿದ್ದು, ಅಭಿವೃದ್ಧಿಯಲ್ಲಿ ಮುಂದೆ ಹೋಗುವ ಬದಲು ನಮ್ಮನ್ನು 19ನೇ ಶತಮಾನಕ್ಕೆ ಕೊಂಡೊಯ್ಯುತ್ತಿದೆ" ಎಂದಿದ್ದಾರೆ. ಮಂಡಿ ಲೋಕಸಭೆ ಚುನಾವಣೆಗೆ ಜೂನ್ 1 ರಂದು ಕೊನೆಯ ಹಂತದಲ್ಲಿ ಮತದಾನ ನಡೆಯಲಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications