Jharkhand: ಪತಿ ಅಂದರ್? ಪತ್ನಿ ಚೀಫ್ ಮಿನಿಸ್ಟರ್? ಜಾರ್ಖಂಡ್‌ನಲ್ಲಿ ಬಿಜೆಪಿ ಬಿಗ್ ಪ್ಲ್ಯಾನರ್
ರಾಂಚಿ ಜನವರಿ 31: ಜಾರ್ಖಂಡ್ ರಾಜಕೀಯ ದೇಶದ ಗಮನ ಸೆಳೆದಿದೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಹೆಸರು ಭೂಹಗರಣದಲ್ಲಿ ತಳುಕು ಹಾಕಿಕೊಂಡಿದ್ದು ಅವರೀಗ ಬಂಧನದ ಭೀತಿ ಶುರುವಾಗಿದೆ. ಒಂದು ವೇಳೆ ಅವರ ಬಂಧನವಾದರೆ ಮುಂದಿನ ಸಿಎಂ ಯಾರು ಎನ್ನುವ ಪ್ರಶ್ನೆಗೆ ಉತ್ತರ ಕೂಡ ನಿರ್ಧರಿಸಲಾಗಿದೆ.
ಹೌದು... ಜಾರ್ಖಂಡ್ ರಾಜಕೀಯ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಿಚಾರಣೆಗೆ ಆಗಮಿಸಿದ್ದ ವೇಳೆ ಅಧಿಕೃತ ನಿವಾಸ ತೊರೆದಿದ್ದ ಸಿಎಂ ಹೇಮಂತ್ ಸೊರೆನ್ ಅವರು 30 ಗಂಟೆಗಳ ಕಾಲ ಯಾರ ಕಣ್ಣಿಗೂ ಕಾಣಿಸಿಕೊಂಡಿರಲಿಲ್ಲ.

ಓಡಿ ಹೋದ ಸಿಎಂ ಎಂದು ವಿಪಕ್ಷಗಳು:
ಸ್ವತ: ರಾಜ್ಯಪಾಲರೇ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಇನ್ನೂ ವಿಪಕ್ಷಗಳು ಸಿಎಂ ಓಡಿ ಹೋಗಿದ್ದಾರೆನ್ನುವ ಗುಮಾನಿ ಕೂಡ ಹಬ್ಬಸಿಬಿಟ್ಟರು. ರಣಹೇಡಿ ಸಿಎಂ ಎಂದು ಲೇವಡಿ ಮಾಡಿದ್ರು. ಜೊತೆಗೆ ಅವರನ್ನು ಹುಡುಕಿ ಕೊಟ್ಟವರಿಗೆ ಬಹುಮಾನ ನೀಡುವುದಾಗಿಯೂ ವ್ಯಂಗ್ಯವಾಡಿದರು. ಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿಗಳು ಕೂಡ ಸಲ್ಲಿಕೆ ಆದವು.
ಬಳಿಕ ಮಂಗಳವಾರ ಮಧ್ಯಾಹ್ನ ಕಾಣಿಸಿಕೊಂಡ ಅವರು ಪಕ್ಷದ ಶಾಸಕರೊಂದಿಗೆ ತುರ್ತು ಸಭೆ ನಡೆಸಿದರು. ಈ ಸಭೆಯಲ್ಲಿ ಹೇಮಂತ್ ಸೊರೆನ್ ಅವರ ಪತ್ನಿ ಕಲ್ಪನಾ ಕೂಡ ಇದ್ದರು. ಈ ವೇಳೆ ಕಲ್ಪನಾ ಸೊರೆನ್ ಅವರನ್ನು ಹೇಮಂತ್ ಸೊರೆನ್ ಅವರು ಮುಂದಿನ ಸಿಎಂ ಮಾಡುವ ನಿರ್ಧಾರ ಮಾಡಿದ್ದಾರೆ. ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಶಾಸಕರೂ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಹೀಗಾಗಿ ಹೇಮಂತ್ ಸೊರನ್ ಅವರನ್ನು ಬಂಧಿಸಿದರೆ, ಅವರ ಪತ್ನಿ ಕಲ್ಪನಾ ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಜಾರ್ಖಂಡ್‌ನ ರಾಜಕೀಯ ಮೂಲಗಳು ಹೇಳುತ್ತಿವೆ.

ಏನಿದು ಘಟನೆ?
ಜಾರ್ಖಂಡ್ ಗಣಿ ಅಕ್ರಮಗಳ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಯುತ್ತಿದೆ. ಜಾರಿ ಇಲಾಖೆ ಮುಖ್ಯಮಂತ್ರಿ ಹೇಮಂತ್ ಸೊರನ್ ಅವರಿಗೆ 10 ಬಾರಿ ಸಮನ್ಸ್ ನೀಡಿತ್ತು. ಹೇಮಂತ್ ಸೊರನ್ ಅವರು ಇತ್ತೀಚೆಗಷ್ಟೇ ಒಂದು ಬಾರಿ ಜಾರಿ ವಿಚಾರಣೆಗೆ ಹಾಜರಾಗಿದ್ದರು. ಇದಾದ ನಂತರ ಜನವರಿ 29 ಅಥವಾ ಜನವರಿ 31 ರಂದು ಮತ್ತೊಮ್ಮೆ ಹಾಜರಾಗುವಂತೆ ಜಾರಿ ಇಲಾಖೆ ಸಮನ್ಸ್ ಕಳುಹಿಸಿತ್ತು. ಆದರೆ ಇದ್ಯಾವುದಕ್ಕೂ ಅವರು ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇಂದು ವಿಚಾರಣೆಗೆ ಹಾಜರಾದರೆ ಅವರನ್ನು ಬಂಧಿಸುವ ಎಲ್ಲಾ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ.
ಈ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ ದೆಹಲಿಗೆ ತೆರಳಿದ ಹೇಮಂತ್ ಸೊರೆನ್ ಅವರನ್ನು ವಿಚಾರಣೆಗೆ ಒಳಪಡಿಸಲು ಯತ್ನಿಸಿತು. ಆದರೆ ದೆಹಲಿ ಬಂಗಲೆಯಲ್ಲಿ ಹೇಮಂತ್ ಸೊರೆನ್ ಇರಲಿಲ್ಲ ಎಂಬುದು ಬಹಿರಂಗವಾಗಿದೆ. ಹೇಮಂತ್ ಸೊರೆನ್‌ಗಾಗಿ ಗಂಟೆಗಟ್ಟಲೆ ಕಾದು ಕುಳಿತರೂ ಜಾರಿ ಇಲಾಖೆ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಇದರಿಂದ ಹೇಮಂತ್ ಸೊರೆನ್ 30 ಗಂಟೆಗಳ ಕಾಲ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಹಬ್ಬಿತ್ತು.
ತುರ್ತು ಸಭೆ:
ಇದರ ಬೆನ್ನಲ್ಲೇ ಮಂಗಳವಾರ ರಾಂಚಿಗೆ ಬಂದ ಹೇಮಂತ್ ಸೊರೆನ್ ಜಾರ್ಖಂಡ್ ಮುಕ್ತಿ ಮೋರ್ಚಾ ಶಾಸಕರೊಂದಿಗೆ ಸಮಾಲೋಚನೆ ಸಭೆ ನಡೆಸಿದರು. ಈ ಸಭೆಯಲ್ಲಿ ಹೇಮಂತ್ ಸೊರೊನಾ ಅವರ ಪತ್ನಿ ಕಲ್ಪನಾ ಕೂಡ ಭಾಗವಹಿಸಿದ್ದರು. ಹೇಮಂತ್ ಸೊರೆನ್ ಅವರನ್ನು ಬಂಧಿಸಿದರೆ ಕಲ್ಪನಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ ಎಂಬ ಕಾರಣಕ್ಕೆ ಹೇಮಂತ್ ಸೊರೆನ್ ಅವರು ಶಾಸಕರ ತುರ್ತು ಸಭೆ ಕರೆದಿದ್ದರು.
ಸೊರೆನ್ ಬಂಧನವಾದರೆ ಬಿಜೆಪಿ ಅಧಿಕಾರಕ್ಕೆ?
ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿರುವ ಹೇಮಂತ್ ಸೊರೆನ್ ಬಂಗಲೆ, ರಾಜಭವನ ಮತ್ತು ಜಾರಿ ಇಲಾಖೆ ಕಚೇರಿ ಪ್ರದೇಶಗಳಲ್ಲಿ ನಿಷೇಧಾಜ್ಞೆ 144 ಜಾರಿಗೊಳಿಸಲಾಗಿದೆ. ಇದೇ ವೇಳೆ ಜಾರಿ ನಿರ್ದೇಶನಾಲಯದ ತನಿಖೆಯ ಬಳಿಕ ಇಂದು ಹೇಮಂತ್ ಸೊರೆನ್ ಅವರನ್ನು ಬಂಧಿಸಿದರೆ ಜಾರ್ಖಂಡ್ ನಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಯತ್ನಿಸಲಿದೆ ಎನ್ನಲಾಗಿದೆ. ಜಾರ್ಖಂಡ್ ಮುಕ್ತಿ ಮೋರ್ಚಾ-ಕಾಂಗ್ರೆಸ್ ಮೈತ್ರಿಕೂಟದ ಶಾಸಕರನ್ನು ಬಗ್ಗಿಸಿ ಹೊಸ ಸರ್ಕಾರ ರಚಿಸಲು ಬಿಜೆಪಿ ಗಂಭೀರವಾಗಿದೆ ಎಂದು ವರದಿಗಳು ಸೂಚಿಸುತ್ತವೆ.
ಕಲ್ಪನಾ ಸೊರೆನ್ ಯಾರು?
ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ 1976 ರಲ್ಲಿ ಜನಿಸಿದ ಕಲ್ಪನಾ ಸೊರೆನ್ ಒಡಿಶಾದ ಮಯೂರ್‌ಭಂಜ್ ಜಿಲ್ಲೆಯಲ್ಲಿ ಬೆಳೆದರು. ಕಲ್ಪನಾ ಅವರಿಗೆ ಒಬ್ಬ ಸಹೋದರ ಮತ್ತು ಒಬ್ಬ ಸಹೋದರಿ ಇದ್ದಾರೆ. ಕಲ್ಪನಾ ಅವರ ಸಹೋದರ ಉದ್ಯಮಿಯಾಗಿದ್ದರೆ, ಜೊತೆಗೆ ಅವರ ಸಹೋದರಿ ಶಿಕ್ಷಕಿಯಾಗಿದ್ದಾರೆ. ಅವರ ತಂದೆ ಕೂಡ ಉದ್ಯಮಿಯಾಗಿದ್ದಾರೆ. ಕಲ್ಪನಾ ಎಂಜಿನಿಯರಿಂಗ್ ಮತ್ತು ಎಂಬಿಎ ವ್ಯಾಸಂಗ ಮಾಡಿದ್ದಾರೆ.
ಕಲ್ಪನಾ ಸೊರೆನ್ ಮತ್ತು ಹೇಮಂತ್ ಸೊರೆನ್ ಫೆಬ್ರವರಿ 7, 2006 ರಂದು ಮದುವೆಯಾದರು. ದಂಪತಿಗೆ ನಿಖಿಲ್ ಮತ್ತು ಅನ್ಶ್ ಎಂಬ ಇಬ್ಬರು ಮಕ್ಕಳಿದ್ದಾರೆ. ವರದಿಗಳ ಪ್ರಕಾರ, ಕಲ್ಪನಾ ಸೊರೆನ್ ಶಾಲೆಯನ್ನು ನಡೆಸುತ್ತಿದ್ದಾರೆ ಮತ್ತು ಸಾವಯವ ಕೃಷಿಯಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ.
ಸೊರೆನ್ ಕುಟುಂಬದಲ್ಲಿ ಬಿರುಕು:
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಕಲ್ಪನಾ ಸೊರೆನ್ ಅವರನ್ನು ಮುಂದಿನ ಮುಖ್ಯಮಂತ್ರಿ ಮಾಡುವ ಪ್ರಸ್ತಾಪದ ಬಗ್ಗೆ ಸೊರೆನ್ ಕುಟುಂಬದಲ್ಲಿ ಭಿನ್ನಾಭಿಪ್ರಾಯವಿದೆ ಎಂದು ಹೇಳಿದ್ದಾರೆ. "ಹೇಮಂತ್ ಸೊರೆನ್ ಅವರ ಸಹೋದರ ಬಸಂತ್ ಸೊರೆನ್ ಮತ್ತು ಸೊಸೆ ಸೀತಾ ಸೊರೆನ್ ಅವರು ಕಲ್ಪನಾ ಅವರನ್ನು ಸಿಎಂ ಮಾಡುವ ಪ್ರಸ್ತಾಪವನ್ನು ತೀವ್ರವಾಗಿ ವಿರೋಧಿಸಿದರು" ಎಂದು ದುಬೆ ಹೇಳಿದ್ದಾರೆ.
ಈ ಹೇಳಿಕೆಗೆ ಬಿಜೆಪಿ ಸಂಸದರಿಗೆ ತಿರುಗೇಟು ನೀಡಿದ ಬಸಂತ್ ಸೊರೆನ್, 'ನಿಶಿಕಾಂತ್ ದುಬೆ ಅವರ ಕುಟುಂಬದಲ್ಲಿ ಮಾತ್ರ ಬಿರುಕು ಉಂಟಾಗುತ್ತದೆ' ಎಂದು ಹೇಳಿದ್ದಾರೆ.












Click it and Unblock the Notifications