Annamalai: ಸ್ಟಾಲಿನ್ ಸರ್ಕಾರ ಬೀಳುವವರೆಗೂ ಚಪ್ಪಲಿ ಧರಿಸಲ್ಲ; ಅಣ್ಣಾಮಲೈ ಶಪಥ
ತಮಿಳುನಾಡು ರಾಜ್ಯ ರಾಜಕೀಯದಲ್ಲಿ ಆಡಳಿತಾರೂಢ ಡಿಎಂಕೆ ಮತ್ತು ಬಿಜೆಪಿ ನಡುವೆ ಜಗಳ ಜೋರಾಗಿದೆ. ತಮಿಳುನಾಡು ಬಿಜೆಪಿ ಘಟಕದ ಮುಖ್ಯಸ್ಥ ಕೆ ಅಣ್ಣಾಮಲೈ ರಾಜ್ಯದಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸುವವರೆಗೆ ಚಪ್ಪಲಿ ಧರಿಸುವುದಿಲ್ಲ ಎಂದ ಗುರುವಾರ ಶಪಥ ಮಾಡಿದ್ದಾರೆ.
"ನಾಳೆ ನನ್ನ ಮನೆ ಮುಂದೆ ಪ್ರತಿಭಟನೆ ಮಾಡುತ್ತೇನೆ, ಆರು ಬಾರಿ ಚಾಟಿ ಬೀಸುತ್ತೇನೆ. 48 ದಿನಗಳ ಉಪವಾಸ ಮಾಡಿ ಷಟ್ಪದಿ ಮುರುಗನಿಗೆ ಹರಕೆ ಹೊರುತ್ತೇನೆ. ನಾಳೆ ರಾಜ್ಯದ ಪ್ರತಿಯೊಬ್ಬ ಬಿಜೆಪಿ ಸದಸ್ಯರ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವುದು. ನಾಳೆಯಿಂದ ಡಿಎಂಕೆ ಅಧಿಕಾರದಿಂದ ಕೆಳಗೆ ಇಳಿಯುವವರೆಗೂ ನಾನು ಚಪ್ಪಲಿ ಧರಿಸುವುದಿಲ್ಲ" ಎಂದು ಅಣ್ಣಾಮಲೈ ಪಾದರಕ್ಷೆಗಳನ್ನು ತೆಗೆದಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಚೆನ್ನೈನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್ ಮತ್ತು ಪಕ್ಷದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನು ಖಂಡಿಸಿದ ಸೌಂದರರಾಜನ್ ಅದು ಅಮಾನುಷ, ನಮ್ಮ ಧ್ವನಿಯನ್ನು ಹತ್ತಿಕ್ಕಲು ಡಿಎಂಕೆ ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಡಿಎಂಕೆ ವಿರುದ್ಧ ಅಣ್ಣಾಮಲೈ ಆಕ್ರೋಶ
ಅಣ್ಣಾ ವಿಶ್ವ ವಿದ್ಯಾನಿಲಯ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಣ್ಣಾಮಲೈ ಮತ್ತು ಡಿಎಂಕೆ ಸರ್ಕಾರದ ನಡುವೆ ಸಂಘರ್ಷ ಉಂಟಾಗಿದೆ. ಈ ಪ್ರಕರಣದಲ್ಲಿ ಸಂತ್ರಸ್ತೆಯ ವೈಯಕ್ತಿಕ ಮಾಹಿತಿಯನ್ನು ಸೋರಿಕೆ ಮಾಡಲಾಗಿದೆ ಎಂದು ಅಣ್ಣಾಮಲೈ ಆರೋಪಿಸಿದ್ದಾರೆ.
ತಮಿಳುನಾಡು ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಅವರು, ಎಫ್‌ಐಆರ್ ಹೇಗೆ ಸಾರ್ವಜನಿಕರ ಕೈಗೆ ಸಿಕ್ಕಿದೆ. ಎಫ್‌ಐಆರ್ ಸೋರಿಕೆ ಮಾಡುವ ಮೂಲಕ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಲಾಗಿದೆ. ಹೀಗೆ ಮಹಿಳೆಯ ಗುರುತನ್ನು ಸೋರಿಕೆ ಮಾಡಿದ್ದಕ್ಕೆ ಪೊಲೀಸರು ಮತ್ತು ಡಿಎಂಕೆ ಸರ್ಕಾರಕ್ಕೆ ನಾಚಿಕೆಯಾಗಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡು ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಸೋಮವಾರ ಸಂಜೆ 37 ವರ್ಷ ವಿಶ್ವ ವಿದ್ಯಾನಿಲಯ ಕ್ಯಾಂಪಸ್‌ಗೆ ಪ್ರವೇಶಿಸಿದ್ದು ರಾತ್ರಿ 8 ಗಂಟೆ ಸುಮಾರಿಗೆ ವಿದ್ಯಾರ್ಥಿನಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ಆಕೆಯ ಜೊತೆಗಿದ್ದ ಸಹಪಾಠಿ ಮೇಲೂ ಹಲ್ಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.
ತನಿಖೆ ವೇಳೆ ದೊರಕಿದ ಸಾಕ್ಷಿಗಳನ್ನು ಆಧರಿಸಿ ಕೊಟ್ಟೂರಿನ ಜ್ಞಾನಶೇಖರ್ ಎನ್ನುವವನ್ನು ಬಂಧಿಸಲಾಗಿದೆ. ಆರೋಪಿ ಈಗಾಗಲೇ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಆತ ರಸ್ತೆ ಬದಿಯಲ್ಲಿ ಬಿರಿಯಾನಿ ಹೋಟೆಲ್ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಈ ಘಟನೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು ಇದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications