
ಶ್ರದ್ಧಾ ವಾಕರ್ ಹತ್ಯೆಯನ್ನು ಸಮರ್ಥಿಸಿ ವಿಡಿಯೋ ಹಂಚಿಕೆ: ವ್ಯಕ್ತಿ ಬಂಧನ
ದೆಹಲಿ, ನವೆಂಬರ್ 25: ವೈರಲ್ ವಿಡಿಯೋದಲ್ಲಿ ಶ್ರದ್ಧಾ ವಾಕರ್ ಅವರ ಕ್ರೂರ ಹತ್ಯೆಯನ್ನು ಸಮರ್ಥಿಸಿಕೊಂಡ ವ್ಯಕ್ತಿಯನ್ನು ಉತ್ತರ ಪ್ರದೇಶ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ವಿಡಿಯೋದಲ್ಲಿ ತನ್ನನ್ನು ತಾನು ರಶೀದ್ ಖಾನ್ ಎಂದು ಕರೆದುಕೊಳ್ಳುತ್ತಿದ್ದ ವ್ಯಕ್ತಿ ನಿಜವಾಗಿ ವಿಕಾಸ್ ಕುಮಾರ್ ಎಂದು ತಿಳಿದುಬಂದಿದೆ.
ವಿಕಾಸ್ ಕುಮಾರ್ -ರಶೀದ್ ಖಾನ್ ಎಂದು ನಟಿಸಿ ತನ್ನ ಗೆಳತಿಯನ್ನು 35 ತುಂಡುಗಳಾಗಿ ಕತ್ತರಿಸಿದ ಆಫ್ತಾಬ್ ಅಮೀನ್ ಪೂನಾವಾಲಾ ಕೃತ್ಯವನ್ನು ಬೆಂಬಲಿಸಿದ್ದನ್ನು ಬುಲಂದ್‌ಶಹರ್ ಜಿಲ್ಲೆಯ ಸಿಕಂದರಾಬಾದ್ ಪೊಲೀಸರು ಬಹಿರಂಗಪಡಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ವಿಕಾಸ್ ಅವರು ಶ್ರದ್ಧಾ ಅವರ ಕ್ರೂರ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕೋಪದಲ್ಲಿ ಇದು ಸಂಭವಿಸಬಹುದು ಎಂದು ಹೇಳಿದ್ದಾರೆ. "ಯಾರಾದರೂ ಕೋಪಗೊಂಡಾಗ, ಅವರು 35ಕ್ಕೂ ಹೆಚ್ಚು ತುಣುಕುಗಳನ್ನು ಮಾಡಬಹುದು" ಎಂದು ಅವರು ಹೇಳಿದ್ದಾರೆ.
ವಿಡಿಯೋ ವೈರಲ್ ಆದ ನಂತರ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಶುಕ್ರವಾರ ವಿಕಾಸ್ ಕುಮಾರ್‌ನನ್ನು ಬಂಧಿಸಲಾಗಿದೆ. ವಿಕಾಸ್ ವಿರುದ್ಧ ಬುಲಂದ್‌ಶಹರ್‌ನಲ್ಲಿ ಈಗಾಗಲೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಮತ್ತು ನೋಯ್ಡಾದಲ್ಲಿ ಕಳ್ಳತನ ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ಸಾಗಿಸಿದ ದಾಖಲೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಕಾಸ್ ಕುಮಾರ್ ವಿರುದ್ಧ ಈಗಾಗಲೇ ಐದು ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.