Justice B.R Gavai: ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಬಿ.ಆರ್. ಗವಾಯಿ ನೇಮಕ
ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರನ್ನು ಮಂಗಳವಾರ ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿ ನೇಮಿಸಲಾಗಿದೆ. ಮೇ 14 ರಂದು ಅವರು ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರನ್ನು ಮೇ 14, 2025 ರಿಂದ ಜಾರಿಗೆ ಬರುವಂತೆ ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿದ್ದಾರೆ.
ಹಾಲಿ ಸಿಜೆಐ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಮೇ 13 ರಂದು ನಿವೃತ್ತರಾಗಲಿದ್ದು, ಅದಾದ ಬಳಿಕ ಬಿ.ಆರ್. ಗವಾಯಿ ನ್ಯಾಯಮೂರ್ತಿಯಾಗಿ ಕಾರ್ಯಾರಂಭ ಮಾಡಲಿದ್ದಾರೆ.

ಭಾರತದ ಸಂವಿಧಾನವು ನೀಡಿರುವ ಅಧಿಕಾರವನ್ನು ಚಲಾಯಿಸಿ, ಭಾರತದ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾದ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರನ್ನು ಮೇ 14, 2025 ರಿಂದ ಜಾರಿಗೆ ಬರುವಂತೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲು ಸಂತೋಷಪಡುತ್ತೇನೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ನ್ಯಾಯಮೂರ್ತಿ ಬಿ.ಆರ್. ಗವಾಯಿ 52 ನೇ ಸಿಜೆಐ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು 2010 ರಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾದ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನಂತರ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಎರಡನೇ ಸಿಜೆಐ ಆಗಲಿದ್ದಾರೆ.
ಶಿಷ್ಟಾಚಾರದ ಪ್ರಕಾರ, ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಹೆಸರನ್ನು ಸಿಜೆಐ ಖನ್ನಾ ಅವರು ಏಪ್ರಿಲ್ 16 ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ಗವಾಯಿ ಅವರು ಆರು ತಿಂಗಳ ಅಧಿಕಾರಾವಧಿಯನ್ನು ಹೊಂದಿರುತ್ತಾರೆ ಮತ್ತು ಡಿಸೆಂಬರ್ 23 ರಂದು 65 ವರ್ಷ ವಯಸ್ಸಿನ ನಂತರ ತಮ್ಮ ಹುದ್ದೆಯನ್ನು ತ್ಯಜಿಸಲಿದ್ದಾರೆ.
ನ್ಯಾಯಮೂರ್ತಿ ಬಿ.ಆರ್. ಗವಾಯಿ ಬಗ್ಗೆ ವಿವರ
ಬಿ.ಆರ್. ಗವಾಯಿ ನವೆಂಬರ್ 24, 1960 ರಂದು ಮಹಾರಾಷ್ಟ್ರದ ಅಮರಾವತಿಯಲ್ಲಿ ಜನಿಸಿದರು. 1985 ರಲ್ಲಿ ತಮ್ಮ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದ ಅವರು ಆರಂಭದಲ್ಲಿ ಮಾಜಿ ಅಡ್ವೊಕೇಟ್ ಜನರಲ್ ಮತ್ತು ಹೈಕೋರ್ಟ್ ನ್ಯಾಯಾಧೀಶರಾದ ದಿವಂಗತ ರಾಜಾ ಎಸ್ ಭೋನ್ಸಾಲೆ ಅವರ ಜೊತೆ ಕೆಲಸ ಮಾಡಿದರು. 1987 ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ಸ್ವತಂತ್ರ ವೃತ್ತಿಯನ್ನು ಪ್ರಾರಂಭಿಸಿದರು.
ಬಳಿಕ ಸಾಂವಿಧಾನಿಕ ಮತ್ತು ಆಡಳಿತಾತ್ಮಕ ಕಾನೂನಿನ ಮೇಲೆ ಗಮನಹರಿಸಿದರು. ಅವರು ನಾಗ್ಪುರ ಮತ್ತು ಅಮರಾವತಿಯ ಮುನ್ಸಿಪಲ್ ಕಾರ್ಪೊರೇಷನ್‌ಗಳು, ಅಮರಾವತಿ ವಿಶ್ವವಿದ್ಯಾಲಯ ಮತ್ತು ಸಿಕಾಮ್ (SICOM) ಮತ್ತು ಡಿಸಿವಿಎಲ್ (DCVL) ನಂತಹ ಸರ್ಕಾರಿ ನಿಗಮಗಳು ಸೇರಿದಂತೆ ಹಲವಾರು ನಾಗರಿಕ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಪ್ರತಿನಿಧಿಸಿದರು. ಆಗಸ್ಟ್ 1992 ರಲ್ಲಿ, ಅವರನ್ನು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದಲ್ಲಿ ಸಹಾಯಕ ಸರ್ಕಾರಿ ವಕೀಲ ಮತ್ತು ಹೆಚ್ಚುವರಿ ಸಾರ್ವಜನಿಕ ಅಭಿಯೋಜಕರಾಗಿ ನೇಮಕ ಮಾಡಲಾಯಿತು. 2000 ರಲ್ಲಿ ಅದೇ ಪೀಠಕ್ಕೆ ಸರ್ಕಾರಿ ವಕೀಲ ಮತ್ತು ಸಾರ್ವಜನಿಕ ಅಭಿಯೋಜಕರಾದರು.
ನವೆಂಬರ್ 14, 2003 ರಂದು ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕವಾದರು. 2005 ರಲ್ಲಿ ಖಾಯಂ ನ್ಯಾಯಾಧೀಶರಾದರು. ಮುಂಬೈನಲ್ಲಿ ಹೈಕೋರ್ಟ್‌ನ ಪ್ರಧಾನ ಸ್ಥಾನದಲ್ಲಿ ಮತ್ತು ನಾಗ್ಪುರ, ಔರಂಗಾಬಾದ್ ಮತ್ತು ಪಣಜಿಯಲ್ಲಿ ಪೀಠಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಮೇ 24, 2019 ರಂದು ಅವರಿಗೆ ಸುಪ್ರೀಂ ಕೋರ್ಟ್‌ಗೆ ಬಡ್ತಿ ನೀಡಲಾಯಿತು.












Click it and Unblock the Notifications