ಬಿಜೆಪಿ ಅಡ್ಡಾದಿಂದ ಹೀಗೊಂದು ಸುದ್ದಿ; ಜೆಪಿ ನಡ್ಡಾಗೆ ಸಿಗಬಹುದಂತೆ ಅಧ್ಯಕ್ಷ ಗಾದಿ
ನವದೆಹಲಿ, ಮೇ 29: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೇಂದ್ರ ಸಂಪುಟ ಸೇರ್ಪಡೆ ಆಗುವುದು ಖಚಿತವಾಗಿದೆ. ಬಿಜೆಪಿ ಸಂಘಟನೆಯನ್ನು ಇಷ್ಟು ಬಲಿಷ್ಠವಾಗಿ ಬೆಳೆಸಿದ ಅವರ ಸ್ಥಾನ ( ಪಕ್ಷದ ಅಧ್ಯಕ್ಷ ಹುದ್ದೆ) ಯಾರು ವಹಿಸಿಕೊಳ್ಳಬಹುದು ಎಂಬ ಕುತೂಹಲದ ಪ್ರಶ್ನೆಗೆ ಜೆ.ಪಿ.ನಡ್ಡಾ (ಜಗತ್ ಪ್ರಕಾಶ್ ನಡ್ಡಾ) ಹೆಸರು ಕೇಳಿಬಂದಿದೆ. ಹುದ್ದೆಯನ್ನು ನಡ್ಡಾ ವಹಿಸಿಕೊಂಡರೂ ಕೆಲ ಕಾಲ ಅಮಿತ್ ಶಾ ಅವರ ಜತೆಜತೆಗೆ ಸಂಘಟನೆಯ ಕೆಲಸ ಮಾಡುವ ಸಾಧ್ಯತೆ ಇದೆ.
ಈಗ ಅಂದಾಜು ಮಾಡಿರುವಂತೆ ಜುಲೈ ಹತ್ತನೆ ತಾರೀಕು ಕೇಂದ್ರದ ಬಜೆಟ್ ಮಂಡನೆ ಆಗಬಹುದು. ಈ ವರ್ಷದ ಸೆಪ್ಟೆಂಬರ್ ವೇಳೆಗೆ ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ಹರಿಯಾಣ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಆ ಹೊತ್ತಿಗೆ ಚುನಾವಣೆ ರಣತಂತ್ರದ ಹೊಣೆಯನ್ನು ನಡ್ಡಾ ವಹಿಸಿಕೊಳ್ಳಬಹುದು.
ಆ ನಂತರ ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆ ನಡೆಯಬಹುದು. ಒಂದು ಅಂದಾಜಿನ ಪ್ರಕಾರ, ಕರ್ನಾಟಕದಲ್ಲಿ ಮೈತ್ರಿ ಸರಕಾರ ಸಹ ಅದೇ ವೇಳೆಗೆ ಬಿದ್ದು, ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ. ಮುಂದಿನ ವರ್ಷದ ಆರಂಭದ ಹೊತ್ತಿಗೆ ದೆಹಲಿ ಚುನಾವಣೆಗೆ ಪ್ರಕ್ರಿಯೆಗಳು ಆರಂಭ ಆಗುತ್ತವೆ.

59 ವರ್ಷದ ನಡ್ಡಾ ಜಾತಿಯಿಂದ ಬ್ರಾಹ್ಮಣರು. ರಾಜ್ಯಸಭಾ ಸದಸ್ಯರೂ ಹೌದು. ಜತೆಗೆ ಬಿಜೆಪಿ ಸಂಸದೀಯ ಸಮಿತಿಯ ಕಾರ್ಯದರ್ಶಿ ಆಗಿದ್ದಾರೆ. ಬಿಜೆಪಿಯಲ್ಲಿ ನಡ್ಡಾ ಅವರನ್ನು ಮಾಸ್ಟರ್ ಸ್ಟ್ರಾಟೆಜಿಸ್ಟ್ ಅಂತಲೇ ಕರೆಯಲಾಗುತ್ತದೆ. ಈಚೆಗೆ ಮುಕ್ತಾಯವಾದ ಲೋಕಸಭೆ ಚುನಾವಣೆಯಲ್ಲಿ ನಡ್ಡಾ ಅವರಿಗೆ ಉತ್ತರಪ್ರದೇಶದ ಹೊಣೆಯನ್ನು ವಹಿಸಲಾಗಿತ್ತು. ಒಟ್ಟು 80 ಸ್ಥಾನದಲ್ಲಿ ಬಿಜೆಪಿ 62 ಜಯಿಸಿದೆ.
ಪಾಟ್ನಾದ ಸೇಂಟ್ ಕ್ಸೇವಿಯರ್ ಶಾಲೆಯಲ್ಲಿ ವ್ಯಾಸಂಗ ಮಾಡಿದ ನಡ್ಡಾ, ಪಾಟ್ನಾ ವಿ.ವಿ.ಯಲ್ಲಿ ಬಿ.ಎ., ಪದವಿ ಪಡೆದಿದ್ದಾರೆ. ಶಿಮ್ಲಾದ ವಿ.ವಿ.ಯಿಂದ ಕಾನೂನು ಪದವೀಧರರಾಗಿದ್ದಾರೆ. ಹಿಮಾಚಲ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದಾರೆ. ಐದು ವರ್ಷದ ಹಿಂದೆ ಹಿಮಾಚಲದ ಮೇಲ್ಮನೆಯಿಂದ ಆಯ್ಕೆಯಾದ ಅವರು ಕೇಂದ್ರದಲ್ಲಿ ಸಚಿವ ಕೂಡ ಆದರು.
ಬಿಜೆಪಿ ಅಧ್ಯಕ್ಷರಾಗಿ ಅಮಿತ್ ಶಾ ಮಾಡಿದ ಕೆಲಸಗಳನ್ನು ತಕ್ಕಡಿಯಲ್ಲಿ ಇಟ್ಟೇ ಮುಂದಿನ ಅಧ್ಯಕ್ಷರನ್ನು ತೂಗಲಾಗುತ್ತದೆ. ಬಿಜೆಪಿಯು ದಕ್ಷಿಣದಲ್ಲಿ ಮತ್ತಷ್ಟು ಪ್ರಬಲವಾಗಿ ನೆಲೆಯೂರುವಂತೆ ಮಾಡಬೇಕಾದ ಜವಾಬ್ದಾರಿಯು ಹೊಸ ಅಧ್ಯಕ್ಷರ ಮೇಲೆ ಬೀಳಲಿದೆ.












Click it and Unblock the Notifications