BSNL: ಜಿಯೋ, ವಿಐ, ಏರ್‌ಟೆಲ್‌ಗೆ ಶಾಕ್! ಜುಲೈನಲ್ಲಿ ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆ ಹೆಚ್ಚಳ
ಜುಲೈ 2024ರ ತಿಂಗಳಿನಲ್ಲಿ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಗ್ರಾಹಕರನ್ನು ಕಳೆದುಕೊಂಡಿದೆ. ಟ್ಯಾರಿಫ್ ದರವನ್ನು ಹೆಚ್ಚಳ ಮಾಡಿದ್ದರಿಂದ ಬೇಸತ್ತ ಗ್ರಾಹಕರು ಈ ನೆಟ್‌ವರ್ಕ್‌ಗಳಿಂದ ಹೊರಬಂದಿದ್ದಾರೆ. ದೇಶದಲ್ಲಿ ಟೆಲಿಕಾಂ ಚಂದಾದಾರರ ಒಟ್ಟಾರೆ ಕುಸಿತಕ್ಕೆ ಕಾರಣವಾಗಿದೆ. ಇದೇ ವೇಳೆಯಲ್ಲಿ ಬಿಎಸ್‌ಎನ್‌ಎಲ್ ಮಾತ್ರ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ.
ಜುಲೈ ಮೊದಲ ವಾರದಲ್ಲಿ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ರೀಚಾರ್ಜ್ ದರಗಳನ್ನು 10% ರಿಂದ 27% ರಷ್ಟು ಹೆಚ್ಚಿಸಿವೆ. ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಳೆದ 2-3 ವರ್ಷಗಳಲ್ಲಿ ಮೊಬೈಲ್ ದರಗಳನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ 199 ರೂಪಾಯಿಗೆ ಹೆಚ್ಚಿಸಿವೆ.

ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಶುಕ್ರವಾರ ಚಂದಾದಾರರ ವರದಿಯನ್ನು ಬಿಡುಗಡೆ ಮಾಡಿದ್ದು, ಹಲವು ಮಾಹಿತಿಗಳನ್ನು ಬಹಿರಂಗಪಡಿಸಿದೆ. ಜುಲೈನಲ್ಲಿ ಹೊಸ ಚಂದಾದಾರರನ್ನು ಸೇರಿಸಿಕೊಂಡ ಮತ್ತು ಮಾರುಕಟ್ಟೆಯನ್ನು ಮುನ್ನಡೆಸಿದ ಏಕೈಕ ಕಂಪನಿ ಬಿಎಸ್‌ಎನ್‌ಎಲ್ ಆಗಿದೆ. ವರದಿಗಳ ಪ್ರಕಾರ ಜುಲೈನಲ್ಲಿ ಬಿಎಸ್‌ಎನ್‌ಎಲ್ 29 ಲಕ್ಷ ಹೊಸ ಚಂದಾದಾರರು ಸೇರ್ಪಡೆಯಾಗಿದ್ದಾರೆ.
ಭಾರ್ತಿ ಏರ್‌ಟೆಲ್ 1.69 ಮಿಲಿಯನ್ ಮೊಬೈಲ್ ಚಂದಾದಾರರನ್ನು ಕಳೆದುಕೊಂಡಿದ್ದು ಅತಿ ಹೆಚ್ಚು ಗ್ರಾಹಕರನ್ನು ಕಳೆದುಕೊಂಡ ಕಂಪನಿಯಾಗಿದೆ. ವೊಡಾಫೋನ್ ಐಡಿಯಾ 1.41 ಮಿಲಿಯನ್ ಮತ್ತು ರಿಲಯನ್ಸ್ ಜಿಯೋ 7.5 ಲಕ್ಷ ಚಂದಾದಾರರನ್ನು ಕಳೆದುಕೊಂಡಿವೆ.
ದೇಶದಲ್ಲಿನ ಟೆಲಿಕಾಂ ಚಂದಾದಾರರ ಸಂಖ್ಯೆ ಜೂನ್‌ನಲ್ಲಿ 1,205.64 ಮಿಲಿಯನ್ ಇದ್ದರೆ ಜುಲೈನಲ್ಲಿ 1,205.17 ಮಿಲಿಯನ್‌ಗೆ ಕುಸಿತ ಕಂಡಿದೆ. ಮಹಾರಾಷ್ಟ್ರ, ರಾಜಸ್ಥಾನ, ಮುಂಬೈ, ಕೋಲ್ಕತ್ತಾ, ತಮಿಳುನಾಡು, ಪಂಜಾಬ್, ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಹರಿಯಾಣ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಮೊಬೈಲ್ ಸೇವೆಗಳ ದರಗಳ ಹೆಚ್ಚಳದ ನಂತರ ಗ್ರಾಹಕರ ಸಂಖ್ಯೆ ಕುಸಿತ ಕಂಡಿದೆ.
ವೈಫೈ ಕನೆಕ್ಷನ್‌ಗಳ ವಿಭಾಗದಲ್ಲಿ ಜೂನ್‌ನಲ್ಲಿ 35.11 ಮಿಲಿಯನ್‌ನಿಂದ ಜುಲೈನಲ್ಲಿ 35.56 ಮಿಲಿಯನ್‌ಗೆ ಹೆಚ್ಚಾಗಿದೆ. ಈ ವಿಭಾಗದಲ್ಲಿ ರಿಲಯನ್ಸ್ ಜಿಯೋ 4.8 ಲಕ್ಷಕ್ಕೂ ಹೆಚ್ಚು ಹೊಸ ಚಂದಾದಾರರನ್ನು ಪಡೆದುಕೊಂಡಿದೆ. ಭಾರ್ತಿ ಏರ್‌ಟೆಲ್ 1.36 ಲಕ್ಷ ಹೊಸ ಚಂದಾದಾರರನ್ನು ಸೇರಿಸಿದೆ. ಟಾಟಾ ಟೆಲಿಸರ್ವಿಸಸ್, ಕ್ವಾಡ್ರಾಂಟ್ ಕೂಡ ಸಾವಿರಾರು ಚಂದಾರರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿವೆ. ಆದರೆ ಇದೇ ವೇಳೆಯಲ್ಲಿ ಬಿಎಸ್‌ಎನ್‌ಎಲ್ ಸ್ಥಿರ ದೂರವಾಣಿ ವಿಭಾಗದಲ್ಲಿ 1.34 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಬ್ರಾಡ್‌ಬ್ಯಾಂಡ್ ಗ್ರಾಹಕರ ಸಂಖ್ಯೆಯು ಜೂನ್‌ನಲ್ಲಿ 940.75 ಮಿಲಿಯನ್‌ನಿಂದ ಜುಲೈ ಅಂತ್ಯಕ್ಕೆ 946.19 ಮಿಲಿಯನ್‌ಗೆ ಏರಿದೆ.












Click it and Unblock the Notifications