ಗೋಡ್ಸೆ ಭಕ್ತರಿಂದ ನನ್ನ ಬಂಧನಕ್ಕೆ ಚಿತಾವಣೆ: ಜಿಗ್ನೇಶ್ ಮೆವಾನಿ ಕಿಡಿ
ನವದೆಹಲಿ, ಮೇ 2: ಸೃಷ್ಟಿತ ಪ್ರಕರಣವೊಂದರಲ್ಲಿ ಜೈಲಿಗೆ ಸೇರಿ ಕೋರ್ಟ್ ಆದೇಶದ ಮೇರೆಗೆ ಜಾಮೀನಿನ ಮೇಲೆ ಹೊರಬಂದಿರುವ ಗುಜರಾತ್ ರಾಜ್ಯದ ಶಾಸಕ ಜಿಗ್ನೇಶ್ ಮೆವಾನಿ ಇಂದು ಸೋಮವಾರ ಭಾರತೀಯ ಜನತಾ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ರಾಷ್ಟ್ರರಾಜಧಾನಿಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, "ಪಿಎಂಒ (ಪ್ರಧಾನಿ ಕಾರ್ಯಾಲಯ) ದಲ್ಲಿ ಕೂತಿರುವ ಕೆಲ ಗೋಡ್ಸೆ ಭಕ್ತರು ನನ್ನ ಬಂಧನದ ಹಿಂದಿನ ಶಕ್ತಿಯಾಗಿದ್ದಾರೆ" ಎಂದು ಆರೋಪಿಸಿದರು.
"ಗುಜರಾತ್ ರಾಜ್ಯದಲ್ಲಿ ಮುಂಬರಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನನ್ನ ತೇಜೋವಧೆ ಮಾಡಲು ಪೂರ್ವಯೋಜಿತ ಸಂಚಿನ ಭಾಗವಾಗಿ ಈ ಪ್ರಕರಣಗಳನ್ನ ದಾಖಲು ಮಾಡಲಾಗಿದೆ" ಎಂದು ಪಕ್ಷೇತರ ಶಾಸಕ ಹಾಗು ಪ್ರಗತಿಪರ ಮುಖಂಡರೂ ಆ ಜಿಗ್ನೇಶ್ ಅಭಿಪ್ರಾಯಪಟ್ಟರು.
ಬಿಡುಗಡೆ ಆದ ದಿನ ಜಿಗ್ನೇಶ್ ಮೇವಾನಿ ಅವರು ಪುಷ್ಪಾ ಸಿನಿಮಾದ ಡೈಲಾಗ್ ಹೊಡೆದು ತಾನು ಬಗ್ಗುವ ಆಸಾಮಿಯೇ ಅಲ್ಲ ಎಂದಿದ್ದರು. ಇಂದೂ ಕೂಡ ಅವರು ಪುಷ್ಪ ಸಿನಿಮಾದ ಮತ್ತೊಂದು ಡೈಲಾಗ್ ಹೊಡೆದು ಗಮನ ಸೆಳೆದರು. ಸರಕಾರದ ಇಂಥ ಒತ್ತಡಗಳಿಗೆಲ್ಲ ಮಣಿಯಲು ನಾನು ಫ್ಲವರ್ ಅಲ್ಲ, ಫಯರು" ಎಂದು ಹೇಳಿದರು.

"ನನ್ನ ಮತ್ತು ಸಹವರ್ತಿಗಳಿಂದ ವಶಪಡಿಸಿಕೊಳ್ಳಲಾಗಿದ್ದ ಮೊಬೈಲ್ ಫೋನ್ ಮತ್ತು ಲ್ಯಾಪ್ ಟಾಪ್‌ಗಳಲ್ಲಿ ಸರಕಾರ ರಹಸ್ಯವಾಗಿ ಏನೋ ಇರಿಸಿರುವ ಸಾಧ್ಯತೆ ಇದೆ" ಎಂದೂ ಜಿಗ್ನೇಶ್ ಅನುಮಾನ ವ್ಯಕ್ತಪಡಿಸಿದರು.
ಮೇವಾನಿ ಮೇಲಿನ ಆರೋಪಗಳೇನು?
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಜಿಗ್ನೇಶ್ ಮೇವಾನ ಟ್ವೀಟ್‌ಗಳನ್ನ ಮಾಡಿದ್ದರು. ಈ ಸಂಬಂಧ ಅಸ್ಸಾಮ್‌ನ ಕೋಕ್ರಜಾರ್ ಜಿಲ್ಲೆಯ ಬಿಜೆಪಿ ನಾಯಕರು ಪೊಲೀಸ್ ದೂರು ಕೊಟ್ಟರು. ಅಗ ಅಸ್ಸಾಮ್ ಪೊಲೀಸರು ಗುಜರಾತ್‌ಗೆ ತೆರಳಿ ಏಪ್ರಿಲ್ 20ರಂದು ಜಿಗ್ನೇಶ್ ಅವರನ್ನ ಬಂಧಿಸಿ ಗುವಾಹಟಿಗೆ ಕರೆದೊಯ್ದರು. ನಂತರ ಸ್ಥಳೀಯ ನ್ಯಾಯಾಲಯವು ಏಪ್ರಿಲ್ 25ರಂದು ಜಿಗ್ನೇಶ್‌ಗೆ ಜಾಮೀನು ನೀಡಿತು. ದಿಢೀರ್ ನಾಟಕೀಯ ಬೆಳವಣಿಗೆಯಲ್ಲಿ ಅಸ್ಸಾಮ್ ಪೊಲೀಸರು ಜಿಗ್ನೇಶ್ ಅವರನ್ನ ಮತ್ತೊಮ್ಮೆ ಬಂಧಿಸಿದರು. ಲೇಡಿ ಪೊಲೀಸ್ ಕಾನ್ಸ್‌ಟೆಬಲ್ ಮೇಲೆ ಹಲ್ಲೆ ಎಸಗಿದರೆಂಬ ಕಾರಣಕ್ಕೆ ಅದೇ ದಿನ ಅವರ ಬಂಧನವಾಗಿತ್ತು. ಕಳೆದ ಶುಕ್ರವಾರಂದು ನ್ಯಾಯಾಲಯವು ಈ ಎರಡನೇ ಪ್ರಕರಣದಲ್ಲೂ ಜಿಗ್ನೇಶ್‌ಗೆ ಜಾಮೀನು ನೀಡಿತು. ಜೊತೆಗೆ ಲೇಡಿ ಕಾನ್ಸ್‌ಟೆಬಲ್ ಮೇಲೆ ಹಲ್ಲೆ ಎಸಗಿದರೆಂಬ ಸುಳ್ಳು ಆರೋಪ ಮಾಡಿ ನಕಲಿ ಕೇಸ್ ಹಾಕಿದ್ದಕ್ಕೆ ಅಸ್ಸಾಮ್ ಪೊಲೀಸರಿಗೆ ಛೀಮಾರಿ ಕೂಡ ಹಾಕಿತು.
ಟ್ವೀಟ್ ಬಗ್ಗೆ ಮೇವಾನಿ ಸ್ಪಷ್ಟನೆ:
"ನನ್ನ ಟ್ವೀಟ್ ಬಹಳ ಸರಳವಾಗಿತ್ತು. ಶಾಂತಿ ಮತ್ತು ಸೌಹಾರ್ದತೆ ಕಾಪಾಡಬೇಕೆಂದು ನಾನು ಪ್ರಧಾನಿಯವರನ್ನ ಕೇಳಿಕೊಂಡಿದ್ದಷ್ಟೇ. ಆ ಕಾರಣಕ್ಕೇ ನನ್ನನ್ನು ಬಂಧಿಸಿದರು. ಇದು ಏನನ್ನು ತೋರಿಸುತ್ತದೆ? ನನ್ನನ್ನು ನಾಶ ಮಾಡಲು ಪೂರ್ವಯೋಜಿತ ಸಂಚು ಇದಾಗಿತ್ತು...
"ನನಗೆ ಎಫ್‌ಐಆರ್ ಕಾಪಿ ಕೊಡಲಿಲ್ಲ. ನನ್ನ ವಿರುದ್ಧ ಯಾವ ಸೆಕ್ಷನ್‌ಗಳಡಿ ಕೇಸ್ ಹಾಕಿದ್ದೆಂಬ ಮಾಹಿತಿ ಕೊಡಲಿಲ್ಲ. ವಕೀಲರ ಜೊತೆ ಮಾತನಾಡಲು ಬಿಡಲಿಲ್ಲ. ಒಬ್ಬ ಶಾಸಕನ ಹಕ್ಕನ್ನು ಕಡೆಗಣಿಸಲಾಯಿತು. ನನ್ನ ಬಂಧನವಾಗಿರುವ ಬಗ್ಗೆ ಗುಜರಾತ್ ವಿಧಾನಸಭೆ ಅಧ್ಯಕ್ಷರಿಗೂ ಮಾಹಿತಿ ಕೊಡಲಿಲ್ಲ. ನನ್ನನ್ನು ಅಸ್ಸಾಮ್‌ಗೆ ಕರೆದೊಯ್ದ ಬಳಿಕ ಅವರ ಗಮನಕ್ಕೆ ತಂದಿರಬಹುದು. ಇದು ಗುಜರಾತ್ ರಾಜ್ಯದ ಪ್ರತಿಷ್ಠೆಗೆ ಧಕ್ಕೆ ತಂದಂತಿದೆ. ಗುಜರಾತ್ ಸರಕಾರಕ್ಕೂ ಇದು ತಲೆತಗ್ಗಿಸುವ ವಿಷಯ" ಎಂದು ಜಿಗ್ನೇಶ್ ಮೇವಾನಿ ಆಕ್ರೋಶ ವ್ಯಕ್ತಪಡಿಸಿದರು.
ಸರಕಾರದ ವಿರುದ್ಧ ಮೇವಾನಿ ಆರೋಪಗಳ ಸುರಿಮಳೆ:
"ಗುಜರಾತ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ 22 ಪ್ರಕರಣಗಳಿವೆ. ಆದರೆ ಒಂದೂ ಕೇಸ್ ದಾಖಲಾಗಿಲ್ಲ. ಬಂಧನವಾಗುವುದಿರಲಿ ಯಾವ ತನಿಖೆಯನ್ನೂ ನಡೆಸಲಾಗಿಲ್ಲ. ಮುಂದ್ರಾ ಪೋರ್ಟ್‌ನಲ್ಲಿ ಮಾದಕವಸ್ತು ವಶಪಡಿಸಿಕೊಳ್ಳಲಾದ ಪ್ರಕರಣದಲ್ಲೂ ಯಾವುದೇ ತನಿಖೆ ಆಗಿಲ್ಲ. ಗುಜರಾತ್‌ನ ಸಚಿವರೊಬ್ಬರು ದಲಿತ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಇರುವ ಪ್ರಕರಣದಲ್ಲೂ ಯಾವುದೇ ಬಂಧನವಾಗಲೀ ತನಿಖೆಯಾಗಲೀ ಆಗಿಲ್ಲ. ಧರ್ಮ ಸಂಸದ್ ಸಭೆಯಲ್ಲಿ ನಿರ್ದಿಷ್ಟ ಸಮುದಾಯದ ಮಾರಣಹೋಮಕ್ಕೆ ಕರೆಕೊಡಲಾಗಿತ್ತು. ಆ ಸಂಬಂಧವೂ ಯಾವುದೇ ಕ್ರಮ ಜರುಗಿಸಿಲ್ಲ" ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಜಿಗ್ನೇಶ್ ಮೇವಾನಿ ತರಾಟೆಗೆ ತೆಗೆದುಕೊಂಡರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications