Jharkhand Election 2024: ಬಿಜೆಪಿಗೆ ಬಿಕ್ಕಟ್ಟು ಶುರು.. ಬುಡಕಟ್ಟು ಜನಾಂಗದ ಮತ ಗೆಲ್ಲುತ್ತಾ ಕಮಲ?
ರಾಂಚಿ ಸೆಪ್ಟೆಂಬರ್ 20: ಜಾರ್ಖಂಡ್ ವಿಧಾನಸಭಾ ಚುನಾವಣೆ ಸದ್ಯದಲ್ಲೇ ನಡೆಯಲಿದ್ದು ಮತಬೇಟೆ ಶುರುವಾಗಿದೆ. ಸ್ಥಾನ ಉಳಿಸಿಕೊಳ್ಳಲು ಸಾಧ್ಯವಿರುವ ಕ್ಷೇತ್ರಗಳಲ್ಲಿ ಪ್ರಬಲ ಪಕ್ಷಗಳು ಭಾರೀ ಪೈಪೋಟಿ ನಡೆಸಿವೆ. ಈ ಸಂದರ್ಭದಲ್ಲಿ ಬುಡಕಟ್ಟು ಜನಾಂಗದವರ ಮತ ಸಂಗ್ರಹಿಸುವಲ್ಲಿ ಬಿಜೆಪಿಗೆ ಸಮಸ್ಯೆ ಎದುರಾಗಿದೆ.
ಹೌದು... ಇತ್ತೀಚಿನ ದಿನಗಳಲ್ಲಿ ಜಾರ್ಖಂಡ್ ಸಂಬಂಧಿತ ಸುದ್ದಿಗಳು ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಗಮನ ಸೆಳೆಯುತ್ತಿವೆ. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಹೇಮಂತ್ ಸೊರನ್ ಬಂಧನವಾದಾಗಿನಿಂದಲೂ ರಾಜಕೀಯ ಅಲ್ಲೋಲ ಕಲ್ಲೋಲವಾಗಿದೆ. ಹೇಮಂತ್ ಸೊರನ್ ಬಂಧನದ ನಂತರ ಸಂಭಾಯಿ ಸೊರನ್ ಅವರನ್ನು ಹಂಗಾಮಿ ಮುಖ್ಯಮಂತ್ರಿಯಾಗಿ ನೇಮಿಸಲಾಯಿತು. ಆದರೆ ಹೇಮಂತ್ ಜೈಲಿನಿಂದ ಹೊರಬಂದ ನಂತರ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.

ಇದರಿಂದ ಹತಾಶರಾದ ಸಂಭಾಯಿ ಸೊರನ್ ಜಾರ್ಖಂಡ್ ಮುಕ್ತಿ ಮೋರ್ಚಾ ತೊರೆದು ಬಿಜೆಪಿ ಸೇರಿದರು. ಆದರೆ ಈ ಬಾರಿ ಚುನಾವಣೆಗೆ ರಾಜ್ಯದ ಬುಡಕಟ್ಟು ಜನರ ಮತಗಳು ಚೆಲ್ಲಾಪಿಲ್ಲಿಯಾಗದೆ ಪಡೆಯುವಲ್ಲಿ ಬಿಜೆಪಿಗೆ ತೊಂದರೆ ಎದುರಾಗಿದೆ. ಆದರೆ ಬುಡಕಟ್ಟು ಜನರ ಮತ ಸಿಗದೆ ಜಾರ್ಖಂಡ್್ನಲ್ಲಿ ಗೆಲುವು ಸಾಧಿಸುವುದು ಬಿಜೆಪಿಗೆ ಸವಾಲಿನ ಕೆಲಸ.
ಯಾಕೆಂದರೆ ಇತರೆ ರಾಜ್ಯಗಳಿಗೆ ಹೋಲಿಸಿದರೆ ಜಾರ್ಖಂಡ್ ರಾಜ್ಯದಲ್ಲಿ ಆದಿವಾಸಿಗಳ ಸಂಖ್ಯೆ ಹೆಚ್ಚಾಗಿದೆ. ಇದು ಶೇಕಡಾವಾರು ಮತದಾನದಲ್ಲೂ ಪ್ರತಿಫಲಿಸುತ್ತದೆ. 2011ರ ಕೊನೆಯ ಜನಗಣತಿಯ ಪ್ರಕಾರ, ಈ ರಾಜ್ಯದಲ್ಲಿ ಬುಡಕಟ್ಟು ಜನರ ಸಂಖ್ಯೆ 21.5% ಇದೆ. ಕಳೆದ 20 ವರ್ಷಗಳಲ್ಲಿ ಇದು ಮತ್ತಷ್ಟು ಹೆಚ್ಚಿದೆ ಎನ್ನಲಾಗಿದೆ.
ಆದರೆ ಈ ಮತಗಳನ್ನು ಪಡೆಯಲು ಬಿಜೆಪಿ ಹರಸಾಹಸ ಪಡುತ್ತಿದೆ ಎನ್ನುತ್ತಾರೆ ರಾಜಕೀಯ ವಿಮರ್ಶಕರು. ಸಂಭಾಯಿ ಸೊರನ್ ಅವರನ್ನು ಬಿಜೆಪಿ ವಶಪಡಿಸಿಕೊಂಡಿದ್ದರೂ ಇಲ್ಲಿಯವರೆಗೆ ಬಿಜೆಪಿ ಹಿಂದೂ ಬುಡಕಟ್ಟು ಜನರನ್ನು ಮಾತ್ರ ತನ್ನ ತೆಕ್ಕೆಗೆ ಕರೆತರಲು ಸಾಧ್ಯವಾಗಿಲ್ಲ. ಹೀಗಾಗಿ ಈ ಮತಗಳು ಕೈತಪ್ಪುವ ಆತಂಕ ಶುರುವಾಗಿದ್ದು ಅದನ್ನು ಪಡೆಯಲು ಬಿಜೆಪಿ ಸಾಕಷ್ಟು ಪ್ರಯತ್ನ ಮಾಡುತ್ತಿದೆ.
'ಜಾರ್ಖಂಡ್‌ನ ಎಲ್ಲಾ ಮಾಜಿ ಸಿಎಂಗಳು ನನ್ನನ್ನು ಹುದ್ದೆಯಿಂದ ಕೆಳಗಿಳಿಸಲು ಹೊರಟಿದ್ದಾರೆ...'
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಗುರುವಾರ (ಸೆಪ್ಟೆಂಬರ್ 19) ಭಾರತೀಯ ಜನತಾ ಪಕ್ಷ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶಗೊಂಡರು. ಗರ್ವಾ ಜಿಲ್ಲೆಯ ಮೆರಲ್‌ನಲ್ಲಿ 'ಆಪ್ಕಿ ಸರ್ಕಾರ್ ಆಪ್ಕೆ ದ್ವಾರ' ಕಾರ್ಯಕ್ರಮದಡಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ರಾಜ್ಯದ ಎಲ್ಲಾ ಮಾಜಿ ಸಿಎಂಗಳು ಬಿಜೆಪಿ ಸೇರಿದ್ದಾರೆ ಎಂದಿದ್ದಾರೆ.
ಪ್ರಧಾನಿ ಕೂಡ ಜೊತೆಗಿದ್ದಾರೆ ಎಂದು ಸಿಎಂ ಹೇಮಂತ್ ಸೊರೇನ್ ಹೇಳಿದ್ದಾರೆ. ಆ ಬಿಜೆಪಿ ಜನರೆಲ್ಲ ಒಂದು ಕಡೆ, ನಾನು ಇನ್ನೊಂದು ಕಡೆ. ಆದರೆ, ನನಗೆ ಸಾರ್ವಜನಿಕರ ಆಶೀರ್ವಾದವಿದೆ. ರಾಜ್ಯದಲ್ಲಿ ಚುನಾವಣೆ ಹತ್ತಿರವಾಗಿದೆ. ಹೀಗಿರುವಾಗ ರಾಜ್ಯದಲ್ಲಿ ಹಿಂದೂ-ಮುಸ್ಲಿಂ ಒಡಕು ಸೃಷ್ಟಿಸುವ ಸಂಚುಕೋರರು ಓಡಾಡುತ್ತಿದ್ದಾರೆ. ಗುಜರಾತ್, ಯುಪಿ, ಮಹಾರಾಷ್ಟ್ರ, ಹೈದರಾಬಾದ್, ಚಂಡೀಗಢ, ಮಧ್ಯಪ್ರದೇಶದಲ್ಲಿ ಇಂತಹ ಜನರು ಪ್ರತಿ ಹಳ್ಳಿಯಲ್ಲೂ ಕಾಣಿಸುತ್ತಾರೆ.
ಮತ ಕದಿಯುವವರನ್ನು ಓಡಿಸಬೇಕು...
ಹಣಬಲದ ಆಧಾರದಲ್ಲಿ ಜನರನ್ನು ಒಟ್ಟುಗೂಡಿಸಿ ಜಾತಿ, ಧರ್ಮ, ಪಂಗಡಗಳ ಮೇಲೆ ವಿಷ ಹಾಕುವ ಕೆಲಸ ಮಾಡುತ್ತಾರೆ. ಅಂಥವರನ್ನು ಚುನಾವಣಾ ಚೀಲದಲ್ಲಿ ತುಂಬಿ ಎಲ್ಲಿಂದ ಬಂದರೂ ಅಲ್ಲಿಗೆ ವಾಪಸ್ ಕಳುಹಿಸಬೇಕು, ಮತ ಕದಿಯುವವನ್ನು ರಾಜ್ಯದಿಂದ ಓಡಿಸಬೇಕು ಎಂದು ಸಿಎಂ ಸೋರೆನ್ ಆರೋಪಿಸಿದ್ದಾರೆ.












Click it and Unblock the Notifications