ವಿಪಕ್ಷಗಳ ಮುಂಬೈ ಸಭೆ: ನಿತೀಶ್ ಕುಮಾರ್‌ರನ್ನು ಪಿಎಂ ಅಭ್ಯರ್ಥಿಯಾಗಿ ಬಿಂಬಿಸಲು ಜೆಡಿಯು ಒತ್ತಾಯ
ಪಾಟ್ನಾ, ಆಗಸ್ಟ್. 01: ಮುಂಬೈನಲ್ಲಿ ನಡೆಯಲಿರುವ ವಿರೋಧ ಪಕ್ಷಗಳ ನಾಯಕರ ಮೂರನೇ ಸುತ್ತಿನ ಸಭೆಗೆ ಮುನ್ನ ಜೆಡಿ (ಯು) ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವ ಬೇಡಿಕೆಯನ್ನು ಮತ್ತೊಮ್ಮೆ ಪುನರುಚ್ಛರಿಸಿದೆ. ಈ ಹಿಂದೆಯೂ ಜೆಡಿಯು ಅನೇಕ ಬಾರಿ ಈ ಬೇಡಿಕೆಯನ್ನು ವಿಪಕ್ಷಗಳ ಮುಂದಿಟ್ಟಿದೆ.
ಹಲವಾರು ಮಾಜಿ ಜೆಡಿ (ಯು) ಮಾಜಿ ಸಂಸದರು ಮತ್ತು ಮಾಜಿ ಶಾಸಕರು ವಿರೋಧ ಪಕ್ಷದ ಮೈತ್ರಿ 'ಇಂಡಿಯಾ' (ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ) ನಲ್ಲಿ ನಿತೀಶ್‌ಗಿಂತ ಉತ್ತಮ ಪ್ರಧಾನಿ ಅಭ್ಯರ್ಥಿ ಇಲ್ಲ ಎಂದು ತಿಳಿಸಿದ್ದಾರೆ. ಸಿಎಂ ಅವರ ಅಧಿಕೃತ ನಿವಾಸ ಅನ್ನೆ ಮಾರ್ಗದಲ್ಲಿ ನಿತೀಶ್ ಕುಮಾರ್ ಅವರೊಂದಿಗೆ ಸಭೆ ನಡೆಸಿದ್ದರು.

"ನಿತೀಶ್ ಕುಮಾರ್ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ನಾವು ಬಯಸುತ್ತೇವೆ. ಇದು ನಡೆದಲ್ಲಿ ಭಾರತವು ಗಮನಾರ್ಹವಾಗಿ ಲಾಭ ಪಡೆಯುತ್ತದೆ" ಎಂದು ಎಲ್ಲರೂ ಒಗ್ಗಟ್ಟಿನಿಂದ ಹೇಳಿದ್ದಾರೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಪಕ್ಷವನ್ನು ಬಲಪಡಿಸಲು ನಿತೀಶ್ ಕುಮಾರ್ ವಿಶೇಷ ಗಮನ ಹರಿಸುತ್ತಿದ್ದಾರೆ. ಈ ಕುರಿತು ಪಕ್ಷದ ಎಲ್ಲಾ ಹಳೆಯ ಮತ್ತು ಹೊಸ ನಾಯಕರೊಂದಿಗೆ ಒಂದಿಲ್ಲೊಂದು ಸಭೆ ನಡೆಸುತ್ತಿದ್ದು, ತಳಮಟ್ಟದ ವಾಸ್ತವಗಳ ಬಗ್ಗೆ ಪ್ರತಿಕ್ರಿಯೆಯನ್ನೂ ಪಡೆಯುತ್ತಿದ್ದಾರೆ.
ಸಿಎಂ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿದ ನಂತರ ಮಾಜಿ ಸಂಸದರು ಮತ್ತು ಶಾಸಕರು ನಿತೀಶ್ ಕುಮಾರ್ ಅವರ ರಾಜಕೀಯ ಜೀವನವು ಇಷ್ಟು ವರ್ಷಗಳ ಕಾಲ ಸ್ವಚ್ಛವಾಗಿದೆ ಮತ್ತು ವಿರೋಧ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲು ಸಂಪೂರ್ಣ ಅರ್ಹತೆ ಹೊಂದಿದ್ದಾರೆ ಎಂದು ಘೋಷಿಸಿದ್ದಾರೆ. "ಅವರು ವಿರೋಧ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲು ಅರ್ಹರು" ಎಂದು ಹೆಸರು ಹೇಳಲು ಇಚ್ಚಿಸದ ಹಿರಿಯ ಜೆಡಿಯು ನಾಯಕರೊಬ್ಬರು ಹೇಳಿದ್ದಾರೆ.

ಆದರೆ ನಿತೀಶ್ ಕುಮಾರ್ ಅವರು ತಾವು ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ಇಲ್ಲ ಎಂದು ಪದೇ ಪದೇ ಹೇಳುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ಮಾತ್ರ ನನಗೆ ಬೇಕಾಗಿರುವುದು ಎಂದಿದ್ದಾರೆ. ಆದರೂ, ಕಳೆದ ತಿಂಗಳು ಜೆಡಿಯು ಸಂಸದರು, ಶಾಸಕರು, ಎಂಎಲ್‌ಸಿಗಳು ಮತ್ತು ಸಚಿವರನ್ನು ಭೇಟಿ ಮಾಡಿದ್ದರು. ಬಳಿಕ ಪಕ್ಷದ ಮಾಜಿ ಸಂಸದರು, ಶಾಸಕರು, ಎಂಎಲ್‌ಸಿಗಳನ್ನು ಭೇಟಿ ಮಾಡಿ ಸಮಸ್ಯೆಗಳ ಕುರಿತು ಪ್ರತಿಕ್ರಿಯೆ ಪಡೆದಿದ್ದಾರೆ. ಸದ್ಯದಲ್ಲೇ ನಿತೀಶ್ ಜಿಲ್ಲಾಧ್ಯಕ್ಷರ ಜತೆ ಸಭೆ ನಡೆಸಬಹುದು ಎಂದು ಹೇಳಲಾಗುತ್ತಿದೆ.
ಇತ್ತ, ಬೆಂಗಳೂರಿನಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ ಬಗ್ಗೆ ಮಾತನಾಡಿದ್ದರು. "ಕಾಂಗ್ರೆಸ್ ಪಕ್ಷ ಅಧಿಕಾರವಾಗಲಿ, ಪ್ರಧಾನ ಮಂತ್ರಿ ಹುದ್ದೆಯ ಬಗ್ಗೆಯಾಗಲಿ ಯಾವುದೇ ಆಸಕ್ತಿ ಹೊಂದಿಲ್ಲ" ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಕಾಂಗ್ರೆಸ್‌ನಿಂದ ಯಾರೂ ಪ್ರಧಾನಿ ಅಭ್ಯರ್ಥಿ ಆಗಲ್ಲ ಎಂಬ ಸಂದೇಶ ನೀಡಿದ್ದರು.
ಹೀಗಾಗಿಯೇ ವಿಪಕ್ಷಗಳ ಮೈತ್ರಿಕೂಟದಿಂದ ಯಾರು ಪ್ರಧಾನಿ ಅಭ್ಯರ್ಥಿಯಾಗಬಹುದು ಎಂಬುದು ಇನ್ನು ನಿಗೂಢವಾಗಿದೆ. ಹೆಚ್ಚಾಗಿ ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಹೆಸರು ಮಾತ್ರ ಕೇಳಿಬರುತ್ತಿದೆ. ಅವರು ನಾನು ಪಿಎಂ ಹುದ್ದೆಯ ಸ್ಪರ್ಧೆಯಲ್ಲಿಲ್ಲ ಎಂದು ಹೇಳುತ್ತಿದ್ದರೂ ಕೂಡ ಅವರಿಗೆ ಆ ಬಗ್ಗೆ ಆಸಕ್ತಿಯಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಮುಂಬೈನಲ್ಲಿ ನಡೆಯಲಿರುವ ಮೂರನೇ ಸುತ್ತಿನ ವಿಪಕ್ಷಗಳ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಬಹುದು.











Click it and Unblock the Notifications