Jantar Mantar Protest 2.0: ದೆಹಲಿಯಲ್ಲಿ 40,000 ಪೊಲೀಸರ ಸರ್ಪಗಾವಲು, ಮೆಟ್ರೋ ಹಾಗೂ ಇಂಟರ್ನೆಟ್ ಸ್ಥಗಿತ
ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು (ಅಕ್ಟೋಬರ್ 10, ಶನಿವಾರ) ಹಮ್ಮಿಕೊಳ್ಳಲಾಗಿರುವ ಬೃಹತ್ ಜಂತರ್ ಮಂತರ್ 2.0 ಪ್ರತಿಭಟನೆಯ ಹಿನ್ನೆಲೆಯಲ್ಲಿ ಇಡೀ ನಗರ ಅಕ್ಷರಶಃ ಪೊಲೀಸ್ ಕೋಟೆಯಂತಾಗಿದೆ.
ಹೌದು, ಚುನಾವಣಾ ಆಯೋಗದ ಮತದಾರರ ಪಟ್ಟಿ ಅಕ್ರಮಗಳನ್ನು ಖಂಡಿಸಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ಕರೆ ನೀಡಿರುವ ಈ ಪ್ರತಿಭಟನೆಯನ್ನು ಹತ್ತಿಕ್ಕಲು ದೆಹಲಿ ಪೊಲೀಸರು ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಜಂಟಿಯಾಗಿ ಕಠಿಣ ಭದ್ರತಾ ಕ್ರಮಗಳನ್ನ ಕೈಗೊಂಡಿವೆ.

40,000ಕ್ಕೂ ಅಧಿಕ ಭದ್ರತಾ ಸಿಬ್ಬಂದಿ ನಿಯೋಜನೆ
ಪ್ರತಿಭಟನಾಕಾರರು ಜಂತರ್ ಮಂತರ್ ತಲುಪುವುದನ್ನ ತಡೆಯಲು ಸುಮಾರು 40,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನ ರಾಜಧಾನಿಯಾದ್ಯಂತ ಜಮಾವಣೆ ಮಾಡಲಾಗಿದೆ. ಇದರಲ್ಲಿ 15,000ಕ್ಕೂ ಅಧಿಕ ದೆಹಲಿ ಪೊಲೀಸ್ ಸಿಬ್ಬಂದಿ ಹಾಗೂ ಸುಮಾರು 26,000 ಕೇಂದ್ರ ಅರೆಸೇನಾ ಪಡೆಗಳ ಸಿಬ್ಬಂದಿ ಕರ್ತವ್ಯದಲ್ಲಿದ್ದಾರೆ.
ನವದೆಹಲಿ ಜಿಲ್ಲೆಯನ್ನ ಒಟ್ಟು 20 ಭದ್ರತಾ ವಲಯಗಳನ್ನಾಗಿ ವಿಂಗಡಿಸಲಾಗಿದ್ದು, ಪ್ರತಿ ವಲಯಕ್ಕೂ ಒಬ್ಬ ಉಪ ಪೊಲೀಸ್ ಆಯುಕ್ತರ (DCP) ನೇತೃತ್ವದಲ್ಲಿ ಕಣ್ಗಾವಲು ಇರಿಸಲಾಗಿದೆ. ಪ್ರತಿಭಟನಾಕಾರರು ಪ್ರವೇಶಿಸಬಹುದಾದ ಪ್ರಮುಖ 37 ಸ್ಥಳಗಳಲ್ಲಿ ದ್ವಿಪದರದ ಬ್ಯಾರಿಕೇಡ್‌ಗಳನ್ನ ಅಳವಡಿಸಲಾಗಿದೆ.
ಮಹಿಳಾ ಪ್ರತಿಭಟನಾಕಾರರನ್ನ ನಿಯಂತ್ರಿಸಲು ವಿಶೇಷ ತರಬೇತಿ ಪಡೆದ ಮಹಿಳಾ ಪಡೆಗಳನ್ನು ನಿಯೋಜಿಸಲಾಗಿದ್ದು, ಹರಿಯಾಣ ಮತ್ತು ಉತ್ತರ ಪ್ರದೇಶದಿಂದಲೂ ಹೆಚ್ಚುವರಿ ಪೊಲೀಸರನ್ನ ಕರೆಸಿಕೊಳ್ಳಲಾಗಿದೆ.
ದೆಹಲಿ ಮೆಟ್ರೋ ಬಂದ್ ಮತ್ತು ಇಂಟರ್ನೆಟ್ ಸೇವೆ ಸ್ಥಗಿತ
ಭದ್ರತಾ ದೃಷ್ಟಿಯಿಂದ ಸಾರಿಗೆ ಹಾಗೂ ಸಂವಹನ ಜಾಲಗಳ ಮೇಲೆ ತೀವ್ರ ನಿರ್ಬಂಧ ವಿಧಿಸಲಾಗಿದೆ. ದೆಹಲಿ ಮೆಟ್ರೋ ರೈಲು ನಿಗಮವು ಮಧ್ಯ ದೆಹಲಿ ಮಾರ್ಗದ ಬರೋಬ್ಬರಿ 45 ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಸಾರ್ವಜನಿಕರ ಪ್ರವೇಶ ಮತ್ತು ನಿರ್ಗಮನವನ್ನ ತಾತ್ಕಾಲಿಕವಾಗಿ ರದ್ದುಗೊಳಿಸಿದೆ.
ಪ್ರತಿಭಟನಾ ಸ್ಥಳದ ಸುತ್ತಮುತ್ತ ಅಂದರೆ ಜನ್‌ಪಥ್-ಕರ್ತವ್ಯ ಪಥ ಜಂಕ್ಷನ್‌ನ 4 ಕಿ.ಮೀ ವ್ಯಾಪ್ತಿಯಲ್ಲಿ ದೆಹಲಿ ಪೊಲೀಸರು ಶುಕ್ರವಾರ (ಅ. 9) ರಾತ್ರಿ 10 ಗಂಟೆಯಿಂದ 24 ಗಂಟೆಗಳ ಕಾಲ ಇಂಟರ್ನೆಟ್ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದಾರೆ. ಏರ್‌ಟೆಲ್, ಜಿಯೋ, ವೊಡಾಫೋನ್ ಐಡಿಯಾ ಹಾಗೂ ಬಿಎಸ್‌ಎನ್‌ಎಲ್/ಎಂಟಿಎನ್‌ಎಲ್ ನೆಟ್‌ವರ್ಕ್‌ಗಳಿಗೆ ಈ ಆದೇಶ ಅನ್ವಯವಾಗಲಿದೆ.
ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳಿಗೆ ನಿರ್ಬಂಧ
ಇದರ ಬೆನ್ನಲ್ಲೇ, ಮಾಹಿತಿ ತಂತ್ರಜ್ಞಾನ (IT) ಸಚಿವಾಲಯವು ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಸಾರ್ವಜನಿಕ ಸುವ್ಯವಸ್ಥೆ ಹದಗೆಡಿಸುವ ಅಥವಾ ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಹ ಕಂಟೆಂಟ್‌ಗಳನ್ನು ತಕ್ಷಣವೇ ತೆಗೆದುಹಾಕುವಂತೆ ನಿರ್ದೇಶಿಸಿದೆ. ವಿಶೇಷವಾಗಿ ಮೆಟಾ ಒಡೆತನದ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಸರ್ಕಾರದ ವಿರುದ್ಧದ ಪೋಸ್ಟ್‌ಗಳ ಮೇಲೆ ತೀವ್ರ ನಿಗಾ ಇಡಲಾಗಿದ್ದು, ಐಟಿ ಕಾಯ್ದೆ 2000ರ ಸೆಕ್ಷನ್ 79(3)(b) ಅಡಿಯಲ್ಲಿ ನೋಟಿಸ್ ನೀಡಲಾಗುತ್ತಿದೆ.
ಕಳೆದ ಫೆಬ್ರವರಿಯಿಂದ ಇಂತಹ ಪೋಸ್ಟ್‌ಗಳನ್ನ ಡಿಲೀಟ್ ಮಾಡುವ ಕಾಲಮಿತಿಯನ್ನು ಒಂದು ದಿನದ ಬದಲಾಗಿ ಕೇವಲ 1 ರಿಂದ 3 ಗಂಟೆಗಳಿಗೆ ಇಳಿಸಲಾಗಿದ್ದು, ಸೆನ್ಸಾರ್‌ಶಿಪ್ ಅನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ದೆಹಲಿ ಟ್ರಾಫಿಕ್ ನಿರ್ಬಂಧ
ಮಧ್ಯ ದೆಹಲಿಯ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ವ್ಯಾಪಕ ನಿರ್ಬಂಧ ವಿಧಿಸಲಾಗಿದ್ದು, ಸುಮಾರು 30 ಜಂಕ್ಷನ್‌ಗಳಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ಕನ್ನಾಟ್ ಪ್ಲೇಸ್, ಸಂಸದ್ ಮಾರ್ಗ, ಅಶೋಕ ರಸ್ತೆ, ಮಂಡಿ ಹೌಸ್ ಮತ್ತು ಧೌಲಾ ಕುವಾನ್ ಸೇರಿದಂತೆ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ರಸ್ತೆ ಟ್ರಾಫಿಕ್ ತಪ್ಪಿಸುವ ಸಲುವಾಗಿ, ನವದೆಹಲಿ ಮತ್ತು ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಗಳಿಗೆ ಶನಿವಾರ ಮಧ್ಯಾಹ್ನದವರೆಗೆ ತಲುಪಬೇಕಿದ್ದ ಹಲವು ಎಕ್ಸ್‌ಪ್ರೆಸ್ ರೈಲುಗಳನ್ನ ರದ್ದುಗೊಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಹೋಟೆಲ್‌ಗಳು, ಪಿಜಿಗಳು ಹಾಗೂ ಹಾಸ್ಟೆಲ್‌ಗಳಲ್ಲಿ ಪೊಲೀಸರು ತಪಾಸಣೆ ತೀವ್ರಗೊಳಿಸಿದ್ದಾರೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ 163 ಜಾರಿ
ನವದೆಹಲಿ ಜಿಲ್ಲೆಯಾದ್ಯಂತ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 163 ಅಡಿಯಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದ್ದು, ನಾಲ್ಕಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಜಂತರ್ ಮಂತರ್ ಪ್ರದೇಶವನ್ನ ಸಂಪೂರ್ಣವಾಗಿ ಸೀಲ್ ಮಾಡಲಾಗಿದ್ದು, ಮಾಧ್ಯಮ ಪ್ರತಿನಿಧಿಗಳಿಗೂ ನಿರ್ಬಂಧ ಹೇರಲಾಗಿದೆ.
ಈ ಹಿಂದೆ ಜುಲೈ ತಿಂಗಳಲ್ಲಿ ನಡೆದ ಪ್ರತಿಭಟನೆಯಲ್ಲಿ 200ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದ ಘಟನೆಯನ್ನ ಉಲ್ಲೇಖಿಸಿರುವ ಪೊಲೀಸ್ ಇಲಾಖೆ, ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಈ ಕಠಿಣ ಕ್ರಮಗಳು ಅನಿವಾರ್ಯ ಎಂದು ಸ್ಪಷ್ಟಪಡಿಸಿದೆ.


Click it and Unblock the Notifications
