ಎಲ್ಲಾ ಔಷಧ ಅಂಗಡಿಗಳಲ್ಲೂ ಜನೌಷಧ ವಿಭಾಗ ಕಡ್ಡಾಯಗೊಳಿಸಿದ ಗೋವಾ ಸರ್ಕಾರ
ಆರೋಗ್ಯ ಇಲಾಖೆಯು 48 ಗಂಟೆಗಳಲ್ಲಿ ಈ ಬಗ್ಗೆ ಸುತ್ತೋಲೆ ಹೊರಡಿಸಲಿದೆ ಎಂದು ಜನೌಷಧಿ ದಿನದ ಸಂದರ್ಭದಲ್ಲಿ ಸಚಿವರು ತಿಳಿಸಿದ್ದಾರೆ
ಪಣಜಿ, ಮಾರ್ಚ್ 06: ಸಮಾಜದ ಪ್ರತಿಯೊಂದು ವರ್ಗಕ್ಕೂ ಉತ್ತಮ ಗುಣಮಟ್ಟದ ಜನೆರಿಕ್ ಔಷಧಗಳು ಲಭ್ಯವಾಗುವಂತೆ ನೋಡಿಕೊಳ್ಳಲು ಗೋವಾ ಸರ್ಕಾರವು ರಾಜ್ಯದ ಎಲ್ಲಾ ಔಷಧಾಲಯಗಳಲ್ಲಿ ಜನೌಷಧ ಕೌಂಟರ್‌ಗಳನ್ನು ಕಡ್ಡಾಯಗೊಳಿಸಲಿದೆ ಎಂದು ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಸೋಮವಾರ ಹೇಳಿದ್ದಾರೆ.
ಆರೋಗ್ಯ ಇಲಾಖೆಯು 48 ಗಂಟೆಗಳಲ್ಲಿ ಈ ಬಗ್ಗೆ ಸುತ್ತೋಲೆ ಹೊರಡಿಸಲಿದೆ ಎಂದು ಜನೌಷಧಿ ದಿನದ ಸಂದರ್ಭದಲ್ಲಿ ಸಚಿವರು ತಿಳಿಸಿದ್ದಾರೆ. ಆರೋಗ್ಯ ಇಲಾಖೆಯ ಸುತ್ತೋಲೆಯನ್ನು ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಗೋವಾದ ನಿರ್ದೇಶಕರು ಜಾರಿಗೊಳಿಸುತ್ತಾರೆ. ಇದರ ಮೇಲ್ವಿಚಾರಣೆ ಕೂಡ ಅವರೇ ಮಾಡುತ್ತಾರೆ ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ತಿಳಿಸಿದ್ದಾರೆ.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೂಡ ಯಾವುದೇ ಹಿಂಜರಿಕೆಯಿಲ್ಲದೆ ರೋಗಿಗಳಿಗೆ ಸಾಮಾನ್ಯ ಜನರಿಗೆ ಕೈಗೆಟುಕುವ ಜೆನೆರಿಕ್ ಔಷಧಿಗಳನ್ನು ಶಿಫಾರಸು ಮಾಡಲು ವೈದ್ಯರಿಗೆ ಸೂಚಿಸಿದ್ದಾರೆ.
'ಜನೌಷಧಿ ದಿನ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 'ಜನೆರಿಕ್ ಔಷಧಿಗಳಿಗೂ ಬ್ರ್ಯಾಂಡೆಡ್ ಕಂಪೆನಿಗಳ ಔಷಧಿಗಳಿಗೂ ಯಾವುದೇ ವ್ಯತ್ಯಾಸವಿಲ್ಲ, ಆದರೆ ಅವುಗಳ ದರಗಳಲ್ಲಿ ಶೇ.50 ರಿಂದ 90 ರಷ್ಟು ವ್ಯತ್ಯಾಸವಿದೆ. ಕೇಂದ್ರ ಸರಕಾರ ಕೈಗೆಟಕುವ ದರದಲ್ಲಿ ಈ ಔಷಧಿಗಳನ್ನು ನೀಡಲು ಉದ್ದೇಶಿಸಿದ್ದು, ವೈದ್ಯರು ಯಾವುದೇ ಮುಲಾಜಿಲ್ಲದೆ ಈ ಔಷಧಿಗಳನ್ನು ರೋಗಿಗಳಿಗೆ ಬರೆದುಕೊಡಬೇಕು" ಎಂದು ಸೂಚಿಸಿದ್ದಾರೆ.
"ಜನರಿಕ್ ಔಷಧಗಳು ಅಗ್ಗ ಮತ್ತು ಕೈಗೆಟಕುವ ದರದಲ್ಲಿ ದೊರೆಯುವುದರಿಂದ ಅವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಸರ್ಕಾರವು ಪ್ರತಿಯೊಬ್ಬ ನಾಗರಿಕರಿಗೂ ಕೈಗೆಟುಕುವ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಉದ್ದೇಶಿಸಿದೆ. ಆದ್ದರಿಂದ ನಮ್ಮ ಸರ್ಕಾರ ಪ್ರತಿ ಫಾರ್ಮಸಿಯಲ್ಲಿ ಜನೆರಿಕ್ ಔಷಧಿಗಳನ್ನು ಲಭ್ಯವಾಗುವಂತೆ ಮಾಡುತ್ತದೆ. ಆಯಾ ಔಷಧೀಯ ಘಟಕಗಳಲ್ಲಿ ವಿಶೇಷ ಜನೌಷಧಿ ಕೌಂಟರ್‌ಗಳನ್ನು ತೆರೆಯುವಂತೆ ಸೂಚಿಸುತ್ತದೆ" ಎಂದು ಮಾಹಿತಿ ನೀಡಿದ್ದಾರೆ.

"ಪ್ರಧಾನಮಂತ್ರಿಯವರ 'ಎಲ್ಲರಿಗೂ ಆರೋಗ್ಯ' ಯೋಜನೆಯ ದೂರದೃಷ್ಟಿ ಮತ್ತು ಧ್ಯೇಯಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ. ರಾಜ್ಯದ ಪ್ರತಿಯೊಬ್ಬರಿಗೂ ಕೈಗೆಟುಕುವ ವೈದ್ಯಕೀಯ ಸೇವೆಗಳನ್ನು ವಿಸ್ತರಿಸಲು ಪ್ರಯತ್ನಿಸಲಾಗುವುದು. ಪ್ರಧಾನಿ ಜನೌಷದಿ ಪರಿಯೋಜನಾ ಸಾಮಾನ್ಯ ಜನರಿಗೆ ಅವರ ವ್ಯಾಪ್ತಿಯೊಳಗೆ ಅಗ್ಗದ ಮತ್ತು ಕೈಗೆಟುಕುವ ಜನೆರಿಕ್ ಔಷಧಿಗಳನ್ನು ಒದಗಿಸುವ ಮೂಲಕ ತಲುಪುತ್ತದೆ" ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದ್ದಾರೆ.
ಸರ್ಕಾರದ ಈ ಕ್ರಮದಿಂದ ಸಮಾಜದ ಪ್ರತಿಯೊಂದು ವರ್ಗಕ್ಕೂ ಉತ್ತಮ ಗುಣಮಟ್ಟದ ಜನೆರಿಕ್ ಔಷಧಗಳು ಲಭ್ಯವಾಗುತ್ತದೆ. ಮತ್ತು ರಾಜ್ಯದಾದ್ಯಂತ ಔಷಧಾಲಯಗಳು ಇದನ್ನು ಪಾಲಿಸಬೇಕಾಗುತ್ತದೆ ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.












Click it and Unblock the Notifications