ಜಮ್ಮು- ಕಾಶ್ಮೀರ: ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕ ಹತ್ಯೆ- ಕಾರ್ಯಾಚರಣೆ ಮುಂದುವರಿಸಿದ ಭದ್ರತಾ ಪಡೆಗಳು
ಶ್ರೀನಗರ, ಸೆಪ್ಟೆಂಬರ್ 04: ಜಮ್ಮು- ಕಾಶ್ಮೀರದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಭಯೋತ್ಪಾದಕನನ್ನು ಹತ್ಯೆಗೈಯಲಾಗಿದೆ. ಈ ಘಟನೆಯು ಚಸ್ಸಾನಾದ ತುಲಿ ಪ್ರದೇಶದ ಗಾಲಿ ಸೊಹಾಬ್‌ನಲ್ಲಿ ನಡೆದಿದೆ. ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಅಡಗಿಕೊಂಡಿರುವ ಇನ್ನೊಬ್ಬ ಉಗ್ರನಿಗಾಗಿ ಶೋಧ ನಡೆಸುತ್ತಿವೆ.
ಭಯೋತ್ಪಾದಕರು ಅಡುಗುತಾಣದಲ್ಲಿರುವುದು ಖಚಿತಪಡಿಸಿಕೊಂಡ ನಂತರವೇ ಕಾರ್ಯಾಚರಣೆಯನ್ನು ಆರಂಭಿಸಲಾಯಿತು ಎಂದು ಎಡಿಜಿಪಿ ಮುಖೇಶ್ ಸಿಂಗ್ ಟ್ವೀಟ್ ಮಾಡಿದ್ದಾರೆ.

'ಚಸ್ಸಾನಾದ ತುಲಿ ಪ್ರದೇಶದ ಗಾಲಿ ಸೊಹಾಬ್‌ನಲ್ಲಿ ಎನ್‌ಕೌಂಟರ್ ನಡೆಯುತ್ತಿದೆ. ಪೊಲೀಸ್ ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ' ಎಂದು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಚಸ್ಸಾನಾದ ತುಲಿ ಪ್ರದೇಶದ ಗಲಿ ಸೊಹಾಬ್‌ನಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಸುಳಿವು ಸಿಕ್ಕಿತು. ಆ ನಂತರ ಎನ್‌ಕೌಂಟರ್ ಪ್ರಾರಂಭವಾಯಿತು. ಪೊಲೀಸರು ಮತ್ತು ಸೇನೆಯನ್ನು ಒಳಗೊಂಡ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದಿವೆ. ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಇಲ್ಲಿಯವರೆಗೆ, ಎನ್‌ಕೌಂಟರ್‌ನಲ್ಲಿ ಒಬ್ಬ ಭಯೋತ್ಪಾದಕನನ್ನು ಕೊಲ್ಲಲಾಗಿದೆ. ಉಗ್ರರ ಗುರುತು ಇನ್ನೂ ಪತ್ತೆಯಾಗಿಲ್ಲ. ಗುಂಡಿನ ಚಕಮಕಿಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ.

ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು, ಉಳಿದ ಉಗ್ರರನ್ನು ಹೊಡೆದುರುಳಿಸಲು ಭದ್ರತಾ ಪಡೆಗಳು ಪ್ರಯತ್ನಿಸುತ್ತಿವೆ.
ರಿಯಾಸಿ ಜಿಲ್ಲೆ ಜಮ್ಮು ಮತ್ತು ಕಾಶ್ಮೀರದ ಜಮ್ಮು ಪ್ರದೇಶದಲ್ಲಿದೆ. ಇದು ವೈಷ್ಣೋ ದೇವಿ, ಶಿವ ಖೋರಿ, ಬಾಬಾ ಧನ್ಸಾರ್ ಮತ್ತು ಸಿಯಾದ್ ಬಾಬಾ ಜಲಪಾತಗಳಂತಹ ಹಿಂದೂ ಯಾತ್ರಾ ಸ್ಥಳಗಳಿಗೆ ಹೆಸರುವಾಸಿಯಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಎನ್‌ಕೌಂಟರ್‌ಗಳ ಸರಣಿಯಲ್ಲಿ ರಿಯಾಸಿಯಲ್ಲಿ ನಡೆದ ಎನ್‌ಕೌಂಟರ್ ಇತ್ತೀಚಿನದು. ಇತ್ತೀಚಿನ ತಿಂಗಳುಗಳಲ್ಲಿ, ಈ ಪ್ರದೇಶದಲ್ಲಿ ಅಂತಹ ಎನ್‌ಕೌಂಟರ್‌ಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ.












Click it and Unblock the Notifications