ಜಮ್ಮು ಕಾಶ್ಮೀರದ ಹಳ್ಳಿಯಲ್ಲಿ ಬೆಂಕಿಗೆ ಆಹುತಿಯಾದ 20 ಮನೆಗಳು
ನವದೆಹಲಿ, ಅ. 28: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಚಾಗ್ ಗ್ರಾಮದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 20 ಮನೆಗಳು ಬೆಂಕಿಗೆ ಆಹುತಿಯಾಗಿವೆ. ಘಟನೆಯಲ್ಲಿ ಯಾವುದೇ ಜೀವಹಾನಿ ಅಥವಾ ಜಾನುವಾರುಗಳಿಗೆ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
'ಬೆಂಕಿಗೆ ಅವಘಡಕ್ಕೆ ನಿಖರವಾದ ಕಾರಣ ಇನ್ನೂ ಕಂಡುಹಿಡಿಯಲಾಗಿಲ್ಲ. ವಿದ್ಯುತ್ ತಂತಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದೆಯೇ ಅಥವಾ ಇನ್ನೇನಾದರೂ ಎಂಬುದು ಘಟಿಸಿದೆಯೇ ಎಂಬುದು ತನಿಖೆಯ ವೇಳೆ ತಿಳಿಯಲಿದೆ" ಎಂದು ಕಿಶ್ತ್ವಾರ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶಫ್ಕತ್ ಭಟ್ ಹೇಳಿದರು.
ಚಾಗ್ ಗ್ರಾಮಕ್ಕೆ ವಾಹನ ಓಡಾಡುವ ರಸ್ತೆಯೇ ಒಂಬತ್ತು ಕಿಮೀ ದೂರದಲ್ಲಿದೆ. "ಗ್ರಾಮವನ್ನು ತಲುಪಲು ಮೂರು ಗಂಟೆಗಳ ಟ್ರಕ್ಕಿಂಗ್ ಮಾಡಬೇಕಾಗುತ್ತದೆ. ಹಾಗಾಗಿ ಗ್ರಾಮಕ್ಕೆ ಅಗ್ನಿಶಾಮಕ ವಾಹನ ಕಳುಹಿಸಲು ಸಾಧ್ಯವಾಗಿಲ್ಲ. ಅಗ್ನಿಶಾಮಕ ಕಾರ್ಯಾಚರಣೆಗಾಗಿ ಪೊಲೀಸ್ ತಂಡಗಳು ಗ್ರಾಮಕ್ಕೆ ಬಂದಿವೆ. ಅಕ್ಕಪಕ್ಕದ ಪ್ರದೇಶಗಳ ಸ್ಥಳೀಯರು ಸಹ ಕಾರ್ಯಾಚರಣೆಗೆ ಸಾಥ್ ನೀಡಿದ್ದಾರೆ. ಆದರೆ, ಅಷ್ಟರಲ್ಲಿ 20 ಮನೆಗಳು ಸುಟ್ಟು ಹೋಗಿದ್ದವು" ಎಂದು ಮಾಹಿತಿ ನೀಡಿದರು.

ಜಮ್ಮು ಮತ್ತು ಕಾಶ್ಮೀರದ ಪರ್ವತ ಪ್ರದೇಶಗಳಲ್ಲಿನ ಮನೆಗಳು ಸಾಮಾನ್ಯವಾಗಿ ಮರದಿಂದ ಕಟ್ಟಲ್ಪಟ್ಟಿವೆ. ಅಕ್ಟೋಬರ್ 2016 ರಲ್ಲಿ ಕಿಶ್ತ್ವಾರ್‌ನ ಸುಖ್ನಾಯ್ ಗ್ರಾಮದಲ್ಲಿ ಸಂಭವಿಸಿದ ಬೆಂಕಿಯಲ್ಲಿ 400 ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿದವು. ಈ ವೇಳೆ 80 ಮನೆಗಳು ಮತ್ತು ಇತರ ಕಟ್ಟಡಗಳು ಹಾನಿಗೊಳಗಾಗಾಗಿದ್ದವು.
ಆಗ ಮುಖ್ಯಮಂತ್ರಿಯಾಗಿದ್ದ ಮೆಹಬೂಬಾ ಮುಫ್ತಿ ಅವರು ಸುಖನಾಯ್‌ಗೆ ಭೇಟಿ ನೀಡಿ ಪರಿಹಾರ ಪ್ಯಾಕೇಜ್ ಘೋಷಿಸಿದ್ದರು.












Click it and Unblock the Notifications