ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಫೋಟ: ತುರ್ತು ಸರ್ವ ಪಕ್ಷಗಳ ಸಭೆಗೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ
ದೇಶದಲ್ಲಿ ಒಂದೇ ವಾರದ ಅವಧಿಯಲ್ಲಿ ಎರಡು ಪ್ರದೇಶಗಳಲ್ಲಿ ಸ್ಫೋಟ ಸಂಭವಿಸಿದ್ದು, ದೇಶದಾದ್ಯಂತ ಆತಂಕದ ವಾತವರಣ ನಿರ್ಮಾಣವಾಗಿದೆ. ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಠಾಣೆಯಲ್ಲಿ ಇದೀಗ ಸ್ಫೋಟ ಸಂಭವಿಸಿದೆ. ನೌಗಮ್ ಸ್ಫೋಟದ ಕುರಿತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ನೌಗಮ್ ಪೊಲೀಸ್ ಠಾಣೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ನಳಿನ್ ಪ್ರಭಾತ್ ದೃಢಪಡಿಸಿದ್ದಾರೆ. ಸ್ಫೋಟದಲ್ಲಿ ಗಾಯಗೊಂಡವರಲ್ಲಿ ಮೂವರು ನಾಗರಿಕರೂ ಸೇರಿದ್ದಾರೆ ಎಂದು ಹೇಳಿದ್ದಾರೆ. ಇದೀಗ ಬೆಂಗಳೂರು ಸೇರಿದಂತೆ ಪ್ರಮುಖ ದೇಶದ ಪ್ರಮುಖ ನಗರಗಳಲ್ಲಿ ಮತ್ತೆ ಹೈ ಅಲರ್ಟ್ ಘೋಷಿಸುವ ಸಾಧ್ಯತೆ ಇದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಜಮ್ಮು ಮತ್ತು ಕಾಶ್ಮೀರದ ನೌಗಮ್‌ನ ಪೊಲೀಸ್ ಠಾಣೆಯಲ್ಲಿ ನಡೆದ ಸ್ಫೋಟದಲ್ಲಿ 9 ಅಮೂಲ್ಯ ಜೀವಗಳನ್ನು ನಾವು ಕಳೆದುಕೊಂಡಿದ್ದೇವೆ. 24 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ತೀವ್ರ ದುಃಖ ಮತ್ತು ಬೇಸರವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು. ಗಾಯಾಳುಗಳಿಗೆ ತ್ವರಿತ ವೈದ್ಯಕೀಯ ಚಿಕಿತ್ಸೆ ನೀಡಬೇಕು ಮತ್ತು ಮೃತಪಟ್ಟವರಿಗೆ ಪರಿಹಾರವನ್ನು ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ದೆಹಲಿಯ ಕೆಂಪು ಕೋಟೆ ಬಳಿ ನಡೆದ ಹೇಡಿತನದ ಕಾರು ಸ್ಫೋಟ ಭಯೋತ್ಪಾದಕ ದಾಳಿಯ ಕೆಲವೇ ದಿನಗಳ ನಂತರ ಈ ಘಟನೆ ಸಂಭವಿಸಿದೆ. ಇದು ಗುಪ್ತಚರ ಮತ್ತು ಭಯೋತ್ಪಾದನಾ ವಿರೋಧಿ ಕಾರ್ಯವಿಧಾನಗಳನ್ನು ಬಲಪಡಿಸಲು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಭಯೋತ್ಪಾದನೆಯ ಪಿಡುಗಿನ ವಿರುದ್ಧ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಾಷ್ಟ್ರದೊಂದಿಗೆ ಒಗ್ಗಟ್ಟಾಗಿ ನಿಂತಿದೆ.
ಇತ್ತೀಚಿನ ಕೆಂಪು ಕೋಟೆ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಬಾಹ್ಯ ಶಕ್ತಿಗಳ ಕೃತ್ಯ ಹಾಗೂ ಬೆಂಬಲ ಪಡೆಯುತ್ತಿರುವ ಭಯೋತ್ಪಾದಕರ ಸಂಘಟನೆಯ ಬೆದರಿಕೆಯನ್ನು ಚರ್ಚಿಸಲು ತುರ್ತು ಸರ್ವಪಕ್ಷ ಸಭೆಯನ್ನು ಕರೆಯುವ ಅವಶ್ಯಕತೆಯಿದೆ ಎಂದು ಅವರು ಹೇಳಿದ್ದಾರೆ.
ಇನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು, ಜಮ್ಮು ಮತ್ತು ಕಾಶ್ಮೀರದ ನೌಗಮ್ ಪೊಲೀಸ್ ಠಾಣೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಹಲವು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು ಮತ್ತು ಇತರ ಅನೇಕರು ಗಾಯಗೊಂಡಿರುವುದು ತೀವ್ರ ನೋವಿನ ಸಂಗತಿ ಮತ್ತು ಕಳವಳಕಾರಿಯಾಗಿದೆ. ಕೆಂಪು ಕೋಟೆ ದಾಳಿಗೆ ಸಂಬಂಧಿಸಿದ ಸ್ಫೋಟಕಗಳ ಪರೀಕ್ಷೆಯ ಸಮಯದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಹುತಾತ್ಮರಿಗೆ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.












Click it and Unblock the Notifications