ನಿರ್ಣಾಯಕ ಚುನಾವಣೆಯಲ್ಲಿ ಮತ ಹಾಕಿ: ಜಮ್ಮು & ಕಾಶ್ಮೀರದ ಜನರಿಗೆ ಖರ್ಗೆ ಕರೆ
ಶ್ರೀನಗರ, ಸೆಪ್ಟೆಂಬರ್ 18: ಬುಧವಾರ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ 24 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. 90 ವಿಧಾನಸಭಾ ಕ್ಷೇತ್ರಗಳ ಮತದಾನ ಅಕ್ಟೋಬರ್ 1ಕ್ಕೆ ಮುಕ್ತಾಯವಾಗಲಿದ್ದು, ಅಕ್ಟೋಬರ್ 8ರಂದು ಮತ ಎಣಿಕೆ ನಡೆಯಲಿದೆ. ಮೊದಲ ಹಂತದ ಮತದಾನಕ್ಕೆ ಜನರು ಉತ್ಸಾಹ ತೋರಿಸಿದ್ದಾರೆ. ಮತಗಟ್ಟೆಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ವಿವಿಧ ಪಕ್ಷದ ನಾಯಕರು ಜನರು ಮತದಾನ ಮಾಡುವಂತೆ ಕರೆ ನೀಡಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, "ಜಮ್ಮು ಮತ್ತು ಕಾಶ್ಮೀರದ ಜನರು ನಿರ್ಣಾಯಕ ಚುನಾವಣೆಯಲ್ಲಿ ಮತದಾನ ಮಾಡಬೇಕು" ಎಂದು ಕರೆ ನೀಡಿದ್ದಾರೆ. ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಿದ್ದ ವಿಶೇಷ ಸ್ಥಾನಮಾನವನ್ನು 2019ರ ಆಗಸ್ಟ್ 5ರಂದು ರದ್ದುಪಡಿಸಲಾಗಿತ್ತು. ಬಳಿಕ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಕಣಿವೆ ರಾಜ್ಯ ಸಾಕ್ಷಿಯಾಗಿದೆ.

ಬುಧವಾರ ಕಾಶ್ಮೀರ ವಿಭಾಗದ 16 ಮತ್ತು ಜಮ್ಮು ವಿಭಾಗದ 8 ಸೀಟುಗಳಲ್ಲಿ ಮತದಾನ ನಡೆಯುತ್ತಿದೆ. ಜನರು ಉತ್ಸಾಹದಿಂದಲೇ ಮತದಾನ ಮಾಡುತ್ತಿದ್ದು, ಬೆಳಗ್ಗೆ 9 ಗಂಟೆಯ ತನಕ ಶೇ 11.11ರಷ್ಟು ಮತದಾನವಾಗಿದೆ. ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ.
ಮಲ್ಲಿಕಾರ್ಜುನ ಖರ್ಗೆ, "ಜಮ್ಮು ಮತ್ತು ಕಾಶ್ಮೀರದ ಜನರು ತಮ್ಮ ಹಕ್ಕುಗಳ ಕಾಪಾಡಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭಿಸಲು ಜನರು ಹೆಚ್ಚಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕು" ಎಂದು ಮನವಿ ಮಾಡಿದ್ದಾರೆ.
"ಜಮ್ಮು ಮತ್ತು ಕಾಶ್ಮೀರದ 24 ಕ್ಷೇತ್ರಗಳಿಗೆ ಮತದಾನ ಆರಂಭವಾಗಿದೆ. ನಾವು ಎಲ್ಲರೂ ಸಂವಿಧಾನ ಬದ್ಧವಾಗಿ ನೀಡಿರುವ ಹಕ್ಕುಗಳನ್ನು ಜನರು ಚಲಾವಣೆ ಮಾಡಬೇಕು ಎಂದು ಆಗ್ರಹಿಸುತ್ತೇವೆ. ಪ್ರತಿಯೊಂದು ಮತವೂ ಸಹ ಶಾಂತಿ, ಸ್ಥಿರತೆ, ಅಭಿವೃದ್ಧಿ ಮತ್ತು ಆರ್ಥಿಕ ದೃಢತೆಗೆ ಸಹಕಾರಿಯಾಗಿದೆ" ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
"ನಾವು ಎಲ್ಲರಿಗೂ ಅದರಲ್ಲೂ ಪ್ರಮುಖವಾಗಿ ಮೊದಲ ಬಾರಿಗೆ ಮತದಾನ ಮಾಡುವ ಯುವ ಜನರಿಗೆ ಈ ನಿರ್ಣಾಯಕ ಚುನಾವಣೆಯಲ್ಲಿ ಬದಲಾವಣೆಗಾಗಿ ಮತದಾನ ಮಾಡುವಂತೆ ಕರೆ ನೀಡುತ್ತೇವೆ" ಎಂದು ಎಐಸಿಸಿ ಅಧ್ಯಕ್ಷರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಿದ್ದ ವಿಶೇಷ ಸ್ಥಾನಮಾನ ರದ್ದುಗೊಂಡು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆಯಾದ ಬಳಿಕ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಖರ್ಗೆ ತಮ್ಮ ಪೋಸ್ಟ್‌ನಲ್ಲಿ, "ಮೊದಲು ಬಾರಿಗೆ ರಾಜ್ಯ ಕೇಂದ್ರಾಡಳಿತ ಪ್ರದೇಶವಾದ ಬಳಿಕ ಮತದಾನ ನಡೆಯುತ್ತಿದೆ. ಜನರ ಧ್ವನಿಯನ್ನು ಮತದಾನದ ಮೂಲಕ ಹೇಳಿ. ಇದರಿಂದ ಜವಾಬ್ದಾರಿ ಅರಿಯಲು ಸಹಾಯಕವಾಗುತ್ತದೆ" ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ 24 ಕ್ಷೇತ್ರಗಳಲ್ಲಿ ಜನರು ಉತ್ಸಾಹದಿಂದಲೇ ಮತದಾನವನ್ನು ಮಾಡುತ್ತಿದ್ದಾರೆ. ಬೆಳಗ್ಗೆ 11 ಗಂಟೆಯ ತನಕ ಶೇ 26.72ರಷ್ಟು ಮತದಾನವಾಗಿದೆ. ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1ರಂದು ಇನ್ನೂ ಎರಡು ಹಂತದಲ್ಲಿ ಮತದಾನ ನಡೆಯಲಿದೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನ್ಯಾಷನಲ್ ಕಾನ್ಫರೆನ್ಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಸೀಟು ಹಂಚಿಕೆ ಮಾಡಿಕೊಂಡು ಪಕ್ಷಗಳು ಚುನಾವಣೆಯನ್ನು ಎದುರಿಸುತ್ತಿವೆ. ಚುನಾವಣಾ ಫಲಿತಾಂಶ ಅಕ್ಟೋಬರ್ 8ರಂದು ಘೋಷಣೆಯಾಗಲಿದೆ.












Click it and Unblock the Notifications