ಹಿಮಾಚಲ ಪ್ರದೇಶ ಚುನಾವಣೆ; ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ
ಶಿಮ್ಲಾ ಜೂನ್ 1: ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಎದ್ದಿದ್ದ ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ತೆರೆ ಎಳೆದಿದ್ದಾರೆ. ಹಾಲಿ ಸಿಎಂ ಜೈರಾಮ್ ಠಾಕೂರ್ ಅವರನ್ನೇ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದು ಅಧಿಕೃತಗೊಂಡಿದೆ.
ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಿಮ್ಲಾದ ರಿಡ್ಜ್ ಮೈದಾನದಲ್ಲಿ ಬುಧವಾರ ನಡೆದ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,"ಮುಖ್ಯಮಂತ್ರಿ ಜೈರಾಮ್ ಠಾಕೂರ್ ನನ್ನ ಆಪ್ತ ಸ್ನೇಹಿತ,'' ಎಂದು ಹೇಳಿದರು.
ವೇದಿಕೆಯಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಹಿಮಾಚಲ ಪ್ರದೇಶದ ನಗರಾಭಿವೃದ್ಧಿ ಸಚಿವ ಸುರೇಶ್ ಭರದ್ವಾಜ್ ಉಪಸ್ಥಿತರಿದ್ದರು. ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಮುಖ್ಯಮಂತ್ರಿ ಆಕಾಂಕ್ಷಿ ಎನ್ನಲಾಗಿತ್ತು. ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲೂ ಕೂಡ ಅನುರಾಗ್ ಠಾಕೂರ್ ಅವರ ಹೆಸರನ್ನು ಪ್ರಸ್ತಾಪಿಸಿಲ್ಲ.

ಅಭಿವೃದ್ಧಿ ಹೆಸರಿನಲ್ಲಿ ಮತಯಾಚನೆ
ಸಮಾವೇಶದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್, "ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯ ಆಧಾರದ ಮೇಲೆ ವಿಧಾನಸಭೆ ಚುನಾವಣೆಯನ್ನು ಎದುರಿಸಲಾಗುವುದು. ನರೇಂದ್ರ ಮೋದಿ ನಮ್ಮ ರಾಜ್ಯ ಸರಕಾರ ಕಳೆದ ನಾಲ್ಕು ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ನಮ್ಮ ಸರಕಾರದ ಅಭಿವೃದ್ಧಿ ಯೋಜನೆಗಳನ್ನು ಜನರ ಮುಂದಿಟ್ಟು ಮತ ಯಾಚಿಸಲಾಗುವುದು,'' ಎಂದು ಹೇಳಿದರು.

ಎಲ್ಲಾ ಉಹಾಪೋಹಗಳಿಗೆ ತೆರೆ
ಕೊನೇ ಕ್ಷಣದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಜೆಪಿ ಬದಲಿಸಲಿದೆ ಎಂಬ ಉಹಾಪೋಹಗಳು ಎದ್ದಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಎಲ್ಲಾ ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಇನ್ನೊಂದೆಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಕೂಡ ಜೈರಾಮ್ ಠಾಕೂರ್‌ರನ್ನೇ ಮುಖ್ಯಮಂತ್ರಿಯಾಗಿ ಮುಂದಿನ ಅವಧಿಗೂ ಮುಂದುವರಿಸಲು ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹಿಮಾಚಲ ಪ್ರದೇಶ ಬಿಜೆಪಿ ಘಟಕಕ್ಕೂ ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೈರಾಮ್ ಠಾಕೂರ್ ಸ್ಪಷ್ಟನೆ
"ಕೆಲವು ಗೊಂದಲಗಳು ಉಂಟಾಯಿತು. ಆದರೆ ಪಕ್ಷ ಎಂಬ ಮೇಲೆ ಇದೆಲ್ಲಾ ಸಾಮಾನ್ಯ. ಜೆ. ಪಿ. ನಡ್ಡಾ ಮೇಲೆ ಪಕ್ಷ ದೊಡ್ಡ ಜವಾಬ್ದಾರಿಯನ್ನು ಹೊರಿಸಿದೆ. ಅವರ ಹಾದಿಯನ್ನೇ ನಾನು ಕೂಡ ಅನುಸರಿಸಲಿದ್ದೇನೆ. ಕೇಂದ್ರ ಸರಕಾರದಲ್ಲಿ ಅನುರಾಗ್ ಠಾಕೂರ್ ಅವರಿಗೆ ಸೂಕ್ತ ಸ್ಥಾನ-ಮಾನಗಳನ್ನು ಪಕ್ಷ ಕಲ್ಪಿಸಿದೆ. ನನಗೆ ರಾಜ್ಯದ ಜವಾಬ್ದಾರಿ ನೀಡಲಾಗಿದೆ. ನಮ್ಮ ಕಾರ್ಯಗಳ ಬಗ್ಗೆ ನಮಗೆ ಸ್ಪಷ್ಟವಾಗಿ ತಿಳಿಸಲಾಗಿದೆ,'' ಎಂದು ಮುಖ್ಯಮಂತ್ರಿ ಅಭ್ಯರ್ಥಿ ಕುರಿತ ಗೊಂದಲಗಳ ಬಗ್ಗೆ ಜೈರಾಮ್ ಠಾಕೂರ್ ಸ್ಪಷ್ಟಪಡಿಸಿದರು.

ರಾಜ್ಯಕ್ಕೆ ಯಾವುದೇ ಲಾಭ ಇಲ್ಲ
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಹಿಮಾಚಲ ಪ್ರದೇಶ ಭೇಟಿ ಕುರಿತು ಮಾತನಾಡಿದ ಸಿಎಲ್‌ಪಿ ನಾಯಕ ಮುಖೇಶ್ ಅಗ್ನಿಹೋತ್ರಿ, " ಪ್ರಧಾನಿಯಿಂದ ರಾಜ್ಯಕ್ಕೆ ಲಾಭ ಪಡೆಯುವಂತೆ ಮಾಡಲು ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ವಿಫಲವಾಗಿದ್ದಾರೆ. ಹಿಮಾಚಲ ಪ್ರದೇಶಕ್ಕೆ ಏನನ್ನೂ ಘೋಷಿಸದೆ ರಾಜ್ಯಕ್ಕೆ ಪ್ರಧಾನಿ ಮೂರನೇ ಬಾರಿ ಭೇಟಿ ಕೊಟ್ಟಂತೆ ಆಗಿದೆ. ರಾಜ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಧಾನಿ ಮುಂದೆ ಹೇಳುವುದು ಮತ್ತು ಅದಕ್ಕೆ ಸರಿಯಾದ ಪರಿಹಾರಗಳನ್ನು ಕಂಡುಕೊಳ್ಳುವುದು ಮುಖ್ಯಮಂತ್ರಿಗಳ ಕೆಲಸವಾಗಿದೆ,'' ಎಂದು ಟೀಕಿಸಿದ್ದಾರೆ.
"ಸರಕಾರದ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸುವ ಬದಲು, ಏರುತ್ತಿರುವ ಹಣದುಬ್ಬರ ಮತ್ತು ನಿರುದ್ಯೋಗದಿಂದ ಸಂಕಷ್ಟದಲ್ಲಿರುವ ಜನರೊಂದಿಗೆ ಪ್ರಧಾನಿ ಮೋದಿ ಮಾತನಾಡಬೇಕಿತ್ತು. ಪ್ರಧಾನಿಯವರ ಈ ಕಾರ್ಯಕ್ರಮವು ಬಿಜೆಪಿಯ ಸೋಲಿನ ಭಯ ಮತ್ತು ಹತಾಶೆಯನ್ನು ಹೋಗಲಾಡಿಸುವ ವಿಫಲ ಪ್ರಯತ್ನ,'' ಎಂದು ಕಾಂಗ್ರೆಸ್ ಸಂಸದೆ ಪ್ರತಿಭಾ ಸಿಂಗ್ ಹೇಳಿದ್ದಾರೆ.












Click it and Unblock the Notifications