ಜೈ ಶ್ರೀ ರಾಮ್ ಎಂದು ಬರೆದಿದ್ದಕ್ಕಾಗಿ ವಿದ್ಯಾರ್ಥಿಗೆ ಥಳಿಸಿದ ಜೆ & ಕೆ ಶಿಕ್ಷಕ: ದೂರು ದಾಖಲು!
ಜೈ ಶ್ರೀ ರಾಮ್ ಎಂದು ಬರೆದಿದ್ದಕ್ಕಾಗಿ ಶಿಕ್ಷಕರೊಬ್ಬರು ವಿದ್ಯಾರ್ಥಿಗೆ ಥಳಿಸಿದ ಘಟನೆ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕ ವಿದ್ಯಾರ್ಥಿಗೆ ಥಳಿಸಿದ್ದಕ್ಕೆ ಆತನ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿದೆ.
ತರಗತಿಯ ಕಪ್ಪು ಹಲಗೆಯ ಮೇಲೆ ಜೈ ಶ್ರೀ ರಾಮ್ ಎಂದು ಬರೆದಿದ್ದರಿಂದ ಥಳಿಸಲಾಗಿದೆ ಎಂದು ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿ ಹೇಳಿದ್ದಾನೆ. ಆರೋಪಿ ಶಿಕ್ಷಕ ಮತ್ತು ಶಾಲೆಯ ಪ್ರಾಂಶುಪಾಲರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಶಿಕ್ಷಕ ಮತ್ತು ಪ್ರಾಂಶುಪಾಲರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 342 (ತಪ್ಪಾಗಿ ಶಿಕ್ಷೆ), 504 (ಉದ್ದೇಶಪೂರ್ವಕ ಅವಮಾನ), 506 (ಅಪರಾಧ ಬೆದರಿಕೆ) ಮತ್ತು ಬಾಲಾಪರಾಧ ನ್ಯಾಯದ ಸೆಕ್ಷನ್ 75 (ಮಗುವಿನಿಂದಿಗೆ ಕ್ರೌರ್ಯ) ಹಾಗೂ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಮುಸ್ಲಿಂ ವಿದ್ಯಾರ್ಥಿಗೆ ಥಳಿತ
ಉತ್ತರ ಪ್ರದೇಶದ ಮುಜಾಫರ್‌ನಗರದ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ತಮ್ಮ ವಿದ್ಯಾರ್ಥಿಗಳು ಸಹ ಮುಸ್ಲಿಂ ವಿದ್ಯಾರ್ಥಿಯನ್ನು ಥಳಿಸುವಂತೆ ಆದೇಶಿಸಿದ ವಿಡಿಯೋ ಹೊರಬಿದ್ದ ಒಂದು ದಿನದ ನಂತರ ಈ ಘಟನೆ ವರದಿಯಾಗಿದೆ. ಮುಸ್ಲಿಂ ವಿದ್ಯಾರ್ಥಿಗೆ ಇತರ ವಿದ್ಯಾರ್ಥಿಗಳು ಸರದಿಯಲ್ಲಿ ನಿಂತು ಹೊಡೆಯಲು ಬರಬೇಕು ಎಂದು ಕರೆಸಿಕೊಳ್ಳುವ ಶಿಕ್ಷಕಿ ಹೇಳಿಕೆ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಥುವಾದಲ್ಲಿ ನಡೆದ ಘಟನೆಯ ನಂತರ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದು, ಈ ಕುರಿತು ತನಿಖೆ ನಡೆಸಲು ತ್ರಿಸದಸ್ಯ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ. ಸದಸ್ಯರು ಬನಿಯ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್, ಕಥುವಾ ಉಪ ಮುಖ್ಯ ಶಿಕ್ಷಣ ಅಧಿಕಾರಿ ಮತ್ತು ಖರೋಟೆಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರನ್ನು ಒಳಗೊಂಡಿರುತ್ತಾರೆ.
ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಲು ಹಿಂದೂ ವಿದ್ಯಾರ್ಥಿಗೆ ಶಿಕ್ಷಕರೊಬ್ಬರು ತಿಳಿಸಿದ ಘಟನೆ ಉತ್ತರಪ್ರದೇಶದ ಶಾಲೆಯೊಂದರಲ್ಲಿ ನಡೆದಿದೆ. ಈ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದೇಶದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ಯುಪಿಯ ಮುಜಾಫರ್‌ನಗರದಲ್ಲಿ ಮುಸ್ಲಿಂ ವಿದ್ಯಾರ್ಥಿಯೊಬ್ಬನಿಗೆ ಕಪಾಳಮೋಕ್ಷ ಮಾಡುವಂತೆ ಶಿಕ್ಷಕರೊಬ್ಬರು ಹಿಂದೂ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿರುವ ವಿಡಿಯೋ ಶುಕ್ರವಾರ ವೈರಲ್ ಆಗಿದ್ದು, ಘಟನೆಯ ಕುರಿತು ಮುಜಫರ್‌ನಗರ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಮತ್ತು ತನಿಖೆಯನ್ನು ಪ್ರಾರಂಭಿಸಿದ್ದಾರೆ.
ವೀಡಿಯೊದಲ್ಲಿ ಶಿಕ್ಷಕಿ ತ್ರಿಪ್ತಾ ತ್ಯಾಗಿ, ಹಿಂದೂ ವಿದ್ಯಾರ್ಥಿಗಳು ತರಗತಿಯ ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಲು ಸರದಿಯಲ್ಲಿ ಬರಲು ತಿಳಿಸಿದ್ದಾರೆ. "ನೀವು ಅವನನ್ನು ಏಕೆ ಬಲವಾಗಿ ಹೊಡೆಯುತ್ತಿಲ್ಲ" ಎಂದು ವಿದ್ಯಾರ್ಥಿಗಳನ್ನು ಪ್ರಶ್ನೆ ಮಾಡಿದ್ದಾಳೆ. ಈ ವೇಳೆ ವಿದ್ಯಾರ್ಥಿಯು ಜೋರಾಗಿ ಅಳುತ್ತಿದ್ದರೂ ಸಹ ಶಿಕ್ಷಕರು ವಿದ್ಯಾರ್ಥಿಗೆ ಥಳಿಸಲು ಹೇಳುತ್ತಾರೆ. ಪ್ರಕರಣದ ತನಿಖೆಯನ್ನು ಮನ್ಸೂರ್‌ಪುರದ ಠಾಣಾಧಿಕಾರಿಗೆ ಮುಜಫರ್‌ನಗರ ಪೊಲೀಸರು ಸೂಚಿಸಿದ್ದಾರೆ.
ಮುಸ್ಲಿಂ ವಿದ್ಯಾರ್ಥಿಯ ತಂದೆ ಮೊಹಮ್ಮದ್ ಜುಬೇರ್ ಸುದ್ದಿಗಾರರೊಂದಿಗೆ ಮಾತನಾಡಿ, "ನಾನು ನನ್ನ ಮಗುವನ್ನು ಆ ಶಾಲೆಗೆ ಹೋಗುವುದನ್ನು ಬಿಡಿಸುತ್ತೇನೆ. ಯಾವುದೇ ಪೊಲೀಸ್ ದೂರು ನೀಡಲು ಬಯಸುವುದಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications