ಭಾರತೀಯ ಸೇನೆ ಮೇಲೆ ದಾಳಿಗೆ ಸಹಾಯ ಮಾಡಿದ್ದು ಸ್ಥಳೀಯರು?
ಶ್ರೀನಗರ: ಪೂಂಚ್ ಜಿಲ್ಲೆ ರಜೌರಿ ಸೆಕ್ಟರ್‌ನಲ್ಲಿ ಭಾರತದ ಸೇನಾ ವಾಹನದ ಮೇಲೆ ದಾಳಿ ನಡೆಸಿ, ಐವರು ಯೋಧರನ್ನ ಉಗ್ರರು ಬಲಿಪಡೆದ ಘಟನೆ ಸಂಬಂಧ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಸೇನೆ ಮೇಲೆ ದಾಳಿಗೆ ಸಹಕರಿಸಿದ್ದು ಕೆಲ ಸ್ಥಳೀಯರು ಎಂಬ ಸ್ಫೋಟಕ ಮಾಹಿತಿಯನ್ನ ಜಮ್ಮು-ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ತಿಳಿಸಿದ್ದಾರೆ.
ಕಣಿವೆ ರಾಜ್ಯದ ಪೂಂಚ್ ಜಿಲ್ಲೆಯಲ್ಲಿ ಭಾರತೀಯ ಸೇನಾ ವಾಹನದ ಮೇಲೆ ಭೀಕರ ದಾಳಿ ನಡೆದ ನಂತರ ಗಡಿಯಲ್ಲಿ ಸೂಕ್ಷ್ಮ ವಾತಾವರಣ ನಿರ್ಮಾಣವಾಗಿತ್ತು. ಸೇನಾಧಿಕಾರಿಗಳು ಉಗ್ರರ ಹೆಣ ಬೀಳಿಸಲು ಕಾರ್ಯಾಚರಣೆ ಕೂಡ ಆರಂಭಿಸಿದ್ದರು. ಇಷ್ಟೆಲ್ಲದರ ನಡುವೆ ಕೆಲವು ಸ್ಥಳೀಯರು ಕೂಡ ಉಗ್ರರಿಗೆ ನೆರವು ನೀಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಕಾರ್ಯಾಚರಣೆ ಹಿನ್ನೆಲೆ ರಾಜೌರಿ ಜಿಲ್ಲೆಯ ದರ್ಹಾಲ್ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದ ಡಿಜಿಪಿ ಈ ಮಾತು ಹೇಳಿದ್ದಾರೆ. ಅಲ್ಲದೆ ಹಲವು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಉಗ್ರರಿಗೆ ಎಲ್ಲಾ ವ್ಯವಸ್ಥೆ ಮಾಡಿದ್ರಾ?
ಹೌದು, ಇದೀಗ ಕೇಳಿಬಂದಿರುವ ಮಾಹಿತಿ ಪ್ರಕಾರ ದಾಳಿ ನಡೆಸಿದ್ದ ಭಯೋತ್ಪಾದಕರಿಗೆ ಕೆಲವು ಸ್ಥಳೀಯರು ಆಶ್ರಯ ನೀಡಿದ್ದೂ ಅಲ್ಲದೆ ಅವರಿಗೆ ಸಾರಿಗೆ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ. ಆರೋಪದ ಹಿನ್ನೆಲೆಯಲ್ಲಿ ಈಗ ತನಿಖೆ ಕೂಡ ಆರಂಭವಾಗಿದೆ. ಘಟನೆ ನಡೆದ ದಿನದಿಂದಲೂ ಉಗ್ರರನ್ನು ಹೊಡೆದು ಹಾಕಲು ಅಥವಾ ಜೀವಂತವಾಗಿ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭವಾಗಿದೆ. ಇದಕ್ಕಾಗಿ ದಟ್ಟವಾದ ಅರಣ್ಯ ಪ್ರದೇಶದಲ್ಲೂ ಸೇನೆಯಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಅಲ್ಲೇ ಇದ್ದಾರಾ ಪಾಪಿ ಉಗ್ರರು?
ಇನ್ನು ಜಮ್ಮು-ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ದಿಲ್‌ಬಾಗ್ ಸಿಂಗ್ ಅವರು ನೀಡಿರುವ ಹೇಳಿಕೆ ಪ್ರಕಾರ, ಸ್ಥಳೀಯರ ಸಹಕಾರವಿಲ್ಲದೆ ಇಂತಹ ದಾಳಿ ಸಂಘಟಿಸಲು ಸಾಧ್ಯವಾಗದು ಎಂದಿದ್ದಾರೆ. ಸ್ಟೀಲ್ ಗುಂಡು, ಕಚ್ಚಾ ಬಾಂಬ್ ಬಳಸಿ ದಾಳಿ ಮಾಡಿದ್ದಾರೆ ಉಗ್ರರು. ಸೇನಾ ವಾಹನ ತಿರುವಿನಲ್ಲಿ ನಿಧಾನವಾಗಿ ಚಲಿಸುವಾಗ ಉಗ್ರರು ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಮತ್ತೊಂದ್ಕಡೆ ರಜೌರಿ-ಪೂಂಚ್ ಪ್ರದೇಶದಲ್ಲಿ 9-12 ವಿದೇಶಿ ಭಯೋತ್ಪಾದಕರು ಸಕ್ರಿಯವಾಗಿ ಇರಬಹುದು ಎಂಬ ಸ್ಫೋಟಕ ಮಾಹಿತಿಯನ್ನೂ ಡಿಜಿಪಿ ನೀಡಿದ್ದಾರೆ.
ದಟ್ಟ ಅರಣ್ಯದಲ್ಲಿ ಉಗ್ರರ ಬಿಡಾರ?
ಭಾರತೀಯ ಸೇನಾ ವಾಹನದ ಮೇಲೆ ದಾಳಿ ಮಾಡಿ 5 ಯೋಧರ ಸಾವಿಗೆ ಕಾರಣವಾಗಿರುವ ಉಗ್ರರು ಪಾಕಿಸ್ತಾನಿ ನೆಲದವರು ಎಂದು ಹೇಳಲಾಗುತ್ತಿದೆ. ಮತ್ತೊಂದು ಕಡೆ ದಾಳಿ ನಡೆಸಿದ ಬಳಿಕ ಸುತ್ತಮುತ್ತಲ ದಟ್ಟ ಅರಣ್ಯದಲ್ಲಿ ಉಗ್ರರು ಅಡಗಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಕಾಡಿನ ಮೂಲೆ ಮೂಲೆಯಲ್ಲೂ ಹುಡುಕಾಟ ನಡೆಯುತ್ತಿದೆ. ಡ್ರೋನ್ ಸೇರಿದಂತೆ ಹೆಲಿಕಾಪ್ಟರ್ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಉಗ್ರರ ಬೇಟೆಗೆ ಬಲೆ ಹೆಣೆಯಲಾಗಿದೆ.
ಅಮೆರಿಕದ ಬುಲೆಟ್ ಉಗ್ರರ ಕೈಗೆ?
ಲಷ್ಕರ್-ಎ-ತೈಬಾ ಇಲ್ಲ ಜೈಷ್-ಎ-ಮೊಹಮದ್ ಉಗ್ರ ಸಂಘಟನೆಗಳು ಈ ದಾಳಿ ನಡೆಸಿದೆ ಎನ್ನಲಾಗಿದೆ. ಉಗ್ರರ ಕೈಗೆ ಅಮೆರಿಕದ ಬುಲೆಟ್‌ಗಳು ಸಿಕ್ಕಿದ್ದು ಹೇಗೆ ಎಂಬ ತನಿಖೆ ನಡೆಯುತ್ತಿದೆ. ಮೂಲಗಳ ಪ್ರಕಾರ ಅಫ್ಘಾನಿಸ್ತಾನ ಬಿಟ್ಟು ಹೋಗುವಾಗ ಅಮೆರಿಕ ಸೇನಾ ಪಡೆ ಉಳಿಸಿದ್ದ ಬುಲೆಟ್‌ಗಳು ಪಾಪಿ ಪಾಕಿಸ್ತಾನದ ಉಗ್ರರ ಕೈಗೆ ಸಿಕ್ಕಿವೆ ಎನ್ನಲಾಗುತ್ತಿದೆ. ತಾಲಿಬಾನಿಗಳ ಪಾಲಾಗಿರುವ ಅಮೆರಿಕದ ಗುಂಡುಗಳು ಹಾಗೂ ಶಸ್ತ್ರಾಸ್ತ್ರ ಇದೀಗ ಪಾಕಿಸ್ತಾನಿ ಉಗ್ರರನ್ನು ತಲುಪಿವೆ ಎಂಬ ಮಾಹಿತಿ ಸಂಚಲನ ಸೃಷ್ಟಿಸಿದೆ.
ಪುಲ್ವಾಮಾ ದಾಳಿಯ ಭೀಕರತೆ
4 ವರ್ಷಗಳ ಹಿಂದೆ ನಡೆದಿದ್ದ ಪುಲ್ವಾಮಾ ದಾಳಿ ಕೂಡ ಉಗ್ರರ ಇಂತಹದ್ದೇ ಭೀಕರ ಕೃತ್ಯಗಳಿಗೆ ಸಾಕ್ಷಿಯಾಗಿತ್ತು. ಫೆಬ್ರವರಿ 14, 2019ರಂದು ಭಾರತೀಯ ಸೇನಾ ವಾಹನದ ಮೇಲೆ ದಾಳಿ ನಡೆದ ಪರಿಣಾಮ 40 ಯೋಧರು ಹುತಾತ್ಮರಾಗಿದ್ದರು. ಜೊತೆಗೆ ಪದೇಪದೆ ಕಣಿವೆ ರಾಜ್ಯದಲ್ಲಿ ಭಾರತೀಯ ಸೇನೆಯನ್ನೇ ಗುರಿಯಾಗಿಸಿಕೊಂಡು ಉಗ್ರರು ಅಟ್ಯಾಕ್ ಮಾಡುತ್ತಿದ್ಧಾರೆ. ಇಫ್ತಿಯಾರ್ ಕೂಟಕ್ಕಾಗಿ ಹಣ್ಣು ತರಲು ಹೋಗಿದ್ದ ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದರು ಪಾಪಿ ಉಗ್ರರು.












Click it and Unblock the Notifications