J&K 2024 polls: ಜಮ್ಮು & ಕಾಶ್ಮೀರದ "ಪುಲ್ವಾಮಾ"ದಲ್ಲಿ ಹೇಗೆ ನಡೆಯಿತು ಮತದಾನ
ಜಮ್ಮು ಮತ್ತು ಕಾಶ್ಮೀರದಲ್ಲಿ ಹತ್ತು ವರ್ಷಗಳ ನಂತರ ವಿಧಾನಸಭೆ ಚುನಾವಣೆ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ಮೊದಲ ಹಂತದ ಮತದಾನ ಬುಧವಾರ ನಡೆದಿದೆ. ಈ ರಾಜ್ಯದಲ್ಲಿನ 24 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆದಿದೆ. ಇದರಲ್ಲಿ ಪುಲ್ವಾಮಾ ಜಿಲ್ಲೆಯೂ ಒಂದು. ಜಮ್ಮು ಮತ್ತು ಕಾಶ್ಮೀರದಲ್ಲಿ ಉಳಿದ ವಿಧಾನಸಭಾ ಕ್ಷೇತ್ರಗಳಂತೆ ಮತದಾನ ನಡೆದಿದೆ. ಆದರೆ, ಈ ಭಾಗದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮತದಾನ ಆಗಿಲ್ಲ. ಇಲ್ಲಿ ಉಳಿದ ಕ್ಷೇತ್ರಗಳಿಗಿಂತ ಮತದಾನ ಪ್ರಮಾಣ ಕುಸಿತ ಕಂಡಿದೆ.
ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆ ಮೊದಲ ಹಂತದ ಮತದಾನಕ್ಕೆ ಸಂಬಂಧಿಸಿದಂತೆ ಬುಧವಾರ ಸಂಜೆ 5ರ ವೇಳೆಗೆ 58.19ರಷ್ಟು ಮತದಾನ ನಡೆದಿದೆ. ಇದರಲ್ಲಿ ಕಿಶ್ತ್ವಾರ್ ಎನ್ನುವ ಜಿಲ್ಲೆಯಲ್ಲಿ ಶೇಕಡ 77.23ರಷ್ಟು ಅತಿ ಹೆಚ್ಚು ಮತದಾನ ಆಗಿದೆ. ಆದರೆ, ಪುಲ್ವಾಮಾ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಮತದಾನ ಅಂದರೆ ಶೇಕಡ 43.87ರಷ್ಟು ಮಾತ್ರ ಮತದಾನ ಆಗಿರುವುದು ವರದಿಯಾಗಿದೆ. ಇದು ಅಂತಿಮ ಮತದಾನದ ಪ್ರಮಾಣ ಅಲ್ಲ. ನಾಳೆ ಬೆಳಿಗ್ಗೆ ಅಂದರೆ ಗುರುವಾರ ಬೆಳಿಗ್ಗೆ ಮತದಾನದ ಪ್ರಮಾಣದ ನಿಖರ ಹಾಗೂ ಅಂತಿಮ ವರದಿ ಲಭ್ಯವಾಗಲಿದೆ. ಆದರೆ, ಅತಿ ಕಡಿಮೆ ಮತದಾನ ನಡೆದಿರುವ ಪುಲ್ವಾಮಾದಲ್ಲಿ ಮತದಾನ ಪ್ರಮಾಣ ಭಾರೀ ಹೆಚ್ಚಳವಾಗಿರುವ ಸಾಧ್ಯತೆ ಕಡಿಮೆ. ಈಗಾಗಲೇ ಪುಲ್ವಾಮಾ ಜಿಲ್ಲೆಗಳಿಗಿಂತ ಜಮ್ಮು ಮತ್ತು ಕಾಶ್ಮೀರದ ಉಳಿದ ಪ್ರದೇಶದಲ್ಲಿ ಹೆಚ್ಚು ಮತದಾನವಾಗಿದೆ.

ಪುಲ್ವಾಮಾದಲ್ಲಿ ಹೇಗೆ ನಡೆಯಿತು ಮತದಾನ
ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 10 ವರ್ಷಗಳ ನಂತರ ಚುನಾವಣೆ ನಡೆಯುತ್ತಿದೆ. ಸ್ವಾತಂತ್ರ್ಯದ ನಂತರ ಭಾರತ ಸಂವಿಧಾನದ ಮೂಲಕ 370ನೇಯ ವಿಧಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ತೆಗೆದ ನಂತರ ಮೊದಲ ಬಾರಿ ಚುನಾವಣೆ ನಡೆಯುತ್ತಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಭಾರತದ ಸೂಕ್ಷ್ಮ ಪ್ರದೇಶ ಎಂದೇ ಪರಿಗಣಿಸಲಾಗುತ್ತದೆ. ಭಾರತದ ಮುಕುಟದಂತಿರುವ ಈ ರಾಜ್ಯಕ್ಕೆ ಬಾಹ್ಯ ಬೆದರಿಕೆಗಳಿವೆ. ಇದೇ ಕಾರಣಕ್ಕಾಗಿ ಈ ರಾಜ್ಯದಲ್ಲಿ ಹೆಚ್ಚಿನ ಭದ್ರತೆ ಹಾಗೂ ರಕ್ಷಣಾ ಕ್ರಮಗಳನ್ನು ಅನುಸರಿಸಲಾಗುತ್ತದೆ.
ಇನ್ನು ಚುನಾವಣೆ ಎಂದರೆ ಕೇಳಬೇಕಾ, ಕೇಂದ್ರ ಭದ್ರತಾ ಪಡೆಗಳು ಹಾಗೂ ಚುನಾವಣಾ ಆಯೋಗ ಈ ನಿಟ್ಟಿನಲ್ಲಿ ಹಲವು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿತ್ತು. ಅದೇ ರೀತಿ ಪುಲ್ವಾಮಾದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಾಗಿತ್ತು. ಆದರೆ,ಪುಲ್ವಾಮಾದಲ್ಲಿ ಜನ ನಿರೀಕ್ಷಿತ ಪ್ರಮಾಣದಲ್ಲಿ ಬಂದು ಮತದಾನ ಮಾಡಲಿಲ್ಲ. ಬುಧವಾರ ಬೆಳಿಗ್ಗೆಯಿಂದಲೇ ಪುಲ್ವಾಮಾದಲ್ಲಿ ಮತದಾನ ಪ್ರಮಾಣ ವಿರಳವಾಗಿತ್ತು. ಮಧ್ಯಾಹ್ನ 3 ಗಂಟೆಯ ವೇಳೆಗೂ ಪುಲ್ವಾಮಾದಲ್ಲಿ ಶೇಕಡ 36.90 ರಷ್ಟು ಮತದಾನ ಆಗಿರುವುದು ವರದಿಯಾಗಿತ್ತು.
ಭಾರತೀಯರು ಎಂದೂ ಮರೆಯಲಾಗದ ಪುಲ್ವಾಮಾ ದುರಂತ
ಪುಲ್ವಾಮಾ ಎಂದ ಕೂಡಲೇ ಭಾರತೀಯರಿಗೆ ನೆನಪಾಗುವುದು ಆ ದುರಂತ. 2019ರ ಫೆಬ್ರವರಿ 14ರಂದು ಭಾರತೀಯರ ಪಾಲಿಗೆ ಕರಾಳ ದಿನ. ದೇಶದ ಗಡಿಯಲ್ಲಿ ಯಾರೂ ಅಂದಾಜಿಸಲಾಗದ ದುರಂತವೊಂದು ಸಂಭವಿಸಿತ್ತು. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಪ್ರದೇಶದಲ್ಲಿ ವಾಹನದಲ್ಲಿ ಸಾಗುತ್ತಿದ್ದ ಭಾರತೀಯ ಸೈನಿಕರಿದ್ದ ಸೇನಾ ವಾಹನದ ಮೇಲೆ ಭೀಕರ ಬಾಂಬ್ ದಾಳಿ ನಡೆದಿತ್ತು. ಈ ದುರಂತಲ್ಲಿ ನಮ್ಮ ದೇಶದ 40 ಭಾರತೀಯ ಯೋಧರು ಹುತಾತ್ಮರಾಗಿದ್ದರು.












Click it and Unblock the Notifications