ಭಾರತೀಯರ ಕ್ರಿಯೇಟಿವಿಟಿ ನೋಡಿ ದಂಗಾದ ಇವಾಂಕಾ ಟ್ರಂಪ್
ನವದೆಹಲಿ, ಮಾರ್ಚ್ 01: ಭಾರತೀಯರ ಟ್ಯಾಲೆಂಟ್ ಕಂಡು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಅವಾಕ್ಕಾಗಿದ್ದಾರೆ.
ಇತ್ತೇಚೆಗಷ್ಟೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತ ಪ್ರವಾಸಕ್ಕೆ ಭಾರತಕ್ಕೆ ಬಂದಿದ್ದರು. ಈ ಸಮಯದಲ್ಲಿ ಮಡದಿ ಮಲಾನಿಯಾ ಟ್ರಂಪ್ ಮತ್ತು ಮಗಳು ಇವಾಂಕಾ ಟ್ರಂಪ್ ಸಹ ಭಾರತಕ್ಕೆ ಬಂದಿದ್ದರು.
ಇವಾಂಕಾ ಟ್ರಂಪ್ ಅವರು ಭಾರತದ ಹೆಮ್ಮೆ ತಾಜ್ ಮಹಲ್ ಮುಂದೆ ಕೂತು ಚಿತ್ರ ತೆಗೆಸಿಕೊಂಡಿದ್ದರು. ಈ ಚಿತ್ರ ಕಾಲೆಳೆಯುವ ನೆಟ್ಟಿಗರಿಗೆ ಆಹಾರವಾಗಿತ್ತು. ಇವಾಂಕಾ ಟ್ರಂಪ್ ಚಿತ್ರವನ್ನು ಎಡಿಟ್ ಮಾಡಿ ಹಾಸ್ಯ ಮಾಡಿದ್ದರು.
ಆದರೆ ಇವನ್ನು ಇವಾಂಕಾ ಟ್ರಂಪ್ ಕ್ರೀಡಾಸ್ಪೂರ್ತಿಯೊಂದಿಗೆ ಎದುರುಗೊಂಡಿದ್ದು, ತಮ್ಮನ್ನು ಹಾಸ್ಯದ ವಸ್ತುವನ್ನಾಗಿಸಿದ ಟ್ವೀಟ್‌ಗಳನ್ನು ತಮ್ಮದೇ ಖಾತೆಯಿಂದ ಶೇರ್ ಮಾಡಿದ್ದಾರೆ.

ಖ್ಯಾತ ಹಾಡುಗಾರ, ನಟ ದಿಲ್ಜಿತ್ ದೋಸಂಜ್ ಅವರು ಇವಾಂಕಾ ಟ್ರಂಪ್ ಚಿತ್ರವನ್ನು ಎಡಿಟ್ ಮಾಡಿ ತಮ್ಮ ಚಿತ್ರವನ್ನು ಜೊತೆಗೆ ಹಾಕಿ, 'ತಾಜ್ ಮಹಲ್ ಗೆ ಕರೆದುಕೊಂಡು ಹೋಗು ಎಂದು ಹಠ ಮಾಡುತ್ತಿದ್ದಳು, ಅದಕ್ಕೆ ಕರೆತಂದೆ' ಎಂದು ಬರೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಇವಾಂಕಾ ಟ್ರಂಪ್, 'ನನ್ನನ್ನು ತಾಜ್ ಮಹಲ್ ಗೆ ಕರೆದುಕೊಂಡು ಹೋಗಿದ್ದಕ್ಕೆ ಧನ್ಯವಾದಗಳು, ಅದೊಂದು ಮರೆಯಲಾಗದ ಅನುಭವ' ಎಂದು ಪ್ರತಿಕ್ರಿಯಿಸಿದ್ದರು.
ಅದಿತ್ಯಾ ಚೌಧರಿ ಎಂಬುವರು, ಇವಾಂಕಾ ಟ್ರಂಪ್ ರ ತಾಜ್ ಮಹಲ್ ಚಿತ್ರವನ್ನು ತಮಾಷೆಯಾಗಿ ಎಡಿಟ್ ಮಾಡಿದ ಇನ್ನೂ ಕೆಲವು ಚಿತ್ರಗಳನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದರು. ಇದನ್ನೂ ರೀಟ್ವೀಟ್ ಮಾಡಿದ ಇವಾಂಕಾ ಟ್ರಂಪ್, 'ನಾನು ಹಲವು ಗೆಳೆಯರನ್ನು ಮಾಡಿಕೊಂಡೆ, ಭಾರತೀಯ ಆದರಕ್ಕೆ ಧನ್ಯವಾದ' ಎಂದು ಬರೆದುಕೊಂಡಿದ್ದಾರೆ.
ಹಾಸ್ಯಕ್ಕಾಗಿ ಮಾಡುವ ಟ್ರೋಲ್‌ಗಳಿಂದ ಸೆಲೆಬ್ರಿಟಿಗಳು ಸಿಟ್ಟಾಗುವುದೇ ಹೆಚ್ಚು, ಮಾನನಷ್ಟ ಮೊಕದ್ದಮೆ ಹಾಕಿದ್ದೂ ಇದೆ, ಆದರೆ ಇವಾಂಕಾ ಮಾತ್ರ ತಮ್ಮನ್ನು ಹಾಸ್ಯಮಯವಾಗಿ ಚಿತ್ರಿಸಿದ ಚಿತ್ರಗಳನ್ನು ತಾವೇ ಟ್ವೀಟ್ ಮಾಡಿ ವಿಶಾಲ ಮನೋಭಾವ ಪ್ರದರ್ಶಿಸಿದ್ದಾರೆ.












Click it and Unblock the Notifications