Jagathrakshakan: ಕೇಂದ್ರ ಮಾಜಿ ಸಚಿವರ ಮೇಲೆ ಐಟಿ ದಾಳಿ
ಬೆಂಗಳೂರು, ಅಕ್ಟೋಬರ್ 05: ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಚಿವ ಮತ್ತು ಹಾಲಿ ಡಿಎಂಕೆ ಸಂಸದ ಎಸ್ ಜಗತ್ರಕ್ಷಕ್ ಅವರಿಗೆ ಸೇರಿರುವ ಚೆನ್ನೈನಲ್ಲಿರುವ 40 ಕ್ಕೂ ಹೆಚ್ಚು ಸ್ಥಳಗಳಲ್ಲಿ ಗುರುವಾರ ಬೆಳಗ್ಗೆ ಆದಾಯ ತೆರಿಗೆ ಇಲಾಖೆ (IT Raids)ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸಂಸತ್ ಸದಸ್ಯ ಮತ್ತು ಪಲ್ಲವರಂ ಮತ್ತು ಕ್ರೋಮ್‌ಪೇಟ್‌ನಲ್ಲಿರುವ ಸಂಸದರ ಸಂಬಂಧಿಕರ ಮನೆಗಳು, ಅವರಿಗೆ ಸಂಬಂಧಿಸಿದ ಚೆನ್ನೈನ ಟಿ.ನಗರ ಪ್ರದೇಶದ ಹೋಟೆಲ್‌ನಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ ಎಂದು ವರದಿ ಆಗಿದೆ.

ಐಟಿ ದಾಳಿ ವಿರುದ್ಧ ಆಕ್ರೋಶ
ಡಿಎಂಕೆ ಸಂಸದರ ಮೇಲಿನ ಈ ಐಟಿ ದಾಳಿಯನ್ನು ಪಕ್ಷದ ವಕ್ತಾರರು ಖಂಡಿಸಿದ್ದಾರೆ. ಇದೊಂದು ರಾಜಕೀಯ ಸೇಡಿನ ಕ್ರಮ ಎಂಬುದು ಸ್ಪಷ್ಟವಾಗಿದೆ. ತಮಿಳುನಾಡಿನಲ್ಲಿ ಬಿಜೆಪಿ ಬೆಂಬಲಿತ ಎಐಎಡಿಎಂಕೆ ಮಂದಿ ಎಷ್ಟು ಕಾಲೇಜುಗಳನ್ನು ಮತ್ತು ಸಂಸ್ಥೆಗಳನ್ನು ನಡೆಸುತ್ತಿದ್ದಾರೆ ಎಂಬುದು ಜನರಿಗೆ ತಿಳಿದಿದೆ. ಹೀಗಿದ್ದರೂ ವಿರೋಧ ಪಕ್ಷಗಳನ್ನು ಭಯಭೀತಗೊಳಿಸಲು ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ದೂರಿದ್ದಾರೆ.
ಕೇಂದ್ರ ಸರ್ಕಾರದವರು ಅಧಿಕಾರ ನಡೆಸಲು ದೇಶವನ್ನು ಆಳಲು ಯೋಗ್ಯರಲ್ಲ. ಬಿಜೆಪಿಯು ಸಂವಿಧಾನವನ್ನು ಗೌರವಿಸದ ಅನಾಗರಿಕರು, ಅವರು ಕಾನೂನನ್ನು ಗೌರವಿಸುವುದಿಲ್ಲ. ಬದಲಾಗಿ ತಮ್ಮ ಲಾಭಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂದು ಡಿಎಂಕೆ ವಕ್ತಾರರು ಆರೋಪಿಸಿದ್ದಾರೆ.
ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಐಟಿ ಮತ್ತು ಇಡಿಯನ್ನು ಭಾರತೀಯ ಜನತಾ ಪಕ್ಷ ಹೇಳಿದಂತೆ ಕೇಳುವ ಸಂಸ್ಥೆಗಳು ಎಂದು ಕರೆಯುವ ಮೂಲಕ ಕಿಡಿ ಕಾರಿದ್ದಾರೆ.
ಬಿಜೆಪಿಯ ಮುಂಚೂಣಿ ಸಂಸ್ಥೆಗಳಾದ ಐಟಿ ಮತ್ತು ಇಡಿ ಅಧಿಕಾರಿಗಳು ಚೆನ್ನೈನಲ್ಲಿರುವ ಡಿಎಂಕೆ ಸಂಸದ (ಜಗತ್ರಕ್ಷಕನ್) ಆವರಣದಲ್ಲಿ ಐಟಿ ದಾಳಿ ನಡೆಸಿದ್ದಾರೆ. ಇದೊಂದು ಸೇಡಿನ ರಾಜಕೀಯ ಭಾಗವಾಗಿದೆ. ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಇಂತಹ ರಾಜಕೀಯವನ್ನು ಜನರು ತಿರಸ್ಕರಿಸುತ್ತಾರೆ ಎಂದು ತಿಳಿಸಿದ್ದಾರೆ.












Click it and Unblock the Notifications