ಇಸ್ರೋ ಕೈಯಿಂದ ತಪ್ಪಿಸಿಕೊಂಡು ನಾಸಾ ಕೈಗೆ ಸಿಕ್ಕಿ ಬಿದ್ದ 'ಚಂದ್ರಯಾನ- 1'
ಚಂದ್ರನತ್ತ ಭಾರತ ಕಳುಹಿಸಿದ್ದ ಮೊದಲ ಉಪಗ್ರಹ 'ಚಂದ್ರಯಾನ -1' ಅಮೆರಿಕಾದ ಕೈಗೆ ಸಿಕ್ಕಿ ಬಿದ್ದಿದೆ. ಸರಿ ಸುಮಾರು 8 ವರ್ಷಗಳ ಹಿಂದೆಯೇ ಇಸ್ರೊ ಇದರ ಸಂಪರ್ಕವನ್ನು ಕಳೆದುಕೊಂಡಿತ್ತು. ಆದರೆ ಇದಿನ್ನೂ ಚಂದ್ರನ ಸುತ್ತ ಸುತ್ತುತ್ತಿದೆ.
ಬೆಂಗಳೂರು, ಮಾರ್ಚ್ 10: ಚಂದ್ರನತ್ತ ಭಾರತ ಕಳುಹಿಸಿದ್ದ ಮೊದಲ ಉಪಗ್ರಹ 'ಚಂದ್ರಯಾನ -1' ಅಮೆರಿಕಾದ ಕೈಗೆ ಸಿಕ್ಕಿ ಬಿದ್ದಿದೆ. ಸರಿ ಸುಮಾರು 8 ವರ್ಷಗಳ ಹಿಂದೆಯೇ ಇಸ್ರೊ ಇದರ ಸಂಪರ್ಕವನ್ನು ಕಳೆದುಕೊಂಡಿತ್ತು. ಆದರೆ ಇದಿನ್ನೂ ಚಂದ್ರನ ಸುತ್ತ ಸುತ್ತುತ್ತಿದೆ ಎಂದು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ಹೇಳಿದ್ದು ಅದನ್ನು ಪತ್ತೆ ಹಚ್ಚಿದೆ.
2008ರಲ್ಲಿ ಚಂದ್ರಯಾನ ಯೋಜನೆಯನ್ನು ನೂರಾರು ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿತ್ತು. ಚಂದ್ರನ ಮೇಲ್ಮೈ ಅಧ್ಯಯನಕ್ಕೆಂದು ಇದನ್ನು ಹಾರಿ ಬಿಡಲಾಗಿತ್ತು. ಇದು ಕನಿಷ್ಟ ಎರಡು ವರ್ಷ ಕಾರ್ಯಾಚರಣೆ ನಡೆಸಲಿದೆ ಎಂದುಕೊಳ್ಳಲಾಗಿತ್ತು. ಆದರೆ ಅವಧಿಗೂ ಮುನ್ನವೇ ಚಂದ್ರಾಯಾನ ಸಂಪರ್ಕ ಕಳೆದುಕೊಂಡಿತ್ತು. [ಫೆ. 15ಕ್ಕೆ ಇಸ್ರೊದಿಂದ 104 ಉಪಗ್ರಹಗಳ ಮೆಗಾ ಉಡಾವಣೆ]
ಆದರೆ ಇದೀಗ ಎಲ್ಲಾ ನಿರೀಕ್ಷೆಗಳನ್ನೂ ಮೀರಿ 8 ವರ್ಷಗಳ ನಂತರ ಚಂದ್ರಯಾನ -1 ಉಪಗ್ರಹ ಚಂದ್ರನ ಸುತ್ತ ಸುತ್ತುತ್ತಲೇ ಇದೆ ಎಂದು ನಾಸಾ ಹೇಳಿದೆ. ಸುಮಾರು 200 ಕಿಲೋಮೀಟರ್ ಎತ್ತರದ ಕಕ್ಷೆಯಲ್ಲಿ ಚಂದ್ರಯಾನ -1 ಉಪಗ್ರಹ ಸುತ್ತುತ್ತಿರುವುದನ್ನು ನಾಸಾ ಪತ್ತೆ ಹಚ್ಚಿದೆ.

ಕೊನೆಯ ಬಾರಿ ಆಗಸ್ಟ್ 29, 2009 ರಲ್ಲಿ ಚಂದ್ರಯಾನ-1 ಸಂಪರ್ಕಕ್ಕೆ ಸಿಕ್ಕಿತು. ಮಾರುತಿ ಕಾರಿನಷ್ಟು ದೊಡ್ಡ ಗಾತ್ರದ ಚಂದ್ರಯಾನ-1 ಇದೀಗ ನಾಸಾದ ರಡಾರ್ ಕಣ್ಣಿಗೆ ಬಿದ್ದಿದೆ. ಹೀಗಿದ್ದೂ ಇದರಿಂದ ಏನೂ ಉಪಯೋಗವಿಲ್ಲ. ಸದ್ಯ ಈ ಉಪಗ್ರಹ ಮಾಹಿತಿಗಳನ್ನು ಸ್ವೀಕರಿಸುವುದೂ ಇಲ್ಲ, ಕಳುಹಿಸುವುದೂ ಇಲ್ಲ. ಪರಸ್ಪರ ಸಂಪರ್ಕಕ್ಕೇ ಬೇಕಾದ ತಂತ್ರಜ್ಞಾನವೇ ಈ ಉಪಗ್ರಹದಲ್ಲಿ ಕೈಕೊಟ್ಟಿರುವುದು ಇದಕ್ಕೆ ಕಾರಣ. [ವಿಶ್ವದಾಖಲೆ ಬರೆದ ಇಸ್ರೊಗೆ ಟ್ವಿಟ್ಟರಿನಲ್ಲಿ ಅಭಿನಂದನೆಗಳ ಮಹಾಪೂರ]
ಸದ್ಯ ಇದು ಆಕಾಶದಲ್ಲಿರುವ ಉಪಯೋಗವಿಲ್ಲದ ಕಸ ಅಷ್ಟೆ. ಆದರೆ ಬರೋಬ್ಬರಿ 8 ವರ್ಷಗಳ ನಂತರ ಕಣ್ಣಿಗೆ ಬಿದ್ದಿರುವುದು ವಿಶೇಷ. 2009ರಲ್ಲಿ ಇದೇ ಚಂದ್ರಯಾನ ಚಂದ್ರನ ಮೇಲೆ ನೀರಿನ ಅಂಶ ಇರುವುದನ್ನು ಮೊದಲ ಬಾರಿಗೆ ಪತ್ತೆ ಹಚ್ಚಿತ್ತು.
2018ರಲ್ಲಿ ಇಸ್ರೋ ಚಂದ್ರಯಾನ-2 ಯೋಜನೆ ಕೈಗೊಳ್ಳಲಿದೆ.












Click it and Unblock the Notifications