Israel Hamas war: ಹಸಿವಿನಿಂದ ಬಳಲುತ್ತಿರುವ ಗಾಜಾದ ಜನರಿಗೆ ನೆರವಾದ ಭಾರತ!
ಇಸ್ರೇಲ್-ಹಮಾಸ್ ಯುದ್ಧದಿಂದಾಗಿ ಗಾಜಾದಲ್ಲಿ ವಾಸಿಸುವ ಲಕ್ಷಾಂತರ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಇಲ್ಲಿನ ಜನರು ಆಹಾರ, ನೀರು, ಔಷಧ ಮತ್ತು ಮೂಲಭೂತ ವಸ್ತುಗಳ ತೀವ್ರ ಕೊರತೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಪ್ಯಾಲೆಸ್ತೀನ್ ಜನತೆಗೆ ಪರಿಹಾರ ಸಾಮಗ್ರಿ ಕಳುಹಿಸಿದೆ.
ಸುಮಾರು 6.5 ಟನ್ ವೈದ್ಯಕೀಯ ನೆರವು ಮತ್ತು 32 ಟನ್ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಹೊತ್ತ IAF C-17 ವಿಮಾನ ಭಾನುವಾರ ಬೆಳಿಗ್ಗೆ ಘಾಜಿಯಾಬಾದ್‌ನಿಂದ ಈಜಿಪ್ಟ್‌ನ ಎಲ್-ಅರಿಶ್ ವಿಮಾನ ನಿಲ್ದಾಣಕ್ಕೆ ಹೊರಟಿತು. ಇವುಗಳಲ್ಲಿ ಅಗತ್ಯ ಜೀವ ಉಳಿಸುವ ಔಷಧಿಗಳು, ಶಸ್ತ್ರಚಿಕಿತ್ಸಾ ಸಾಮಗ್ರಿಗಳು, ಟೆಂಟ್‌ಗಳು, ಮಲಗುವ ಹಾಸಿಗೆಗಳು, ಟಾರ್ಪೌಲಿನ್‌ಗಳು, ನೈರ್ಮಲ್ಯ ಸೌಲಭ್ಯಗಳು, ನೀರು ಶುದ್ಧೀಕರಣ ಮಾತ್ರೆಗಳು ಮತ್ತು ಇತರ ಅಗತ್ಯ ವಸ್ತುಗಳು ಇವೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಭಾನುವಾರ ಮಾತನಾಡಿ, ಭಾರತವು ಪ್ಯಾಲೆಸ್ತೀನ್ ಜನರಿಗೆ ಮಾನವೀಯ ನೆರವನ್ನು ಕಳುಹಿಸಿದೆ. ಇದರಲ್ಲಿ ವೈದ್ಯಕೀಯ ನೆರವು ಮತ್ತು ವಿಪತ್ತು ಪರಿಹಾರ ಸಾಮಗ್ರಿಗಳು ಇವೆ. ತಕ್ಷಣದ ಪರಿಹಾರಕ್ಕಾಗಿ ನೀರಿನ ಬಾಟಲಿಗಳು ಮತ್ತು ನೋವು ನಿವಾರಕಗಳನ್ನು ಕಳುಹಿಸಲಾಗಿದೆ. ಸುಮಾರು 32 ಟನ್ ತೂಕದ ವಿಪತ್ತು ಪರಿಹಾರ ಸಾಮಗ್ರಿಗಳು, ಟೆಂಟ್‌ಗಳು, ಮಲಗುವ ಹಾಸಿಗೆ, ಟಾರ್ಪಾಲಿನ್‌ಗಳು, ಮೂಲಭೂತ ನೈರ್ಮಲ್ಯ ಸೌಲಭ್ಯಗಳು, ನೀರು ಶುದ್ಧೀಕರಣ ಮಾತ್ರೆಗಳು ಇತ್ಯಾದಿಗಳನ್ನು ಮಾನವೀಯ ನೆರವಾಗಿ ನೀಡಲಾಗಿದೆ ಎಂದು ಹೇಳಿದರು.
ಭಾರತೀಯ ವಾಯುಪಡೆಯ C17 ವಿಮಾನ ಪರಿಹಾರ ಸಾಮಗ್ರಿಗಳನ್ನು ಹೊತ್ತು ಬೆಳಗ್ಗೆ 8 ಗಂಟೆಗೆ ಹಿಂಡನ್ ವಾಯುನೆಲೆಯಿಂದ ಹೊರಟಿದೆ. ಮಧ್ಯಾಹ್ನ 3 ಗಂಟೆಗೆ ಈಜಿಪ್ಟ್‌ನ ಎಲ್-ಅರಿಶ್ ವಿಮಾನ ನಿಲ್ದಾಣದಲ್ಲಿ ಇದು ಲ್ಯಾಂಡ್ ಆಗಲಿದೆ. ಈಜಿಪ್ಟ್‌ನಿಂದ 20 ಸಹಾಯ ಟ್ರಕ್‌ಗಳ ಮೂಲಕ ಗಾಜಾಕ್ಕೆ ಇವುಗಳನ್ನು ಕಳುಹಿಸಲಾಗುತ್ತದೆ. ಶನಿವಾರ ಬೆಳಿಗ್ಗೆ ಗಾಜಾ ಪ್ರವೇಶಕ್ಕಾಗಿ ರಫಾ ಗಡಿಯನ್ನು ತೆರೆಯಲಾಗಿದೆ.
ಇಸ್ರೇಲ್ ನಿಯಂತ್ರಣಕ್ಕೆ ಒಳಗಾಗದ ರಫಾ ಗಡಿ ಒಂದೇ ಗಾಜಾಗೆ ಇರುವ ಏಕೈಕ ಮಾರ್ಗವಾಗಿದೆ. ತಮ್ಮ ಮಿತ್ರ ದೇಶವಾಗಿರುವ ಯುನೈಟೆಡ್ ಸ್ಟೇಟ್ಸ್ ಮನವಿಯ ಮೇರೆಗೆ ಈಜಿಪ್ಟ್‌ನಿಂದ ಗಾಜಾಗೆ ನೆರವು ಸಾಗಿಸಲು ಇಸ್ರೇಲ್ ಅನುಮತಿಸಿದೆ. ಭಾರತ ಕಳುಹಿಸಿಕೊಟ್ಟಿರುವ ಅಗತ್ಯ ವಸ್ತುಗಳು ರಫಾ ಗಡಿಯ ಮೂಲಕ ಗಾಜಾಗೆ ತಲುಪಲಿದೆ.

ವಿಶ್ವಸಂಸ್ಥೆಯ ವಿವಿಧ ಏಜೆನ್ಸಿಗಳಿಂದ ಬಂದ ನೆರವನ್ನು ಗಾಜಾಗೆ ತಲುಪಿಸುವ ಜವಾಬ್ದಾರಿಯನ್ನು ಈಜಿಪ್ಟಿನ ರೆಡ್ ಕ್ರೆಸೆಂಟ್ ಕಚೇರಿಯು ಹೊತ್ತಿದೆ. ನಿನ್ನೆ ಇಪ್ಪತ್ತು ಟ್ರಕ್‌ಗಳು ಈಜಿಪ್ಟಿನ ಟರ್ಮಿನಲ್ ಅನ್ನು ಪ್ರವೇಶಿಸಿದ್ದವು. ಪ್ಯಾಲೆಸ್ತೀನ್ ಕಡೆಯ 36 ಖಾಲಿ ಟ್ರೇಲರ್‌ಗಳು ಟರ್ಮಿನಲ್‌ಗೆ ಪ್ರವೇಶಿಸಿ ಈಜಿಪ್ಟಿನ ಕಡೆಗೆ ಹೋಗಿ, ನೆರವನ್ನು ಲೋಡ್ ಮಾಡಿಕೊಂಡು ರಫಾ ಗಡಿಯ ಮೂಲಕ ಗಾಜಾಗೆ ತೆರಳಿದವು.
ವಿಶ್ವಸಂಸ್ಥೆಯ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ರೂಜ ಶುಕ್ರವಾರ ಈಜಿಪ್ಟ್ ಕ್ರಾಸಿಂಗ್ ಬದಿಗೆ ಭೇಟಿ ನೀಡಿ ನೆರವು ವಿತರಣೆಯ ಸಿದ್ಧತೆಗಳನ್ನು ಮೇಲ್ವಿಚಾರಣೆ ಮಾಡಿದರು. ಇವು ಕೇವಲ ಟ್ರಕ್ಗಳಲ್ಲ, ಜೀವರಕ್ಷಕಗಳು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಇಸ್ರೇಲ್-ಹಮಾಸ್ ಯುದ್ಧದಲ್ಲಿ ಗಾಜಾದಲ್ಲಿ ಸುಮಾರು ಐದು ಸಾವಿರ ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ. ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಗಾಜಾದಲ್ಲಿ ವಿದ್ಯುತ್, ನೀರು ಮತ್ತು ಆಹಾರದ ತೀವ್ರ ಕೊರತೆ ಎದುರಾಗಿದೆ. ಮತ್ತೊಂದೆಡೆ, ಲೆಬನಾನ್-ಇಸ್ರೇಲ್ ಗಡಿಯಲ್ಲಿ ಇಸ್ರೇಲ್ ಬಾಂಬ್ ದಾಳಿಯಲ್ಲಿ ಹೆಜ್ಬುಲ್ಲಾ ಹೋರಾಟಗಾರ ಸಾವನ್ನಪ್ಪಿದ್ದಾನೆ ಮತ್ತು ಇನ್ನೊಬ್ಬ ಗಾಯಗೊಂಡಿದ್ದಾನೆ ಎಂದು ಶಿಯಾ ಮಿಲಿಟರಿ ಗುಂಪು ಹೇಳಿದೆ.












Click it and Unblock the Notifications