ತೆಲಂಗಾಣ: ಮುನಗೋಡು ಕ್ಷೇತ್ರ ಗೆಲ್ಲಲು ಹಣದ ಹೊಳೆಯೇ ಹರಿದಿದೆ?
ಹೈದರಾಬಾದ್, ಅಕ್ಟೋಬರ್ 17: ತೆಲಂಗಾಣದಲ್ಲಿ ಮುನಗೋಡು ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಕೋಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ ಅವರು ಬಿಜೆಪಿ ಸೇರಿದ್ದರಿಂದ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು ತಮ್ಮ ತಮ್ಮ ಗೆಲುವಿವಾಗಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಸ್ಥಳೀಯ ಬಿಆರ್‌ಎಸ್ ಪಕ್ಷದಿಂದ ಭಾರಿ ಪೈಪೋಟಿ ನಡೆಯುತ್ತಿದೆ. ಅಲ್ಲದೆ ಕ್ಷೇತ್ರವನ್ನು ಗೆಲ್ಲಲು ಅಪಾರ ಹಣದ ಹೊಳೆಯನ್ನೇ ಹರಿಸುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಮುನುಗೋಡು ಕ್ಷೇತ್ರದ ಉಪಚುನಾವಣೆ ಅತ್ಯಂತ ದುಬಾರಿ ಎನಿಸಿದ್ದು, ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಎರಡೂ ಪಕ್ಷಗಳು ಇದಕ್ಕೆ ಅಪಾರ ಹಣ ಖರ್ಚು ಮಾಡುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಪ್ರತಿ ಮತವನ್ನು 30,000 ದಿಂದ 40,000 ರೂಪಾಯಿಗೆ ಖರೀದಿಸಲಾಗುತ್ತಿದೆ ಎಂದು ಬಿಜೆಪಿ ಮತ್ತು ಟಿಆರ್‌ಎಸ್ ಎರಡೂ ಪರಸ್ಪರ ಆರೋಪಗಳನ್ನು ಮಾಡುತ್ತಿವೆ.
ಈ ಹಣದ ಹಾವಳಿಯನ್ನು ಎದುರಿಸಲು ಕಾಂಗ್ರೆಸ್ ವಿಫಲವಾಗಿದ್ದರೂ ಎರಡೂ ಪಕ್ಷಗಳು ಮತಕ್ಕಾಗಿ ಹಣ ಖರ್ಚು ಮಾಡಲು ಹಿಂಜರಿಯುತ್ತಿಲ್ಲ ಎಂದು ಮೂಲಗಳು ಹೇಳುತ್ತವೆ. ಮುನುಗೋಡು ಚುನಾವಣೆ ಮೂರೂ ಪಕ್ಷಗಳಿಗೆ ಈಗ ಪ್ರತಿಷ್ಠೆಯ ಕಣವಾಗಿದೆ. ಹಾಲಿ ಶಾಸಕ ಸ್ಥಾನದಲ್ಲಿರುವ ಈ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಆದರೆ ಬಿಜೆಪಿ ಮತ್ತು ಟಿಆರ್‌ಎಸ್‌ನಂತೆ ಖರ್ಚು ಮಾಡಲು ಯಾವುದೇ ಆರ್ಥಿಕ ಸಬಲತೆ ಇಲ್ಲ ಎನ್ನಲಾಗಿದೆ. ಇಲ್ಲಿ ಕಾಂಗ್ರೆಸ್‌ನಿಂದ ಹಣ ಖರ್ಚು ಮಾಡಲು ಪಕ್ಷ ಹಾಗೂ ಅಭ್ಯರ್ಥಿ ದಿಟ್ಟತನ ತೋರಿದ್ದಾರೆ.
ಮುನುಗೋಡು ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಕೋಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ ಅವರು ತಮ್ಮ ಕುಟುಂಬದ ಒಡೆತನದ ಕಂಪನಿಯು ಕೇಂದ್ರ ಸರ್ಕಾರದಿಂದ ₹ 18,000 ಕೋಟಿ ಗುತ್ತಿಗೆ ಕಾಮಗಾರಿ ಪಡೆದ ನಂತರ ಬಿಜೆಪಿ ಸೇರಿದ್ದಾರೆ ಎಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ನೇತೃತ್ವದ ಟಿಆರ್‌ಎಸ್ ಅಥಾರ್ತ್ ಬಿಆರ್‌ಎಸ್ ಆರೋಪಿಸಿದೆ. ರಾಜಗೋಪಾಲ್ ರೆಡ್ಡಿ ಅವರು ಬಿಜೆಪಿ ಸೇರಲು ಆಗಸ್ಟ್‌ನಲ್ಲಿ ಕಾಂಗ್ರೆಸ್ ತೊರೆದಿದ್ದರು. ಹೀಗಾಗಿ ಅಲ್ಲಿ ನವೆಂಬರ್ 3 ರಂದು ಉಪಚುನಾವಣೆ ನಡೆಯಲಿದೆ.
18,000 ಕೋಟಿ ಮೊತ್ತದ ಕಲ್ಲಿದ್ದಲು ಗಣಿ ಗುತ್ತಿಗೆಯನ್ನು ಪಡೆದು ಕೋಮಟಿರೆಡ್ಡಿ ರಾಜಗೋಪಾಲರೆಡ್ಡಿ ಅವರು ಕಾಂಗ್ರೆಸ್ ತೊರೆದು ಬಿಜೆಪಿಯನ್ನು ಸೇರಿದ್ದಾರೆ. ಹೀಗಾಗಿ ಅವರನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಬಿಆರ್‌ಎಸ್ ಇತ್ತೀಚೆಗೆ ಮನವಿ ಸಲ್ಲಿಸಿದೆ. ಬಿಆರ್‌ಎಸ್ ಪಕ್ಷದ ನಿಯೋಗವೊಂದು ಮುಖ್ಯ ಚುನಾವಣಾಧಿಕಾರಿ ವಿಕಾಸ್ ರಾಜ್ ಅವರನ್ನು ಭೇಟಿ ಮಾಡಿ ಕೋಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಅನರ್ಹ ಮಾಡುವಂತೆ ಮನವಿ ಸಲ್ಲಿಸಿತ್ತು.

ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದ ರೆಡ್ಡಿ
ಅಲ್ಲದೆ ಕೋಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ ಅವರು ಕಾಂಗ್ರೆಸ್‌ನಲ್ಲಿದ್ದಾಗ ಕಲ್ಲಿದ್ದಲು ಗಣಿಗಾರಿಕೆ ಗುತ್ತಿಗೆ ಪಡೆದಿರುವುದಾಗಿ ಟಿವಿ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಟಿಆರ್‌ಎಸ್ ಶಾಸಕರು ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದರು. ಇತ್ತೀಚಿನ ಟಿವಿ ಸಂದರ್ಶನವೊಂದರಲ್ಲಿ ರಾಜಗೋಪಾಲ್ ರೆಡ್ಡಿ ಅವರು ಮೂರು ವರ್ಷಗಳ ಹಿಂದೆ ಬಿಜೆಪಿ ಸೇರುವ ಇಂಗಿತವನ್ನು ವ್ಯಕ್ತಪಡಿಸಿದ್ದರು, ಆದರೆ ತಾವು ಇತ್ತೀಚೆಗೆ ಗುತ್ತಿಗೆ ಪಡೆದಿರುವುದಾಗಿ ಹೇಳಿದ್ದರು. ಬಿಜೆಪಿಗೆ ಸೇರುವ ಅವರ ರಾಜಕೀಯ ನಿರ್ಧಾರಕ್ಕೂ ಅವರ ವ್ಯವಹಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದ್ದರು.

18,000 ಕೋಟಿ ಬೃಹತ್ ಗುತ್ತಿಗೆ ಆರೋಪ
ಟಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ರಾಜಗೋಪಾಲ್ ರೆಡ್ಡಿಯ ವಿಡಿಯೋ ಕ್ಲಿಪ್ ಅನ್ನು ಟ್ವೀಟ್ ಮಾಡಿ, ಕ್ವೋ ಮುನುಗೋಡಿನ ಬಿಜೆಪಿ ಶಾಸಕ ಅಭ್ಯರ್ಥಿಯ ಬಹಿರಂಗ ತಪ್ಪೊಪ್ಪಿಗೆ ನೋಡಿ. ಅವರ ಒಡೆತನದ ಕಂಪನಿ ₹ 18,000 ಕೋಟಿ ಬೃಹತ್ ಗುತ್ತಿಗೆ ಪಡೆದಿದೆ ಮತ್ತು ಪ್ರತಿಯಾಗಿ ಅವರು ಬಿಜೆಪಿ ಸೇರುವ ಸಾಧ್ಯತೆಯಿದೆ. ಅವರ ಸಹೋದರ, ಕಾಂಗ್ರೆಸ್ ಸಂಸದರು ಅವರ ಹಾದಿಯಲ್ಲಿ ನಡೆಯಬಹುದು ಎಂದು ಬರೆದಿದ್ದರು.

ನವೆಂಬರ್ 3 ರಂದು ಉಪಚುನಾವಣೆ
ತೆಲಂಗಾಣದ ಮುನುಗೋಡು ವಿಧಾನಸಭಾ ಉಪಚುನಾವಣೆಗೆ 130 ಅಭ್ಯರ್ಥಿಗಳು ಈಗ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 14 ಕೊನೆಯ ದಿನವಾಗಿತ್ತು. ಚುನಾವಣಾ ಅಧಿಕಾರಿಗಳು ಅಕ್ಟೋಬರ್ 15ರಂದು ಪರಿಶೀಲನೆ ನಡೆಸಿದರೆ ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಅಕ್ಟೋಬರ್ 17. ನವೆಂಬರ್ 3 ರಂದು ನಡೆಯಲಿರುವ ಉಪಚುನಾವಣೆಗೆ ಮೂರು ಪ್ರಮುಖ ರಾಜಕೀಯ ಪಕ್ಷಗಳಾದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಅಭ್ಯರ್ಥಿಗಳಲ್ಲದೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್, ಸಣ್ಣ ಪಕ್ಷಗಳ ಸ್ಪರ್ಧಿಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ತಮ್ಮ ಪತ್ರಗಳನ್ನು ಸಲ್ಲಿಸಿದ್ದಾರೆ.

ಟಿಆರ್‌ಎಸ್‌ನಿಂದ ಕೆ.ಪ್ರಭಾಕರ್ ರೆಡ್ಡಿ ಕಣಕ್ಕೆ
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಕೋಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ ರಾಜೀನಾಮೆಯಿಂದ ಉಪಚುನಾವಣೆ ನಡೆಯುತ್ತಿದೆ. ಪ್ರಸ್ತುತ ಅವರು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. 2018ರ ಚುನಾವಣೆಯಲ್ಲಿ ರಾಜಗೋಪಾಲ್ ರೆಡ್ಡಿ ವಿರುದ್ಧ ಸೋತಿದ್ದ ಕೆ.ಪ್ರಭಾಕರ್ ರೆಡ್ಡಿ ಅವರನ್ನು ಆಡಳಿತಾರೂಢ ಟಿಆರ್‌ಎಸ್ ಕಣಕ್ಕಿಳಿಸಿದೆ. ಪ್ರಭಾಕರ ರೆಡ್ಡಿ ಅವರು 2014 ರಲ್ಲಿ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಕಾಂಗ್ರೆಸ್ ಪಕ್ಷವು ಮಹಿಳಾ ನಾಯಕಿ ಪಾಲ್ವಾಯಿ ಶ್ರವಂತಿ ಅವರನ್ನು ಕಣಕ್ಕಿಳಿಸಿದೆ.












Click it and Unblock the Notifications