ಬಿಬಿಸಿ ಬುಡಕ್ಕೆ ಐಟಿ ಬತ್ತಿ, ಕಡೆಗೂ ತಪ್ಪು ಒಪ್ಪಿಕೊಂಡ BBC?
ನವದೆಹಲಿ: ಕಳೆದ ಕೆಲ ತಿಂಗಳಿಂದ ಬಿಬಿಸಿ ಹಾಗೂ ಕೇಂದ್ರ ಸರ್ಕಾರದ ನಡುವೆ ನಡೆಯುತ್ತಿರುವ ತಿಕ್ಕಾಟಕ್ಕೆ ಕೊನೇ ಮೊಳೆ ಬಿದ್ದಿದೆ. ತಾನು 40 ಕೋಟಿ ರೂಪಾಯಿ ಆದಾಯ ಮುಚ್ಚಿಟ್ಟಿದ್ದು ನಿಜ ಅಂತಾ ಕೊನೆಗೂ ಬಿಬಿಸಿ ಒಪ್ಪಿದೆಯಂತೆ. ಹಾಗಾದ್ರೆ ಬಿಬಿಸಿ ತಪ್ಪು ಮಾಡಿದ್ದು ನಿಜವಾ? ಹಾಗಾದ್ರೆ ಬಿಬಿಸಿ ಹೇಳಿದ್ದೇನು? ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ (BBC India).
ಹೌದು, ಬಿಬಿಸಿ ತಾನು 40 ಕೋಟಿ ರೂಪಾಯಿಯಷ್ಟು ಆದಾಯವನ್ನು ಮುಚ್ಚಿಟ್ಟಿದ್ದು ನಿಜ ಎಂಬ ವಿಚಾರವನ್ನು ಒಪ್ಪಿಕೊಂಡಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಈ ಕುರಿತಾಗಿ ಕೇಂದ್ರೀಯ ನೇರ ತೆರಿಗೆ ಮಂಡಳಿಗೆ (ಸಿಬಿಡಿಟಿ) ಇಮೇಲ್ ಕಳಿಸಿದೆ. ಈ ಬಗ್ಗೆ ಐಟಿ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ 'ಹಿಂದೂಸ್ತಾನ್ ಟೈಮ್ಸ್' ಪತ್ರಿಕೆ ವರದಿ ಮಾಡಿದೆ. ಹಾಗಾದ್ರೆ ಈ ವಿಚಾರದಲ್ಲಿ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದ ವಿಪಕ್ಷ ನಾಯಕರಿಗೆ ಈಗ ಮುಖಭಂಗ ಆಯ್ತಾ? ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ ಬನ್ನಿ (BBC India Tax).

ವಿರೋಧ ಪಕ್ಷಗಳ ಆರೋಪ ಠುಸ್?
ಅಂದಹಾಗೆ ಕೆಲ ತಿಂಗಳ ಹಿಂದಷ್ಟೇ ಬಿಬಿಸಿ ಸಂಸ್ಥೆಯ ಭಾರತದ ಕಚೇರಿಗಳಲ್ಲಿ ಐಟಿ ಅಧಿಕಾರಿಗಳು ಸರ್ಚಿಂಗ್ ನಡೆಸಿದ್ದರು. ಆದರೆ ಈ ಘಟನೆ ಹಿಂದೆ ರಾಜಕೀಯ ಷಡ್ಯಂತ್ರ ಇದೆ ಎನ್ನುವ ಆರೋಪ ಕೇಳಿಬಂದಿತ್ತು. ಬಿಬಿಸಿ ವಿರುದ್ಧ ತೆರಿಗೆ ವಂಚನೆ ನಡೆದಿರುವ ಬಗ್ಗೆ ಐಟಿಗೆ ಬಲವಾದ ಮಾಹಿತಿ ಇದ್ದ ಕಾರಣಕ್ಕೆ ರೇಡ್ ನಡೆದಿತ್ತು ಎನ್ನಲಾಗಿತ್ತು. ಆದರೆ ವಿರೋಧ ಪಕ್ಷಗಳ ನಾಯಕರು ಕೂಡ ಇದೇ ವಿಚಾರ ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈಗ ಅದಕ್ಕೆಲ್ಲಾ ಉತ್ತರ ಬಹುತೇಕ ಸ್ಪಷ್ಟವಾಗದಂತೆ ಕಾಣುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕು ಅಷ್ಟೇ.
ಬಿಬಿಸಿ ಇಮೇಲ್‌ಗೆ ಐಟಿ ಉತ್ತರ?
ಮತ್ತೊಂದ್ಕಡೆ ತಮಗೆ ಇಮೇಲ್ ಮೂಲಕ ಆದಾಯ ತೆರಿಗೆ ಕುರಿತು ಮಾಹಿತಿ ನೀಡಿರುವ ಬಿಬಿಸಿ ಸಂಸ್ಥೆಗೆ ಐಟಿ ಇಲಾಖೆಯು ಉತ್ತರ ನೀಡಿದೆಯಂತೆ. ಸುಮಾರು 40 ಕೋಟಿ ರೂಪಾಯಿಯಷ್ಟು ಆದಾಯ ಮುಚ್ಚಿಟ್ಟಿರುವ ಬಗ್ಗೆ ಕಳುಹಿಸಿರುವ ಇಮೇಲ್ ಕುರಿತು ಐಟಿ ಇಲಾಖೆ ಉತ್ತರ ನೀಡಿದೆ. ಇಮೇಲ್ ಕಳುಹಿಸಿದರೆ ಅದು ಕಾನೂನಾತ್ಮಕ ಎಂದು ಪರಿಗಣಿಸಲು ಆಗಲ್ಲ. ಹೀಗಾಗಿ ಪರಿಷ್ಕೃತ ಐಟಿ ರಿಟರ್ನ್ಸ್ ಅರ್ಜಿಯನ್ನು ಸಲ್ಲಿಸಬೇಕಿದೆ. ಹಾಗೇ ಬಾಕಿ ತೆರಿಗೆ, ಬಡ್ಡಿ, ದಂಡವನ್ನು ಪಾವತಿ ಮಾಡಬೇಕು ಎಂದು ಐಟಿ ಇಲಾಖೆ ತಿಳಿಸಿದೆ ಎಂದು ವರದಿಯಾಗಿದೆ. ಈ ಮೂಲಕ ಬಿಬಿಸಿಯ ಮೇಲೆ ಐಟಿ ರೇಡ್ ವಿಚಾರ ಮತ್ತೊಂದು ತಿರುವು ಪಡೆಯುತ್ತಿರುವ ರೀತಿ ಕಾಣುತ್ತಿದೆ.
ರಾಜಕೀಯ ಪಿತೂರಿ ಆರೋಪ ಕೇಳಿಬಂದಿತ್ತು!
ಅಂದಹಾಗೆ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ಸಂಸ್ಥೆ ಬ್ರಿಟನ್ ಮೂಲದ್ದು. ಇದನ್ನ ಶಾರ್ಟ್ ಆಗಿ ಬಿಬಿಸಿ ಎಂದು ಕರೆಯಲಾಗುತ್ತದೆ. ಜಗತ್ತಿನಾದ್ಯಂತ ತನ್ನದೇ ದೊಡ್ಡ ಸುದ್ದಿಜಾಲ ಹೊಂದಿರುವ ಈ ಸಂಸ್ಥೆ ಜಗತ್ತಿನಾದ್ಯಂತ ಹೆಸರು ಮಾಡಿದೆ. ಆದರೆ 2023ರ ಫೆಬ್ರವರಿಯಲ್ಲಿ ಈ ಸಂಸ್ಥೆಗಳ ಮೇಲೆ ಭಾರತದಲ್ಲಿ ಐಟಿ ರೇಡ್ ಆಗಿತ್ತು. ದೆಹಲಿ & ಮುಂಬೈನ ಬಿಬಿಸಿ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ತೆರಿಗೆ ವಂಚನೆ ಆರೋಪದ ಹಿನ್ನೆಲೆ ಈ ಕ್ರಮ ಜರುಗಿಸಲಾಗಿದೆ ಎಂದು ಐಟಿ ಇಲಾಖೆ ಹೇಳಿಕೆ ನೀಡಿತ್ತು. ಆದ್ರೆ ಪರಿಶೀಲನೆಯ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ವಿಪಕ್ಷಗಳು ಆರೋಪ ಮಾಡಿದ್ದವು.

ಒಟ್ನಲ್ಲಿ ಎಲ್ಲಾ ಆರೋಪ, ಪ್ರತ್ಯಾರೋಪದ ಮಧ್ಯೆ ಬಿಬಿಸಿ ಸಂಸ್ಥೆ ನೀಡಿದೆ ಎನ್ನಲಾದ ಹೇಳಿಕೆ ಸಂಚಲನ ಸೃಷ್ಟಿಸಿದೆ. ಆದರೆ ಈ ಕುರಿತು ಈವರೆಗೂ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಅಧಿಕೃತ ಮಾಹಿತಿ ಸಿಕ್ಕ ಬಳಿಕ ವಿರೋಧ ಪಕ್ಷಗಳು ಮಾಡಿದ್ದ ಆರೋಪಕ್ಕೆ, ಆಡಳಿತ ಪಕ್ಷವಾದ ಬಿಜೆಪಿ ನಾಯಕರು ಉತ್ತರ ನೀಡುವುದು ಗ್ಯಾರಂಟಿ. ಈ ಮೂಲಕ ಮತ್ತೊಂದು ಸುತ್ತಿನ ದಾಳಿ, ವಾಗ್ದಾಳಿಗೆ ವಿಪಕ್ಷ & ಆಡಳಿತ ಪಕ್ಷಗಳ ನಾಯಕರು ಸಜ್ಜಾಗುತ್ತಿರುವದು ಬಹುತೇಕ ಪಕ್ಕಾ.











Click it and Unblock the Notifications