ನಿಮ್ಮ ಮನೆಗೆ ಟ್ರೈನ್ ಟಿಕೆಟ್ ತಲುಪಿಸುತ್ತೇವೆ : ಐಆರ್ ಸಿಟಿಸಿ
ಹತ್ತು ಹಲವು ಹೊಸ ಸೌಲಭ್ಯಗಳನ್ನು ನೀಡುತ್ತಾ ಪ್ರಯಾಣಿಕರಿಗೆ ಅನುಕೂಲ ಒದಗಿಸುತ್ತಿರುವ ಭಾರತೀಯ ರೈಲ್ವೆಯ ಐಆರ್ ಟಿಸಿಟಿ ವೆಬ್ ತಾಣದಲ್ಲಿ ಇನ್ಮುಂದೆ ಟಿಕೆಟ್ ಬುಕ್ ಮಾಡಿ, ಮನೆಗೆ ಟಿಕೆಟ್ ತರಿಸಿಕೊಳ್ಳಿ
ನವದೆಹಲಿ, ಮೇ 10 : ಹತ್ತು ಹಲವು ಹೊಸ ಸೌಲಭ್ಯಗಳನ್ನು ನೀಡುತ್ತಾ ಪ್ರಯಾಣಿಕರಿಗೆ ಅನುಕೂಲ ಒದಗಿಸುತ್ತಿರುವ ಭಾರತೀಯ ರೈಲ್ವೆಯ ಐಆರ್ ಟಿಸಿಟಿ ವೆಬ್ ತಾಣದಲ್ಲಿ ಇನ್ಮುಂದೆ ಟಿಕೆಟ್ ಬುಕ್ ಮಾಡಿ, ಮನೆಗೆ ಟಿಕೆಟ್ ತರಿಸಿಕೊಳ್ಳಬಹುದು.
ಐಆರ್ಸಿಟಿಸಿ 'ಪೇ ಆನ್ ಆರ್ಡರ್' ಎಂಬ ಹೊಸ ಸೌಲಭ್ಯದ ಮೂಲಕ ಪ್ರಯಾಣಿಕರು ಆನ್ಲೈನ್ನಲ್ಲಿ ಬುಕ್ ಮಾಡಿ, ತಮ್ಮ ಮನೆಗೆ ಟಿಕೆಟ್ ತರಿಸಿಕೊಳ್ಳಬಹುದು, ಈ ಸೌಲಭ್ಯ Cash on Delivery ಮಾದರಿಯಾಗಿದ್ದು, ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲಕರವಾಗಿದೆ.

ಅದರಲ್ಲೂ ಸಣ್ಣ ನಗರಗಳಲ್ಲಿ ವಾಸಿಸುತ್ತಿರುವವರಿಗೆ ತುಂಬ ಅನುಕೂಲಕರವಾದುದಾಗಿದೆ. ಇ-ಟಿಕೆಟ್ಗಳನ್ನು ಬುಕಿಂಗ್ ಮಾಡುವಾಗ ಬಹುತೇಕರು ತಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್ ವಿವರಗಳನ್ನು ನಮೂದಿಸಲು ಹಿಂಜರಿಯುವ ಕಾರಣ ಈ ಉಪಕ್ರಮವನ್ನು ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ. ಇದು ಆನ್ಲೈನ್ ಮೂಲಕ ಟಿಕೆಟ್ ಕಾಯ್ದಿರಿಸಲು ಪ್ರಯಾಣಿಕರಿಗೆ ಪ್ರೋತ್ಸಾಹ ನೀಡುತ್ತದೆ ಎನ್ನಲಾಗಿದೆ.
ಐಆರ್ಸಿಟಿಸಿ ಮೊದಲ ಹಂತದಲ್ಲಿ ಈ ಸೇವೆಯನ್ನು 600 ನಗರ ಹಾಗೂ ಪಟ್ಟಣಗಳಿಗೆ ಒದಗಿಸುತ್ತಿದೆ. ಮನೆಬಾಗಿಲಿಗೆ ಟಿಕೆಟ್ ತಲುಪಿದ ಮೇಲೆ ಹಣ ಪಾವತಿಸುವ ಸೌಲಭ್ಯ ಪಡೆಯಲು ಬಯಸುವ ಗ್ರಾಹಕರು ಆಧಾರ್ ಅಥವಾ ಪಾನ್ಕಾರ್ಡ್ ಸಲ್ಲಿಸಿ ವೆಬ್ಸೈಟ್ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ರೂ. 5000 ಬೆಲೆಯ ಟಿಕೆಟ್ನ ಡೆಲಿವರಿ ಶುಲ್ಕವಾಗಿ ರೂ. 90 ಹಾಗೂ ಸೇವಾ ತೆರಿಗೆ ಪಾವತಿಸಬೇಕಾಗುತ್ತದೆ. ಟಿಕೆಟ್ ಮೌಲ್ಯ ರೂ. 5000 ಮೀರಿದಲ್ಲಿ ಡೆಲಿವರಿ ಶುಲ್ಕ ರೂ. 120 ಆಗಿರುತ್ತದೆ. ಟಿಕೆಟ್ ಮನೆಬಾಗಿಲಿಗೆ ಬಂದ ಮೇಲೆ ಅದನ್ನು ತಿರಸ್ಕರಿಸಲು/ರದ್ದುಪಡಿಸಲು ತಗುಲುವ ಶುಲ್ಕ ಪಾವತಿಸಬೇಕಾಗುತ್ತದೆ. ತಪ್ಪಿದಲ್ಲಿ ಅಂತಹವರ ಯೂಸರ್ ಐಡಿಯನ್ನು ನಿಷ್ಕ್ರಿಯಗೊಳಿಸಲಾಗುವುದಲ್ಲದೆ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ಐಆರ್ಸಿಟಿಸಿ ಪ್ರಕಟಣೆ ತಿಳಿಸಿದೆ.












Click it and Unblock the Notifications