ರೈಲ್ವೆ ಹೋಟೆಲ್ ಹಗರಣ: ಲಾಲೂ ಕುಟುಂಬಕ್ಕೆ ಸಮನ್ಸ್
ನವದೆಹಲಿ, ಜುಲೈ 30: ಭಾರತೀಯ ರೈಲ್ವೆಯ (ಐಆರ್‌ಸಿಟಿಸಿ) ಹೋಟೆಲ್ ಹಗರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಖಾತೆ ಮಾಜಿ ಸಚಿವ, ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್, ಅವರ ಪತ್ನಿ ರಾಬ್ಡಿ ದೇವಿ ಮತ್ತು ತೇಜಸ್ವಿ ಯಾದವ್ ಸೇರಿದಂತೆ ಉಳಿದ ಆರೋಪಿಗಳಿಗೆ ದೆಹಲಿ ನ್ಯಾಯಾಲಯವೊಂದು ಸೋಮವಾರ ಸಮನ್ಸ್ ನೀಡಿದೆ.
ಮೇವು ಹಗರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿ ಈಗಾಗಲೇ ಜೈಲುಶಿಕ್ಷೆಗೆ ಗುರಿಯಾಗಿರುವ ಲಾಲೂ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಸದ್ಯ ಅನಾರೋಗ್ಯದ ಕಾರಣದಿಂದ ಲಾಲೂ ಪ್ರಸಾದ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿದ್ದ ದೋಷಾರೋಪವನ್ನು ಪರಿಗಣಿಸಿರುವ ನ್ಯಾಯಾಲಯ ಸಮನ್ಸ್ ಹೊರಡಿಸಿದ್ದು, ಆಗಸ್ಟ್ 31ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿದೆ.
ಎಲ್ಲ ಆರೋಪಿಗಳ ವಿರುದ್ಧವೂ ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯ ಇವೆ ಎಂದು ಸಿಬಿಐ ಏಪ್ರಿಲ್ 16ರಂದು ಸಿಬಿಐ ಸಲ್ಲಿಸಿದ್ದ ದೋಷಾರೋಪದಲ್ಲಿ ಹೇಳಿತ್ತು.
ಲಾಲೂ, ರಾಬ್ಡಿ ದೇವಿ ಮತ್ತು ತೇಜಸ್ವಿ ಯಾದವ್ ಅವರಲ್ಲದೆ, ದೆಹಲಿ ಮೂಲದ ಖಾಸಗಿ ಕಂಪೆನಿ, ಖಾಸಗಿ ಹೋಟೆಲ್ ಕಂಪೆನಿಯೊಂದರ ಇಬ್ಬರು ನಿರ್ದೇಶಕರು, ಒಬ್ಬ ಖಾಸಗಿ ವ್ಯಕ್ತಿ, ಐಆರ್‌ಸಿಟಿಯ ಹಿಂದ ವ್ಯವಸ್ಥಾಪಕ ನಿರ್ದೇಶಕ, ಒಬ್ಬ ಸಂಸದ ಹಾಗೂ ಐಆರ್‌ಸಿಟಿಸಿ ಅಡಿಯಲ್ಲಿರುವ ವಿವಿಧ ಇಲಾಖೆಗಳಲ್ಲಿನ ಇತರೆ ಅಧಿಕಾರಿಗಳ ವಿರುದ್ಧ ದೋಷಾರೋಪ ಸಲ್ಲಿಸಲಾಗಿತ್ತು.
ಲಾಲೂ ಅವರು ರೈಲ್ವೆ ಸಚಿವರಾಗಿದ್ದ 2004-2009ರ ಅವಧಿಯಲ್ಲಿ ರಾಂಚಿ ಮತ್ತು ಪುರಿಯಲ್ಲಿ ಐಆರ್‌ಸಿಟಿಸಿ ಹೋಟೆಲ್‌ಗಳ ನಿರ್ವಹಣೆಯ ಗುತ್ತಿಗೆಯನ್ನು ಖಾಸಗಿ ಕಂಪೆನಿಯೊಂದಕ್ಕೆ ನೀಡುವಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಲಾಗಿದೆ.












Click it and Unblock the Notifications