ಐಫೋನ್ ಸಿರಿ 'ಜೈ ಶ್ರೀರಾಮ್’ಗೆ ಪ್ರತಿಕ್ರಿಯಿಸಲಿಲ್ಲ ಎಂದು ಕೋಪಗೊಂಡ ವ್ಯಕ್ತಿ ಮಾಡಿದ್ದೇನು? ಇಲ್ಲಿದೆ ವೈರಲ್ ವಿಡಿಯೋ
ಸಾಮಾನ್ಯವಾಗಿ ಯಾರಾದರೂ ಒಂದು ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಸಾಮಾಜಿಕ ಜಾಲತಾಣದಲ್ಲಿ ವಾಕ್ಸಮರಗಳೇ ನಡೆದುಬಿಡುತ್ತವೆ. ಆದರೆ ಇದೀಗ ವಿಚಿತ್ರ ಎಂಬಂತೆ 'ಐಫೋನ್ನ ಸಿರಿ' ಹಿಂದೂ ಧರ್ಮದ ವಿರುದ್ಧ ಇದೆ ಎನ್ನುವ ಆರೋಪ ಕೇಳಿಬಂದಿದೆ. ಈ ಕುರಿತ ವಿಡಿಯೋ ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಆಗಿದ್ದೇನು ಎನ್ನು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಾಮಾಜಿಕ ಜಾಲತಾಣದಲ್ಲಿ ಸದಾ ಒಂದಿಲ್ಲೊಂದು ವಿವಾದಾತ್ಮಕ ವಿಷಯಗಳು ಮುಂಚೂಣಿಗೆ ಬರುತ್ತಲೇ ರುತ್ತವೆ. ಇದೀಗ ಜಾಗತಿಕ ತಂತ್ರಜ್ಞಾನ ದೈತ್ಯ 'ಆಪಲ್' ಸಂಸ್ಥೆಯ ಐಫೋನ್ ಹೊಸದೊಂದು ವಿವಾದದ ಸುಳಿಗೆ ಸಿಲುಕಿದೆ. ಇಂಟರ್ನೆಟ್ನಲ್ಲಿ ಸದ್ಯ ಚರ್ಚೆಗೆ ಗ್ರಾಸವಾಗಿರುವ ಈ ವಿಷಯಕ್ಕೆ ನೆಟ್ಟಿಗರು ಐಫೋನ್ ಜಿಹಾದ್ ಎಂಬ ಹೊಸ ಹೆಸರನ್ನು ನೀಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ವಿಡಿಯೋದಲ್ಲಿ ಏನಿದೆ?
ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಆಪಲ್ ಐಫೋನ್ನ ಧಾರ್ಮಿಕ ತಾರತಮ್ಯವನ್ನು ಬಯಲು ಮಾಡುವುದಾಗಿ ಹೇಳಿದ್ದಾರೆ. ಐಫೋನ್ನ ಪ್ರಮುಖ ವಾಯ್ಸ್ ಅಸಿಸ್ಟೆಂಟ್ ಫೀಚರ್ ಆದ ಸಿರಿ ಕೇವಲ ಮುಸ್ಲಿಮರ ಧಾರ್ಮಿಕ ವಂದನೆಗೆ ಮಾತ್ರ ಧ್ವನಿ ನೀಡುತ್ತದೆ, ಆದರೆ ಹಿಂದೂಗಳ ಪವಿತ್ರ ಘೋಷಣೆಗಳಿಗೆ ಮೌನ ವಹಿಸುತ್ತದೆ ಎಂದು ವ್ಯಕ್ತಿಯೊಬ್ಬರು ವಿಡಿಯೋ ಮೂಲಕ ಗಂಭೀರ ಆರೋಪ ಮಾಡಿದ್ದಾರೆ.
ಅವರು ತಮ್ಮ ಐಫೋನ್ನಲ್ಲಿ ಸಿರಿ ಆಪ್ಷನ್ ಆನ್ ಮಾಡಿ ಮುಸ್ಲಿಂ ಸಮುದಾಯದ ಸಾಂಪ್ರದಾಯಿಕ ಗ್ರೀಟಿಂಗ್ ಆದ ಅಸ್ಸಲಾಮ್ ಅಲೈಕುಂ ಎಂದು ಹೇಳುತ್ತಾರೆ. ಅದಕ್ಕೆ ಸಿರಿ ತಕ್ಷಣವೇ ಮರುಪ್ರತಿಕ್ರಿಯೆ ನೀಡುತ್ತದೆ. ಆದರೆ ಅದೇ 'ಸಿರಿ' 'ಜೈ ಶ್ರೀರಾಮ್' ಎಂದು ಹೇಳಿದಾಗ, ಅದು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಮೌನವಾಗಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ಐಫೋನ್ ಬಹಿಷ್ಕಾರಕ್ಕೆ ಕರೆ
ಈ ತಾಂತ್ರಿಕ ವ್ಯತ್ಯಾಸವನ್ನು ಧಾರ್ಮಿಕ ತಾರತಮ್ಯ ಎಂದು ಬಿಂಬಿಸಿರುವ ಈ ವ್ಯಕ್ತಿ, 'ಐಫೋನ್ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಮತ್ತು ನಂಬಿಕೆಗಳಿಗೆ ಕಿಂಚಿತ್ತೂ ಗೌರವ ನೀಡುತ್ತಿಲ್ಲ. ಆದ್ದರಿಂದ ದೇಶದ ಯಾವುದೇ ಹಿಂದೂಗಳು ಇನ್ಮುಂದೆ ಆಪಲ್ ಐಫೋನ್ ಬಳಸಬಾರದು,' ಎಂದು ಹೇಳಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಅಷ್ಟೇ ಅಲ್ಲದೆ, 'ಭಾರತದ ಕೋಟ್ಯಂತರ ಹಿಂದೂಗಳು ಮುಗಿಬಿದ್ದು ಐಫೋನ್ಗಳನ್ನು ಖರೀದಿ ಮಾಡುತ್ತಿದ್ದಾರೆ. ಈ ಮೂಲಕ ನಿಮ್ಮ ಅತ್ಯಂತ ಸೂಕ್ಷ್ಮ ಹಾಗೂ ವೈಯಕ್ತಿಕ ಡೇಟಾಗಳನ್ನು ನೀವೇ ಸ್ವತಃ ವಿದೇಶಿ ಕಂಪನಿಯ ಕೈಗೆ ಒಪ್ಪಿಸುತ್ತಿದ್ದೀರ,' ಎಂದು ಭದ್ರತೆಯ ಕುರಿತಾಗಿಯೂ ಆಕ್ರೋಶ ಹೊರಹಾಕಿದ್ದಾರೆ.
ಪರ-ವಿರೋಧದ ಚರ್ಚೆ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದು, ನೆಟ್ಟಿಗರು ಪರ-ವಿರೋಧದ ಚರ್ಚೆಗಳನ್ನು ಆರಂಭಿಸಿದ್ದಾರೆ. ಒಂದು ಗುಂಪು ಆಪಲ್ ಸಂಸ್ಥೆಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದರೆ, ಮತ್ತೊಂದು ವಲಯ ಇದನ್ನು ಕೇವಲ ತಾಂತ್ರಿಕ ದೋಷ ಹಾಗೂ ಮಿತಿ ಎಂದು ಹೇಳುತ್ತಿದೆ.
ತಜ್ಞರು ಹೇಳೋದೇನು?
ತಂತ್ರಜ್ಞಾನ ಕ್ಷೇತ್ರದ ತಜ್ಞರ ಪ್ರಕಾರ, ಆಪಲ್ನ 'ಸಿರಿ' ಅಥವಾ ಗೂಗಲ್ನ ಅಸಿಸ್ಟೆಂಟ್ನಂತಹ ವಾಯ್ಸ್ ಫೀಚರ್ಗಳು ಯಾವುದೇ ಧಾರ್ಮಿಕ ಒಲವು ಅಥವಾ ತಾರತಮ್ಯವನ್ನು ಹೊಂದಿರುವುದಿಲ್ಲ. ಇವು ಕೇವಲ ಮುಂಚಿತವಾಗಿ ಸಿಸ್ಟಮ್ನಲ್ಲಿ ಫೀಡ್ ಮಾಡಲಾದ ಜಾಗತಿಕ ಭಾಷಾ ಶೈಲಿ, ಪ್ರಮುಖ ಗ್ರೀಟಿಂಗ್ಸ್ ಹಾಗೂ ನಿಘಂಟಿನಲ್ಲಿರುವ ಪದಗಳಿಗೆ ಮಾತ್ರ ಸ್ಪಂದಿಸುತ್ತವೆ. 'ಅಸ್ಸಲಾಮ್ ಅಲೈಕುಂ' ಎನ್ನುವುದು ಜಾಗತಿಕವಾಗಿ ಕೋಟ್ಯಂತರ ಜನರು ಬಳಸುವ ಸಾಮಾನ್ಯ ವಂದನೆಯಾಗಿ ಸಾಫ್ಟ್ವೇರ್ನಲ್ಲಿ ದಾಖಲಾಗಿರುವುದರಿಂದ ಸಿರಿ ಅದಕ್ಕೆ ಪ್ರತಿಕ್ರಿಯಿಸುತ್ತದೆ.
" iPhone is against the culture of India & hurts Hindu sentiments because SIRI gives replies to ' "Assalamualaikum" but remains silent on "Jai Shri Ram"
— Nehr_who? (@Nher_who) July 1, 2026
Imagine your faith getting hurt coz AI didn't say JAI Shri Ram
The level of inferiority complex 😭 pic.twitter.com/5wUw0rcp7U
ಆದರೆ ಪ್ರಾದೇಶಿಕ ಅಥವಾ ಧಾರ್ಮಿಕ ಘೋಷಣೆಗಳನ್ನು ಸಾಫ್ಟ್ವೇರ್ ಅಪ್ಡೇಟ್ಗಳಲ್ಲಿ ಇನ್ನು ಪೂರ್ಣ ಪ್ರಮಾಣದಲ್ಲಿ ಸೇರಿಸದೇ ಇರುವುದೇ ಈ ಮೌನಕ್ಕೆ ಕಾರಣ. ಇದನ್ನಯ ಹೊರತುಪಡಿಸಿ ಇದರ ಹಿಂದೆ ಯಾವುದೇ ರೀತಿಯ ವ್ಯವಸ್ಥಿತ ಪಿತೂರಿ ಇಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications