ಉಗ್ರವಾದ ಬಿತ್ತುತ್ತಿದ್ದವನಿಗೆ ಸುರತ್ಕಲ್ ನಂಟಿತ್ತೆ?
ಬೆಂಗಳೂರು, ಡಿಸೆಂಬರ್, 17: ಐಎಸ್ ಐಎಸ್ ಉಗ್ರಗಾಮಿ ಸಂಘಟನೆಯ ಭಾರತದ ಕಾರ್ಯಚಟುವಟಿಕೆ ಮೇಲೆ ನಿರಂತರ ತನಿಖೆ ಮಾಡುತ್ತಿರುವ ರಾಜಸ್ಥಾನದ ಉಗ್ರಗಾಮಿ ಪ್ರತಿರೋಧ ತಂಡ ಆತಂಕಕಾರಿ ಮಾಹಿತಿಯೊಂದನ್ನು ಹೊರಹಾಕಿದೆ. ಇದರಲ್ಲಿ ನಮ್ಮ ರಾಜ್ಯದ ಸುರತ್ಕಲ್ ಹೆಸರು ಕೇಳಿ ಬಂದಿದೆ.
ಕರ್ನಾಟಕ ಮತ್ತು ದಕ್ಷಿಣ ಭಾರತದಲ್ಲಿ ಐಎಸ್ ಐಎಸ್ ಸಂಘಟನೆಗೆ ಜನರನ್ನು ಸೆಳೆಯುವುದು ಮತ್ತು ಯುವಕರ ಮನಸ್ಥಿತಿ ಬದಲಾವಣೆ ಮಾಡುವುದನ್ನು ಸುರತ್ಕಲ್ ಕಾಲೇಜಿನಲ್ಲಿ ಇದ್ದಾಗಲೇ ಆರಂಭ ಮಾಡಿದ್ದೆ ಎಂದು ಇಂಡಿಯನ್ ಆಯಿಲ್ ಕಂಪನಿಯ ಉದ್ಯೋಗಿ ಐಎಸ್ ಐಎಸ್ ಬೆಂಬಲಿಗ ಮೊಹಮದ್ ಸಿರಾಜುದ್ದೀನ್ ಹೇಳಿದ್ದಾನೆ.[ಸಿರಾಜುದ್ದೀನ್ ಬಳಿ ಇತ್ತು 12 ಸಾವಿರ ಪುಟದ ದಾಖಲೆ!]

ಕಳೆದ ಎರಡು ವಾರಗಳ ಹಿಂದೆ ಸಿರಾಜುದ್ದೀನ್ ನನ್ನು ಜೈಪುರದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ತನ್ನ ಸಾಮಜಿಕ ಜಾಲತಾಣದ ಮುಖೇನ ಧಾರ್ಮಿಕ ಭಾವನೆ ಕೆರಳಿಸುವಂತಹ ಅಂಶಗಳನ್ನು ಹಾಕುತ್ತಿದ್ದ ಆರೋಪದ ಮೇಲೆ ಬಂಧನ ಮಾಡಲಾಗಿತ್ತು. ಇದಾದ ನಂತರ ಆತನನ್ನು ರಾಷ್ಟ್ರೀಯ ತನಿಖಾ ದಳ, ಗುಪ್ತಚರ ದಳ ಸಹ ಪ್ರಶ್ನೆ ಮಾಡಿದ್ದವು.
ಸುರತ್ಕಲ್ ನಿಂದ ಆರಂಭ?
ಕರ್ನಾಟಕ ಮೂಲದ ಸಿರಾಜುದ್ದೀನ್ ದಕ್ಷಿಣ ಕನ್ನಡ ಜಿಲ್ಲೆ ಸುರತ್ಕಲ್ ನ ಕಾಲೇಜೊಂದರಲ್ಲಿ ಅಧ್ಯಯನ ಮಾಡುತ್ತಿದ್ದ ವೇಳೆಯೇ ಜನರಲ್ಲಿ ಉಗ್ರವಾದ ಬಿತ್ತಲು ಆರಂಭ ಮಾಡಿದ್ದ. ಆದರೆ ಕರ್ನಾಟಕದಲ್ಲಿ ಆತನ ಮೇಲೆ ಯಾವುದೇ ಪ್ರಕರಣ ದಾಖಲಾದ ಮಾಹಿತಿ ಇಲ್ಲ.
ಕಾಲೇಜಿನಲ್ಲೆ ಇದ್ದಾಗ ಧರ್ಮದ ವಿಷಭಾವನೆ ಬಿತ್ತುವ ಸಂದೇಶಗಳನ್ನು ರವಾನೆ ಮಾಡುತ್ತಿದ್ದ. ನಿರಂತರ ಐದು ವರ್ಷಗಳ ಕಾಲದಿಂದ ಈ ಬಗೆಯ ಕೆಲಸವನ್ನು ಮಾಡೊಕೊಂಡು ಬಂದಿದ್ದ. ಧಾರ್ಮಿಕ ಸೂಕ್ಷ್ಮಗಳನ್ನು ಇಟ್ಟುಕೊಂಡು ಸಹಪಾಠಿಗಳ, ಯುವಕರ ಮನಸ್ಸನ್ನು ಚಂಚಲ ಮಾಡಲು ಯತ್ನ ನಡೆಸುತ್ತಿದ್ದ ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.
30 ವರ್ಷದ ಸಿರಾಜುದ್ದೀನ್ ಇತ್ತೀಚೆಗೆ ಹೆಚ್ಚು ಕ್ರಿಯಾಶೀಲನಾಗಿದ್ದ. ಐಎಸ್ ಐಎಸ್ ನಿರ್ದೇಶಿತ ದಬಿಖ್ವ್ ಎಂಬ ಪತ್ರಿಕೆಗೆಯೊಂದರ ಪರವಾಗಿ ಕೆಲಸ ಮಾಡುತ್ತಿದ್ದ ಎಂಬ ಸಂಗತಿ ವಿಚಾರಣೆ ವೇಳೆ ತಿಳಿದುಬಂದಿದೆ.
ಏನೂ ಅರಿಯದ ಮುಗ್ಧ!
ಇಂಡಿಯನ್ ಆಯಿಲ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಯಾವ ವಿಚಾರಗಳನ್ನು ಮಾತನಾಡುತ್ತಿರಲಿಲ್ಲ. ಜನರೊಂದಿಗೆ ಸರಿಯಾಗಿ ಬೆರೆಯುತ್ತಲೂ ಇರಲಿಲ್ಲ. ತನ್ನ ಮನೆಗೆ ತೆರಳಿ ಐಎಸ್ ಐಎಸ್ ಗೆ ಸಂಬಂಧಿಸಿದ ಕೆಲಸ ಮಾಡಿಕೊಡುತ್ತ ಜನರ ಎದುರು ಮುಗ್ಧನಂತೆ ವರ್ತಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications